ಮೆಹುಲ್ ಚೋಕ್ಸಿ ಪ್ರಕರಣದಲ್ಲಿ ಸಿಬಿಐ ಅಧಿಕಾರಿಗಳಿಗೆ ಹೊಸ ಆತಂಕ

Update: 2018-09-07 14:28 GMT

 ಹೊಸದಿಲ್ಲಿ,ಸೆ.7: ಪಂಜಾಬ್ ನ್ಯಾಷನಲ್ ಬ್ಯಾಂಕಿಗೆ 13,500 ಕೋ.ರೂ. ವಂಚನೆ ಪ್ರಕರಣದಲ್ಲಿ ಮುಖ್ಯ ಆರೋಪಿಗಳಲ್ಲೋರ್ವನಾಗಿರುವ ದೇಶಭ್ರಷ್ಟ ವಜ್ರಾಭರಣಗಳ ವ್ಯಾಪಾರಿ ಮೆಹುಲ್ ಚೋಕ್ಸಿಯನ್ನು ಭಾರತಕ್ಕೆ ವಾಪಸ್ ಕರೆತರಲು ಇಂಟರ್‌ಪೋಲ್ ನೋಟಿಸ್ ಕೂಡ ನೆರವಾಗದಿರಬಹುದು ಎಂದು ಸಿಬಿಐ ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

ಚೋಕ್ಸಿ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಹೊರಡಿಸುವಂತೆ ಸಿಬಿಐ ಇತ್ತೀಚಿಗೆ ಇಂಟರ್‌ಪೋಲ್‌ಗೆ ಮನವಿ ಸಲ್ಲಿಸಿತ್ತು. ತನ್ನ ವಿರುದ್ಧದ ಪ್ರಕರಣಗಳು ರಾಜಕೀಯಪ್ರೇರಿತವಾಗಿವೆ ಎಂಬ ಚೋಕ್ಸಿ ಆರೋಪಗಳನ್ನು ಅದು ಬಲವಾಗಿ ನಿರಾಕರಿಸಿದೆ.

 ಚೋಕ್ಸಿಯ ಈ ಆರೋಪಗಳ ಬಳಿಕ ರೆಡ್ ಕಾರ್ನರ್ ನೋಟಿಸ್ ಹೊರಡಿಸುವ ಬಗ್ಗೆ ತನ್ನ ನಿರ್ಧಾರವನ್ನು ಇಂಟರ್‌ಪೋಲ್ ತಡೆಹಿಡಿದಿದೆ. ಭಾರತದಲ್ಲಿಯ ಜೈಲುಗಳ ಸ್ಥಿತಿ,ತನ್ನ ವೈಯಕ್ತಿಕ ಸುರಕ್ಷತೆ ಮತ್ತು ಆರೋಗ್ಯ ಇತ್ಯಾದಿಗಳ ಬಗ್ಗೆಯೂ ಚೋಕ್ಸಿ ಪ್ರಶ್ನೆಗಳನ್ನೆತ್ತಿದ್ದು,ಐವರು ಸದಸ್ಯರ ಇಂಟರ್‌ಪೋಲ್ ಸಮಿತಿ ನ್ಯಾಯಾಲಯವು ಮುಂದಿನ ತಿಂಗಳು ಉಭಯ ಕಡೆಗಳ ವಾದಗಳನ್ನು ಆಲಿಸಿದ ಬಳಿಕ ನೋಟಿಸ್‌ನ ಬಗ್ಗೆ ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳಲಿದೆ.

ಬ್ರಿಟನ್‌ನಲ್ಲಿ ತಲೆಮರೆಸಿಕೊಂಡಿರುವ ಪ್ರಕರಣದ ಇನ್ನೋರ್ವ ಪ್ರಮುಖ ಆರೋಪಿ ನೀರವ್ ಮೋದಿ ವಿರುದ್ಧ ಇಂಟರ್‌ಪೋಲ್ ಈಗಾಗಲೇ ರೆಡ್ ಕಾರ್ನರ್ ನೋಟಿಸ್ ಹೊರಡಿಸಿದೆ.

ಸಿಬಿಐ ಮೋದಿಯನ್ನು ಭಾರತಕ್ಕೆ ಗಡಿಪಾರು ಮಾಡುವಂತೆ ಬ್ರಿಟನ್‌ನ್ನು ಕೋರಿಕೊಂಡಿದೆ.

 ಚೋಕ್ಸಿ ತನ್ನ ಪರಾರಿಗೆ ಬಹಳ ಮೊದಲೇ ವ್ಯವಸ್ಥಿತ ಸಂಚನ್ನು ರೂಪಿಸಿಕೊಂಡಂತಿದೆ. ಕಳೆದ ವರ್ಷವೇ ಆತ ಆಂಟಿಗುವಾ ಮತ್ತು ಬರ್ಬುಡಾದ ಪೌರತ್ವವನ್ನು ಪಡೆದುಕೊಂಡಿದ್ದಾನೆ ಎಂದು ತಿಳಿಸಿದ ಅಧಿಕಾರಿಗಳು,ಆತ ಈಗ ಆಂಟಿಗುವಾ ಕಾನೂನುಗಳಿಗೆ ಒಳಪಟ್ಟಿದ್ದು,ರೆಡ್‌ಕಾರ್ನರ್ ನೋಟಿಸ್‌ನಿಂದ ಯಾವುದೇ ನೆರವು ದೊರೆಯುವ ಸಾಧ್ಯತೆಯಿಲ್ಲ ಎಂದು ಅಧಿಕಾರಿಗಳು ಹೇಳಿದರು.

ಆಂಟಿಗುವಾ ಕೂಡ ಚೋಕ್ಸಿಯನ್ನು ಭಾರತಕ್ಕೆ ಗಡಿಪಾರು ಮಾಡಲು ಹಿಂದೇಟು ಹಾಕುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News