ಬೆಳ್ತಂಗಡಿ :ತಹಶೀಲ್ದಾರ್ ಗೈರು - 2ನೇ ಬಾರಿಗೆ ರದ್ದಾದ ಸಾಮಾನ್ಯ ಸಭೆ

Update: 2018-09-07 11:42 GMT

ಬೆಳ್ತಂಗಡಿ, ಸೆ. 7: ಬೆಳ್ತಂಗಡಿ ತಾ.ಪಂ.ಸಭೆಯಲ್ಲಿ ಕಂದಾಯ ಇಲಾಖೆಗೆ ಸಂಬಂಧಪಟ್ಟ ಸಮಸ್ಯೆಗಳ ಇತ್ಯರ್ಥಕ್ಕೆ ನಿರ್ಣಯ ತೆಗೆದುಕೊಂಡರೂ ಸಮಸ್ಯೆಯ ಬಗೆಹರಿದಿಲ್ಲ ಎಂದು ಸದಸ್ಯರು ಸಾಮಾನ್ಯ ಸಭೆಗೆ ತಹಶೀಲ್ದಾರ್ ಬರಬೇಕೆಂದು ಆಗ್ರಹಿಸಿದರೂ, ತಹಶೀಲ್ದಾರ್ ಸಭೆಗೆ ಬಾರದೆ ಸಾಮಾನ್ಯ ಸಭೆ 2ನೇ ಬಾರಿಗೆ ರದ್ದಾದ ಘಟನೆ ಶುಕ್ರವಾರ ನಡೆದಿದೆ. 

ಈ ಹಿಂದೆ ಆ. 30ರಂದು ಸಾಮಾನ್ಯ ಸಭೆ ನಿಗದಿಯಾಗಿ ಅಧ್ಯಕ್ಷರು ಸಭೆ ಆರಂಭಿಸಿದರೂ ಸದಸ್ಯರು ತಮ್ಮ ನಿರ್ಣಯಗಳಿಗೆ ಬೆಲೆಯಿಲ್ಲ ಎಂದು ಸಭೆಗೆ ಗೈರುಹಾಜರಾದ ಹಿನ್ನೆಲೆಯಲ್ಲಿ ಅಧ್ಯಕ್ಷೆ ದಿವ್ಯಜ್ಯೋತಿ ಅವರು ಸಭೆಯನ್ನು ಶುಕ್ರವಾರಕ್ಕೆ ಮುಂದೂಡಿದ್ದರು. ಆದರೆ ಶುಕ್ರವಾರ ತಹಶೀಲ್ದಾರರಿಗೆ ಮುಖ್ಯಮಂತ್ರಿಗಳ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದ ಕಾರಣದಿಂದ ಸಭೆಗೆ ಗೈರುಹಾಜರಾಗಿದ್ದರು. 

ಶುಕ್ರವಾರ ಸಭೆ ಆರಂಭವಾಗುತ್ತಿದ್ದಂತೆ ಇಓ ಕುಸುಮಾಧರ್ ಅವರು ಹಿಂದಿನ ಸಭೆಯ ನಡಾವಳಿ ಓದಲು ಮುಂದಾದಾಗ ವಿಷಯ ಪ್ರಸ್ತಾಪಿಸಿದ ಸದಸ್ಯ ವಿಜಯ ಗೌಡ ಅವರು, ಸಭೆಗೆ ತಹಶೀಲ್ದಾರ್ ಬರಬೇಕು ಎಂದು ಪಟ್ಟು ಹಿಡಿದರು. ಕಂದಾಯ ಇಲಾಖೆಗೆ ಸಂಬಂಧಪಟ್ಟ ವಿಚಾರಗಳೇ ಇಲ್ಲಿ ಪ್ರಮುಖವಾಗಿದ್ದು, ಹೀಗಾಗಿ ಅವರು ಸಭೆಗೆ ಬರಬೇಕು ಎಂದು ಆಗ್ರಹಿಸಿದರು. 

ಇದಕ್ಕೆ ಸದಸ್ಯರಾದ ಜೋಯಲ್ ಮೆಂಡೊನ್ಸಾ, ಸುಧಾಕರ್, ಧನಲಕ್ಷ್ಮೀ, ಶಶಿಧರ, ಲಕ್ಷ್ಮೀನಾರಾಯಣ ಮೊದಲಾದವರು ಧ್ವನಿಗೂಡಿಸಿದರು. ತಾ.ಪಂ.ಕಚೇರಿ ಸಿಬಂದಿಯೊಬ್ಬರು ಪ್ರತಿಯೊಬ್ಬರ ಬಳಿಯೂ ಹಣ ಕೇಳುತ್ತಿದ್ದಾರೆ ಎಂದು ನೇರವಾಗಿ ಆರೋಪಿಸಿದರು. 94ಸಿ ಯೋಜನೆಗೆ ಅರ್ಜಿ ಸಲ್ಲಿಸಿ ಫಲಾನುಭವಿಗಳು ಅಲೆದಾಡುವಂತಾಗಿದೆ ಎಂದರು. 

ಬಳಿಕ ಅಧ್ಯಕ್ಷರು ತಹಶೀಲ್ದಾರ್ ಅವರನ್ನು ಸಂಪರ್ಕಿಸಿದಾಗ, ಸಿಎಂ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಭಾಗವಹಿಸಲು ಆಗುತ್ತಿಲ್ಲ. ಹೀಗಾಗಿ ಕಂದಾಯಾಕಾರಿಯವರನ್ನು ಕಳಿಹಿಸುವುದಾಗಿ ತಿಳಿಸಿದರು. ಬಳಿಕ ಕಂದಾಯಾಧಿಕಾರಿಯವರು ಸಭೆಗೆ ಬಂದರೂ, ಅವರಿಗೆ ಕೆಲವೊಂದು ವಿಚಾರಗಳ ಕುರಿತು ಮಾಹಿತಿಯಿಲ್ಲದ ಹಿನ್ನೆಲೆಯಲ್ಲಿ ಸಭೆಯನ್ನು ಮುಂದೂಡುವಂತೆ ಆಗ್ರಹಿಸಿದರು. 

ಆರಂಭದಲ್ಲಿ ಸಭೆಯನ್ನು ಮುಂದೂಡುವುದಕ್ಕೆ ಅಧ್ಯಕ್ಷರು ಹಿಂದೇಟು ಹಾಕಿದರೂ, ಬಳಿಕ ಸದಸ್ಯರು ಪಟ್ಟು ಸಡಿಲಿಸದ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ಸಭೆಯನ್ನು ಮುಂದೂಡಿದರು. ಸದಸ್ಯ ಗೋಪಿನಾಥ್ ನಾಯಕ್ ಸೇರಿದಂತೆ ಇತರ ಸದಸ್ಯರು ವಿವಿಧ ವಿಚಾರಗಳ ಕುರಿತು ಚರ್ಚೆ ನಡೆಸಿದರು. 

ವೇದಿಕೆಯಲ್ಲಿ ತಾ.ಪಂ.ಉಪಾಧ್ಯಕ್ಷೆ ವೇದಾವತಿ, ಸ್ಥಾಯಿ ಸಮಿತಿ ಅಧ್ಯಕ್ಷ ವಿ.ಟಿ.ಸೆಬಾಸ್ಟಿನ್ ಉಪಸ್ಥಿತರಿದ್ದರು. ಸಭೆಯ ಆರಂಭದಲ್ಲಿ ಮಾಜಿ ಪ್ರಧಾನಿ ದಿ.ಅಟಲ್ ಬಿಹಾರಿ ವಾಜಪೇಯಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, ವಾಜಪೇಯಿ ಹಾಗೂ ನೆರೆಯಿಂದ ಪ್ರಾಣ ಕಳೆದುಕೊಂಡವರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು. ಸುಮಾರು 2 ಗಂಟೆಗಳ ವಿವಿಧ ಇಲಾಖೆಗಳ ಅಧಿಕಾರಿಗಳು ಸುಮ್ಮನೆ ಕುಳಿತು ತೆರಳಿದರು. 

ಕಂದಾಯ ಇಲಾಖೆ ಸಭೆ
ಶಾಸಕರು ಈ ಹಿಂದೆ ಕೆಡಿಪಿ ಸಭೆ ನಡೆಸಿ ಕಂದಾಯ ಇಲಾಖೆಯ ಅಧಿಕಾರಿಗಳ ಜತೆ ಮಾತುಕತೆ ನಡೆಸಿದ್ದಾರೆ. ಹೀಗಾಗಿ ಮುಂದೆ ಶಾಸಕರು ಹಾಗೂ ತಹಶೀಲ್ದಾರ್ ಅವರ ಸಮ್ಮುಖದಲ್ಲಿ ಕಂದಾಯ ಇಲಾಖೆಗೆ ಸಂಬಂಧಪಟ್ಟ ವಿಚಾರಗಳ ಸಭೆ ನಡೆಸಿದ ಬಳಿಕವೇ ತಾ.ಪಂ.ಸಾಮಾನ್ಯ ಸಭೆಯ ದಿನಾಂಕ ನಿಗದಿಪಡಿಸೋಣ ಎಂದು ಅಧ್ಯಕ್ಷೆ ದಿವ್ಯಜ್ಯೋತಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News