ಸೆ.10-11: ಸಂತ ಅಲೋಶಿಯಸ್ ಕಾಲೇಜಿನಲ್ಲಿ ರಾಷ್ಟ್ರ ಮಟ್ಟದ ವಿಚಾರ ಸಂಕಿರಣ

Update: 2018-09-07 10:37 GMT

ಮಂಗಳೂರು, ಸೆ.7: ನಗರದ ಸಂತ ಅಲೋಶಿಯಸ್ ಕಾಲೇಜಿನಲ್ಲಿ ‘ವಿಕಿರಣಶೀಲ ವಸ್ತುಗಳು ಮತ್ತು ವಿಕಿರಣದ ಉಪಯೋಗಗಳು’ ಎಂಬ ವಿಷಯದಲ್ಲಿ ಎರಡು ದಿನಗಳ ರಾಷ್ಟ್ರ ಮಟ್ಟದ ವಿಚಾರ ಸಂಕಿರಣವನ್ನು ಸೆ.10 ಮತ್ತು 11ರಂದು ಆಯೋಜಿಸಲಾಗಿದೆ.

ಸುದ್ದಿಗೋಷ್ಠಿಯಲ್ಲಿಂದು ಈ ವಿಷಯ ತಿಳಿಸಿದ ಕಾಲೇಜಿನ ಪ್ರಾಂಶುಪಾಲ ರೆ.ಡಾ.ಪ್ರವೀಣ್ ಮಾರ್ಟಿಸ್, ನ್ಯಾಷನಲ್ ಅಸೋಸಿಯೇಶನ್ ಫಾರ್ ಅಪ್ಲಿಕೇಶನ್ ಆಫ್ ರೇಡಿಯೋ ಐಸೊಟೋಪ್ ಆಂಡ್ ರೇಡಿಯೇಶನ್ ಸಹಯೋಗದೊಂದಿಗೆ ಕಾಲೇಜಿನ ಎಲ್.ಎಫ್.ರಸ್ಕೀನಾ ಸಭಾಂಗಣದಲ್ಲಿ ವಿಚಾರ ಸಂಕಿರಣ ನಡೆಯಲಿದೆ ಎಂದರು.

ವಿಚಾರ ಸಂಕಿರಣದಲ್ಲಿ ವಿಕಿರಣಶೀಲ ವಸ್ತುಗಳು ಮತ್ತು ವಿಕಿರಣದ ಉಪಯೋಗಗಳಲ್ಲಿ ಪ್ರಮುಖವಾಗಿ ಕೈಗಾರಿಕೆ, ಆರೋಗ್ಯ ಮತ್ತು ಕೃಷಿ ಕ್ಷೇತ್ರಗಲಲ್ಲಿ ಅವುಗಳ ಮಹತ್ವದ ಬಗ್ಗೆ ಚರ್ಚಿಸಲಾಗುವುದು. ಸೆ.10ರಂದು 9 ಗಂಟೆಗೆ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಕಾರ್ಯಕ್ರಮ ಉದ್ಘಾಟಿಸುವರು. ಕೇಂದ್ರ ಸರಕಾರದ ಅಣುಶಕ್ತಿ ನಿಯಂತ್ರ ಮಂಡಳಿಯ ಅಧ್ಯಕ್ಷ ಎಸ್.ಎ.ಭಾರಧ್ವಾಜ್ ಹಾಗೂ ದೆಹಲಿ ವಿಶ್ವವಿದ್ಯಾಲಯದ ಮಿರಾಂಡ ಮಹಿಳಾ ಕಾಲೇಜಿನ ಪ್ರಾಂಶುಪಾಲರು ಹಾಗೂ ಕೇಂದ್ರ ಸರಕಾರದ ಸಚಿವ ಸಂಪುಟ ಸಲಹಾ ಮಂಡಳಿಯ ಸದಸ್ಯೆ ಡಾ.ಪ್ರತಿಭಾ ಜೋಲಿ ಅತಿಥಿಗಳಾಗಿ ಭಾಗವಹಿಸುವರು. ಸಂತ ಅಲೋಶಿಯಸ್ ಸಮೂಹ ಸಂಸ್ಥೆಗಳ ಮುಖ್ಯಸ್ಥ ರೆ. ಡಾ. ಡೈನೇಶಿಯಸ್ ವಾಸ್ ಅಧ್ಯಕ್ಷತೆ ವಹಿಸಲಿರುವರು ಎಂದು ಅವರು ವಿವರ ನೀಡಿದರು.

ಕಾರ್ಯಕ್ರಮದ ಅಂಗವಾಗಿ ಸೆ.11ರಂದು ಸಂಜೆ 5 ಗಂಟೆಗೆ ಪರಮಾಣು ಶಕ್ತಿಯ ಬಗ್ಗೆ ಸಾರ್ವಜನಿಕ ಗ್ರಹಿಕೆಗಳು- ಮಿಥ್ಯೆ ಮತ್ತು ವಾಸ್ತವ ಎಂಬ ವಿಷಯದಲ್ಲಿ ಸಾರ್ವಜನಿಕ ಉಪನ್ಯಾಸ ಆಯೋಜಿಸಲಾಗಿದೆ. ಭಾರತ ಸರಕಾರದ ಸಾರ್ವಜನಿಕ ಜಾಗೃತಿ ವಿಭಾಗದ ಮಾಜಿ ಮುಖ್ಯಸ್ಥ ಎಸ್.ಕೆ. ಮಲ್ಹೋತ್ರಾ ಉಪನ್ಯಾಸ ನೀಡಲಿದ್ದು, ಸಾರ್ವಜನಿಕರಿಗೆ ಮುಕ್ತ ಪ್ರವೇಶವಿರುತ್ತದೆ ಎಂದು ರೆ.ಡಾ. ಪ್ರವೀಣ್ ಮಾರ್ಟಿಸ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಪ್ರೊ. ಪ್ರಕಾಶ್ ಕಾಮತ್, ರೀಟಾ ಕ್ರಾಸ್ತಾ, ಕಾರ್ಯಕ್ರಮ ಸಂಯೋಜಕ ಡಾ. ಚಂದ್ರಶೇಖರ ಶೆಟ್ಟಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News