ಅಲಸಂಡೆಯ ಅದ್ಭುತ ಆರೋಗ್ಯಲಾಭಗಳು ಗೊತ್ತೇ....?

Update: 2018-09-07 13:38 GMT

ಅಲಸಂಡೆ ಯಾರಿಗೆ ಇಷ್ಟವಿಲ್ಲ. ನಾಲಿಗೆಗೆ ತುಂಬ ರುಚಿಕರವಾದ ಅದು ಅಷ್ಟೇ ಆರೋಗ್ಯಲಾಭಗಳನ್ನು ನಮ್ಮ ಶರೀರಕ್ಕೂ ನೀಡುತ್ತದೆ ಎನ್ನುವುದು ಹೆಚ್ಚಿನವರಿಗೆ ತಿಳಿದಂತಿಲ್ಲ. ಇಲ್ಲಿದೆ ಆ ಕುರಿತು ಮಾಹಿತಿ....

 ಅರ್ಧ ಕಪ್ ಅಥವಾ 83 ಗ್ರಾಂ ಅಲಸಂಡೆಯಲ್ಲಿ 20.39 ಗ್ರಾಂ ಕಾರ್ಬೊಹೈಡ್ರೇಟ್‌ಗಳು,7.5 ಗ್ರಾಂ ನಾರು,2.8 ಎಂಜಿ ವಿಟಾಮಿನ್ ಕೆ,1.81 ಎಂಜಿ ಕಬ್ಬಿಣ,23 ಎಂಜಿ ಕ್ಯಾಲ್ಸಿಯಂ,60 ಎಂಜಿ ಮ್ಯಾಗ್ನೀಷಿಯಂ,1 ಎಂಜಿ ಸೋಡಿಯಂ,120 ಎಂಜಿ ರಂಜಕ,305 ಎಂಜಿ ಪೊಟ್ಯಾಷಿಯಂ,128 ಎಂಸಿಜಿ ಫಾಲೇಟ್,0.434 ಎಂಜಿ ನಿಯಾಸಿನ್ ಮತ್ತು 0.21 ಎಂಜಿ ಥಿಯಾಮಿನ್ ಗಳಿರುತ್ತವೆ,ಜೊತೆಗೆ ಇದರಲ್ಲಿ ಕ್ಯಾಲರಿಗಳು ಕಡಿಮೆ ಪ್ರಮಾಣದಲ್ಲಿವೆ.

ಹೃದಯದ ಆರೋಗ್ಯವನ್ನು ಹೆಚ್ಚಿಸುತ್ತದೆ

ಹೃದಯದ ಆರೋಗ್ಯವನ್ನು ಕಾಯ್ದುಕೊಳ್ಳಲು ಮತ್ತು ಹೃದಯ ರಕ್ತನಾಳ ಕಾಯಿಲೆಗಳಿಂದ ದೂರವಿರಲು ನಿಯಮಿತವಾಗಿ ಪೊಟ್ಯಾಷಿಯಂ ಸೇವನೆ ಮುಖ್ಯವಾಗಿದೆ. ಕಡಿಮೆ ಕೊಬ್ಬುಗಳು ಮತ್ತು ಕ್ಯಾಲರಿಗಳಿರುವ ಹೃದಯಕ್ಕೆ ಆರೋಗ್ಯಕರವಾದ ಆಹಾರಗಳನ್ನು ಸೇವಿಸಬೇಕು. ಅಲಸಂಡೆ ಈ ಎಲ್ಲ ಗುಣಗಳನ್ನು ಹೊಂದಿರುವುದರಿಂದ ಹೃದಯದ ಆರೋಗ್ಯಕ್ಕೆ ಸಂಬಂಧಿಸಿದಂತೆ ಅತ್ಯುತ್ತಮ ಆಹಾರವಾಗಿದೆ.

ಚರ್ಮ,ಉಗುರು,ಸ್ನಾಯು ಇತ್ಯಾದಿಗಳನ್ನು ಬಲಗೊಳಿಸುತ್ತದೆ

ಪ್ರೋಟಿನ್‌ಗಳು ನಮ್ಮ ಶರೀರಕ್ಕೆ ಅತ್ಯಗತ್ಯವಾಗಿದ್ದು, ಅಲಸಂಡೆ ಸಾಕಷ್ಟು ಪ್ರಮಾಣದಲ್ಲಿ ಪ್ರೋಟಿನ್‌ನ್ನು ಒದಗಿಸುತ್ತದೆ. ಚರ್ಮ,ಉಗುರು,ತಲೆಗೂದಲು ಮತ್ತು ಸ್ನಾಯುಗಳನ್ನು ಬಲಗೊಳಿಸಲು ಪ್ರೋಟಿನ್ ಅಗತ್ಯವಾಗಿದೆ,ಜೊತೆಗೆ ಸವಕಳಿಯಿಂದ ಜೀವಕೋಶಗಳಿಗೆ ಆಗಿರುವ ಹಾನಿಯನ್ನೂ ಅದು ನಿವಾರಿಸುತ್ತದೆ.

ಕಣ್ಣಿನ ಆರೋಗ್ಯವನ್ನು ಹೆಚ್ಚಿಸುತ್ತದೆ

ಅಲಸಂಡೆ ವಿಟಾಮಿನ್ ಎ ಅನ್ನು ಒದಗಿಸುವ ಮತ್ತು ಕಣ್ಣುಗಳ ಅಕ್ಷಿಪಟಲದಲ್ಲಿ ವರ್ಣದ್ರವ್ಯಗಳನ್ನು ಉತ್ಪಾದಿಸುವ ಮೂಲಕ ಕಣ್ಣುಗಳ ಆರೋಗ್ಯವನ್ನು ಹೆಚ್ಚಿಸುವಲ್ಲಿ ನೆರವಾಗುತ್ತದೆ. ಪಾಲಕ್,ಬ್ರೊಕೊಲಿ ಇತ್ಯಾದಿಗಳಿಗಿಂತ ಹೆಚ್ಚಿನ ವಿಟಾಮಿನ್ ಎ ಅನ್ನು ಅಲಸಂಡೆಯು ನಮ್ಮ ಶರೀರಕ್ಕೆ ಒದಗಿಸುತ್ತದೆ. ಅದು ಚರ್ಮದ ಮತ್ತು ಲೋಳೆ ಪದರಗಳ ಆರೋಗ್ಯವನ್ನು ಕಾಯ್ದುಕೊಳ್ಳಲೂ ನೆರವಾಗುತ್ತದೆ.

ಪಚನಕ್ರಿಯೆಯನ್ನು ಉತ್ತಮಗೊಳಿಸುತ್ತದೆ

ಅಲಸಂಡೆಯಲ್ಲಿ ಹೇರಳವಾಗಿರುವ ನಾರು ಅಲ್ಪಾವಧಿಯಲ್ಲಿ ಕರುಳಿನ ಚಲನವಲನವನ್ನು ಹೆಚ್ಚಿಸುವಲ್ಲಿ ನೆರವಾಗುತ್ತದೆ. ಸಣ್ಣ ಮತ್ತು ದೊಡ್ಡಕರುಳಿನಲ್ಲಿ ಸಂಗ್ರಹಗೊಂಡಿರುವ ಕೊಲೆಸ್ಟ್ರಾಲ್‌ನ್ನು ನಿವಾರಿಸುವ ಮೂಲಕ ಹೃದಯಾಘಾತ, ಪಾರ್ಶ್ವವಾಯು ಮತ್ತು ಎದೆನೋವಿನಂತಹ ಹೃದಯ ಸಮಸ್ಯೆಗಳನ್ನುಂಟು ಮಾಡುವ ಅಪಧಮನಿಕಾಠಿಣ್ಯದ ಅಪಾಯವನ್ನು ಕಡಿಮೆಗೊಳಿಸುತ್ತದೆ.

ಮೇದೋಜ್ಜೀರಕ ಗ್ರಂಥಿಯ ಕ್ಯಾನ್ಸರ್ ವಿರುದ್ಧ ಹೋರಾಡುತ್ತದೆ

ಫಾಲೇಟ್ ಸಮೃದ್ಧವಾಗಿ ಹೊಂದಿರುವ ಆಹಾರಗಳ ಸೇವನೆಯು ಮೇದೋಜ್ಜೀರಕ ಗ್ರಂಥಿಯ ಕ್ಯಾನ್ಸರ್‌ನ ಅಪಾಯವನ್ನು ಕಡಿಮೆ ಮಾಡುತ್ತದೆ. ಅಲಸಂಡೆ ಫಾಲೇಟನ್ನು ಒಳಗೊಂಡಿರುವುದರಿಂದ ಕ್ಯಾನ್ಸರ್‌ನ್ನು ತಡೆಯಲು ನೆರವಾಗುತ್ತದೆ.

ಮಧುಮೇಹವನ್ನು ನಿಯಂತ್ರಿಸುತ್ತದೆ

ಅಲಸಂಡೆಯಲ್ಲಿರುವ ನಾರು ಟೈಪ್ 1 ಮಧುಮೇಹಿಗಳಲ್ಲಿ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ತಗ್ಗಿಸುವಲ್ಲಿ ನೆರವಾಗುತ್ತದೆ. ಇನ್ಸುಲಿನ್ ಮತ್ತು ಲಿಪಿಡ್‌ಗಳ ಮಟ್ಟಗಳನ್ನೂ ಅದು ಹೆಚ್ಚಿಸುತ್ತದೆ. ಟೈಪ್ 2 ಮಧುಮೇಹವನ್ನು ಹೊಂದಿರುವವರೂ ಅಲಸಂಡೆಯನ್ನು ತಮ್ಮ ಆಹಾರದಲ್ಲಿ ಬಳಸಿಕೊಳ್ಳುವಂತೆ ತಜ್ಞರು ಶಿಫಾರಸು ಮಾಡಿದ್ದಾರೆ. ಮಧುಮೇಹಿಗಳು ತಮ್ಮ ವೈದ್ಯರ ಸಲಹೆಯನ್ನು ಪಡೆದುಕೊಂಡು ಅಲಸಂಡೆಯನ್ನು ತಮ್ಮ ಆಹಾರದಲ್ಲಿ ಸೇರಿಸಕೊಳ್ಳಬಹುದಾಗಿದೆ.

ದೇಹತೂಕವನ್ನು ಇಳಿಸಲು ನೆರವಾಗುತ್ತದೆ

ಅಲಸಂಡೆಯಲ್ಲಿರುವ ನಾರು ತುಂಬ ಹೊತ್ತಿನವರೆಗೆ ಹೊಟ್ಟೆ ತುಂಬಿದ ಅನುಭವವನ್ನುಂಟು ಮಾಡುತ್ತದೆ ಹಾಗೂ ವ್ಯಕ್ತಿಯು ಹೆಚ್ಚಿನ ಆಹಾರಗಳನ್ನು ಮತ್ತು ಕ್ಯಾಲೊರಿಗಳನ್ನು ಸೇವಿಸುವ ಪ್ರವೃತ್ತಿಗೆ ಕಡಿವಾಣ ಹಾಕುತ್ತದೆ. ಅದು ಬೊಜ್ಜನ್ನು ದೂರವಿಡುವ ಮೂಲಕ ನಮಗೆ ಹೆಚ್ಚಿನ ಶಕ್ತಿಯನ್ನು ನೀಡುತ್ತದೆ.

ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ

ಅಧಿಕ ರಕ್ತದೊತ್ತಡವು ಹೃದ್ರೋಗ,ಪಾರ್ಶ್ವವಾಯುಗಳಂತಹ ಗಂಭೀರ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಅಲಸಂಡೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿರುವ ಪೊಟ್ಯಾಷಿಯಂ ರಕ್ತದೊತ್ತಡವನ್ನು ನೈಸರ್ಗಿಕವಾಗಿ ನಿಯಂತ್ರಿಸಲು ನೆರವಾಗುತ್ತದೆ.

ರಕ್ತಹೀನತೆಗೆ ಚಿಕಿತ್ಸೆ ನೀಡುತ್ತದೆ

ಹಿಮೊಗ್ಲೋಬಿನ್ ಕೊರತೆಯಿಂದ ಬಳಲುತ್ತಿರುವವರು ಅಲಸಂಡೆಯಂತಹ ಸಮೃದ್ಧ ಕಬ್ಬಿಣವನ್ನು ಹೊಂದಿರುವ ಆಹಾರಗಳನ್ನು ಸೇವಿಸುವುದು ಅಗತ್ಯವಾಗುತ್ತದೆ. ಅಲಸಂಡೆಯನ್ನು ನಿಯಮಿತವಾಗಿ ಸೇವಿಸುವುದರಿಂದ ರಕ್ತದಲ್ಲಿಯ ಕಬ್ಬಿಣಾಂಶವು ಹೆಚ್ಚುತ್ತದೆ ಮತ್ತು ರಕ್ತಹೀನತೆಯು ನಿವಾರಣೆಯಾಗುತ್ತದೆ.

ಮೂಳೆಗಳ ಆರೋಗ್ಯವನ್ನು ಹೆಚ್ಚಿಸುತ್ತದೆ

ನಮಗೆ ವಯಸ್ಸಾಗುತ್ತಿದ್ದಂತೆ ಮೂಳೆಗಳ ಆರೋಗ್ಯವೂ ಹದಗೆಡುತ್ತದೆ ಮತ್ತು ಮೂಳೆ ಮುರಿತದ ಅಪಾಯ ಹೆಚ್ಚುತ್ತದೆ. ಅಲಸಂಡೆಯಲ್ಲಿರುವ ಕ್ಯಾಲ್ಸಿಯಂ, ರಂಜಕ,ಪೊಟ್ಯಾಷಿಯಂ,ಸೋಡಿಯಂ ಇತ್ಯಾದಿ ಖನಿಜಗಳು ಮೂಳೆಯ ಸಾಂದ್ರತೆಯನ್ನು ಹೆಚ್ಚಿಸುವಲ್ಲಿ ನೆರವಾಗುತ್ತವೆ.

ಇವೆಲ್ಲ ಆರೋಗ್ಯಲಾಭಗಳನ್ನು ನೀಡುವ ಜೊತೆಗೆ ಅಲಸಂದೆಯು ನಮ್ಮ ಶರೀರಕ್ಕೆ ಸಾಕಷ್ಟು ಪೌಷ್ಟಿಕಾಂಶಗಳನ್ನು ಒದಗಿಸುವ ಮೂಲಕ ಅಕಾಲ ವಯಸ್ಸಾಗುವಿಕೆಯನ್ನು ತಡೆಯುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News