ರಾಜ್ಯ ಕುಡಿಯುವ ನೀರು ಯೋಜನೆಗೆ 60-70 ಸಾವಿರ ಕೋಟಿ ಡಿಪಿಆರ್ : ಸಿಎಂ ಕುಮಾರಸ್ವಾಮಿ

Update: 2018-09-07 16:12 GMT

ಉಡುಪಿ, ಸೆ.7: ಬಹುಗ್ರಾಮ ಕುಡಿಯುವ ನೀರು ಯೋಜನೆಯಡಿ ಇಡೀ ರಾಜ್ಯದ ಎಲ್ಲಾ ಹಳ್ಳಿಗಳಿಗೂ ಕುಡಿಯುವ ನೀರು ಸಿಗುವಂತಾಗಲು 60ರಿಂದ 70 ಸಾವಿರ ಕೋಟಿ ರೂ.ಗಳ ಅಗತ್ಯವಿದ್ದು, ಇದಕ್ಕಾಗಿ ವಿಸ್ತೃತ ಯೋಜನಾ ವರದಿಯನ್ನು (ಡಿಪಿಆರ್) ಸಿದ್ಧಪಡಿಸುವಂತೆ ಸೂಚಿಸಲಾಗಿದೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ಮಣಿಪಾಲದ ಜಿಪಂ ಸಭಾಂಗಣದಲ್ಲಿ ಶುಕ್ರವಾರ ವಿವಿಧ ಇಲಾಖಾ ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ಉಪಸ್ಥಿತಿಯೊಂದಿಗೆ ಪ್ರಗತಿ ಪರಿಶೀಲನೆ ನಡೆಸಿದ ಬಳಿಕ ಕರೆದ ಸುದ್ದಿಗೋಷ್ಠಿಯಲ್ಲಿ ಸಭೆಯ ವಿವರಗಳನ್ನು ನೀಡುತ್ತಾ ಅವರು ಈ ವಿಷಯ ಪ್ರಕಟಿಸಿದರು.

ಇಷ್ಟೊಂದು ಬೃಹತ್ ಯೋಜನೆಗೆ ಬೇಕಾದ ಸಂಪನ್ಮೂಲದ ಕ್ರೂಢೀಕರಣಕ್ಕೆ ಮುಂದಿನ ನಾಲ್ಕು ವರ್ಷಗಳಲ್ಲಿ ಕ್ರಮಗಳನ್ನು ಕೈಗೊಂಡ ಬಳಿಕ ಯೋಜನೆಯನ್ನು ಅನುಷ್ಠಾನಗೊಳಿಸುವುದಾಗಿ ಅವರು ತಿಳಿಸಿದರು.

ಇತ್ತೀಚಿನ ಪ್ರಾಕೃತಿಕ ವಿಕೋಪದಿಂದ 141 ಕೋಟಿ ರೂ.ಗಳಿಗೂ ಅಧಿಕ ನಷ್ಟವಾಗಿರುವ ಬಗ್ಗೆ ವರದಿಯನ್ನು ನೀಡಲಾಗಿದೆ. ಒಂದು ತಿಂಗಳ ಹಿಂದೆ ಜಿಲ್ಲೆಯಲ್ಲಿ ಪ್ರಾಕೃತಿಕ ವಿಕೋಪದಿಂದ 75 ಕೋಟಿ ರೂ.ಗಳಷ್ಟು ನಷ್ಟವಾಗಿರುವ ಬಗ್ಗೆ ಜಿಲ್ಲಾಧಿಕಾರಿಯವರು ಜಿಲ್ಲಾ ಉಸ್ತುವಾರಿ ಸಚಿವೆ ಜಯಮಾಲ ಮೂಲಕ ಪ್ರಸ್ತಾಪ ಕಳುಹಿಸಿದ್ದರು. ಇದರಲ್ಲಿ ಈಗಾಗಲೇ 14 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ ಎಂದರು.

70-100 ಕೋಟಿ ಪರಿಹಾರಕ್ಕೆ ಯತ್ನ: ಇದೀಗ ಜಿಲ್ಲೆಯಲ್ಲಿ ಆಗಿರುವ ಹಾನಿಯಲ್ಲಿ ಪ್ರಮುಖ ರಸ್ತೆಗಳಿಗಾಗಿರುವ ಹಾನಿ, ಸೇತುವೆ, ಕಾಲುಸಂಕ ಹಾಗೂ ಸರಕಾರಿ ಶಾಲಾ ಕಟ್ಟಡಗಳ ದುರಸ್ತಿಗೆ ಮೊದಲ ಆದ್ಯತೆ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಅಲ್ಲದೇ ವಾಸ್ತವ್ಯದ ಮನೆಗಳಿಗೆ ಹಾಗೂ ಬೆಳೆ ಹಾನಿಗಳಿಗೆ ಆಗಿರುವ ನಷ್ಟಕ್ಕೆ ಪರಿಹಾರ ನೀಡುವಾಗ ಎನ್‌ಡಿಆರ್ ಮಾರ್ಗಸೂಚಿಗಳನ್ನು ಬದಿಗಿಟ್ಟು ಹೆಚ್ಚಿನ ಪರಿಹಾರ ನೀಡುವಂತೆಯೂ ಸೂಚಿಸಲಾಗಿದೆ. ಈಗಾಗಲೇ ಇದಕ್ಕೆ ಒಂದು ಲಕ್ಷ ರೂ.ವರೆಗೆ ಪರಿಹಾರ ನೀಡಲಾಗಿದೆ ಎಂದು ಕುಮಾರಸ್ವಾಮಿ ಹೇಳಿದರು.

ಜಿಲ್ಲೆಯ ಮೂಲಭೂತ ಸೌಕರ್ಯಗಳಿಗೆ ಅಧಿಕ ಹಾನಿ, ನಷ್ಟವಾಗಿರುವುದರಿಂದ ಉಡುಪಿ ಜಿಲ್ಲೆಗ ಹೆಚ್ಚಿನ ಅನುದಾನ ನೀಡುವಂತೆ ಜನಪ್ರತಿನಿಧಿಗಳು ಮನವಿ ಮಾಡಿದ್ದಾರೆ. ಬೆಂಗಳೂರಿಗೆ ಹೋದ ತಕ್ಷಣ ಆರ್ಥಿಕ ಇಲಾಖೆಯೊಂದಿಗೆ ಚರ್ಚಿಸಿ ಜಿಲ್ಲೆಗೆ 70ರಿಂದ 100 ಕೋಟಿರೂ.ವರೆಗೆ ಪರಿಹಾರ ಒದಗಿಸಲು ಪ್ರಯತ್ನಿಸುವುದಾಗಿ ಸಿಎಂ ಭರವಸೆ ನೀಡಿದರು.

ಹೊಸ ಪಡಿತರ ಚೀಟಿಗಾಗಿ 7000 ಅರ್ಜಿಗಳು ಬಂದಿದ್ದು, ಇದರ ತ್ವರಿತ ವಿಲೇವಾರಿಗೆ ಸಿಬ್ಬಂದಿಗಳ ಕೊರತೆ ಇರುವುದಾಗಿ ತಿಳಿದುಬಂದಿದೆ. ಇದಕ್ಕಾಗಿ ಹೆಚ್ಚುವರಿ ಸಿಬ್ಬಂದಿಗಳ ನೇಮಕಕ್ಕೆ ಜಿಲ್ಲಾಧಿಕಾರಿಗೆ ಅಧಿಕಾರ ನೀಡಿರುವುದಾಗಿ ಅವರು ತಿಳಿಸಿದರು.

ವಾರಾಹಿ ಬೆಂಗಳೂರಲ್ಲಿ ಸಭೆ: ವಾರಾಹಿ ನದಿಯಿಂದ ಉಡುಪಿಗೆ ಕುಡಿಯುವ ನೀರನ್ನು ತರುವ ಬಗ್ಗೆ ಪ್ರಸ್ತಾಪ ಕೇಳಿಬಂದಿದ್ದು, ಈ ಬಗ್ಗೆ ನಗರಾಭಿವೃದ್ಧಿ ಹಾಗೂ ಗ್ರಾಮೀಣಾಭಿವೃದ್ಧಿ ಇಲಾಖಾಧಿಕಾರಿಗಳ ಸಭೆಯನ್ನು ಬೆಂಗಳೂರಿನಲ್ಲಿ ಕರೆದು ಅದರಲ್ಲಿ ಈ ಬಗ್ಗೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳುವು ದಾಗಿ ಮುಖ್ಯಮಂತ್ರಿಗಳು ಹೇಳಿದರು.

ಇತ್ತೀಚಿಗಿನ ಮಳೆಯಲ್ಲಿ ಲೋಕೋಪಯೋಗಿ ಇಲಾಖಾ ರಸ್ತೆಗಳಿಗೆ 23 ಕೋಟಿ ರೂ. ಹಾಗೂ ಗ್ರಾಮೀಣಾಭಿವೃದ್ಧಿ ಇಲಾಖೆಗೆ 14 ಕೋಟಿ ರೂ.ನಷ್ಟವಾಗಿರುವ ಬಗ್ಗೆ ಅಧಿಕಾರಿಗಳು ತಿಳಿಸಿದ್ದು, ರಸ್ತೆ ಸಂಪರ್ಕ ಸರಿಪಡಿಸಲು ಆದ್ಯತೆ ನೀಡುವಂತೆ ತಿಳಿಸಲಾಗಿದೆ.

ಗ್ರಾಮೀಣ ಪ್ರದೇಶಗಳಿಂದ ವಿವಿಧ ಕಾರಣಗಳಿಗೆ ಬರುವ ಹೆಣ್ಣು ಮಕ್ಕಳಿಗಾಗಿ ಉಡುಪಿಯಲ್ಲಿ ಮಹಿಳಾ ಹಾಸ್ಟೆಲ್‌ಗಳನ್ನು ನಿರ್ಮಿಸಲು ಕೂಡಲೇ ಪ್ರಸ್ತಾಪ ಕಳುಹಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ. ಉಡುಪಿ ಜಿಲ್ಲೆಯ ಸುಮಾರು 11,000 ಕೊರಗರಿಗೆ ವಸತಿ ಸಮಸ್ಯೆ ಇದ್ದು, ಇವರಿಗೆ ಮನೆ ಕಟ್ಟಿಕೊಡಲು ಕೂಡಲೇ ಕ್ರಮ ತೆಗೆದುಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.

ಮರಳು ಸಮಸ್ಯೆ ಚರ್ಚೆ: ಸಭೆಯಲ್ಲಿ ಕರಾವಳಿಯ ಮರಳು ಸಮಸ್ಯೆ ಕುರಿತಂತೆ ಸುದೀರ್ಘ ಚರ್ಚೆ ನಡೆದಿದೆ. ಮರಳಿಗಾಗಿ ಕಾನೂನನ್ನು ಸರಳೀಕರಿಸಲು, ಅಕ್ರಮವನ್ನು ತಡೆಯಲು, ಬಡವರಿಗೆ ಸುಲಭದಲ್ಲಿ ಮರಳು ಸಿಗುವಂತಾಗಲು ಕ್ರಮ ತೆಗೆದುಕೊಳ್ಳಬೇಕೆಂದು ಜನಪ್ರತಿನಿಧಿಗಳು ಒತ್ತಾಯಿಸಿದ್ದಾರೆ. ಈ ಬಗ್ಗೆ 7-8 ದಿನಗಳಲ್ಲೇ ಬೆಂಗಳೂರಿನಲ್ಲಿ ಎಲ್ಲರ ಸಭೆ ಕರೆದು ಚರ್ಚಿಸುವುದಾಗಿ ಅವರು ನುಡಿದರು. ಅದೇ ರೀತಿ ಸಾಂಪ್ರದಾಯಿಕ ಮರಳುಗಾರಿಕೆಗೆ ಮತ್ತೆ ಅವಕಾಶ ನೀಡುವುದಾಗಿ ತಿಳಿಸಿದರು.

ಅಕ್ಟೋಬರ್ ಒಳಗೆ ವಿದ್ಯುತ್: ಜಿಲ್ಲೆಯಲ್ಲಿ 3,600 ಬಿಪಿಎಲ್ ಕುಟುಂಬಗಳಿಗೆ ವಿದ್ಯುತ್ ಸಂಪರ್ಕ ದೊರಕಿಲ್ಲ ಎಂದು ತಿಳಿದುಬಂದಿದ್ದು, ಅಕ್ಟೋಬರ್ ತಿಂಗಳ ಕೊನೆಯೊಳಗೆ ಈ ಎಲ್ಲಾ ಮನೆಗಳಿಗೂ ವಿದ್ಯುತ್ ಸಂಪರ್ಕ ಒದಗಿಸುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದರು.
ಬ್ರಹ್ಮಾವರ ಸಕ್ಕರೆ ಕಾರ್ಖಾನೆಯನ್ನು ಪುನರಾರಂಭಿಸಲು ಸರಕಾರ ಸಿದ್ಧವಿದೆ. ಆದರೆ ಇದಕ್ಕಾಗಿ ಬೇಕಷ್ಟು ಕಬ್ಬನ್ನು ಬೆಳೆಯಲು ರೈತರು ಮುಂದೆ ಬರಬೇಕು. ಈಗಾಗಲೇ ವಾರಾಹಿ ನೀರು ಸಿಗುತ್ತಿರುವುದರಿಂದ ರೈತರ ಮನಸ್ಸು ಮಾಡಿದರೆ ಖಂಡಿತ ಸಕ್ಕರೆ ಕಾರ್ಖಾನೆ ತೆರೆಯಲು ಸಿದ್ಧ ಎಂದರು.

ಮೀನುಗಾರರಿಗೆ ಮನೆ ನಿರ್ಮಿಸಲು, ಮಳೆಯಿಂದ ಹಾನಿಗೊಳಗಾದ ಬೋಟುಗಳಿಗೆ ಹೆಚ್ಚಿನ ಪರಿಹಾರ ನೀಡಲು ಸರಕಾರ ಪರಿಶೀಲಿಸಿ ಕ್ರಮಕೈಗೊಳ್ಳಲಿದೆ. ಅದೇ ರೀತಿ ಮೀನುಗಾರರಿಗೆ ವಿಶೇಷ ಪ್ಯಾಕೇಜ್ ಘೋಷಿಸಲು ಸಹ ನಾವು ಸಿದ್ಧವಿದ್ದು, ಶೀಘ್ರವೇ ನಿರ್ಧಾರ ತೆಗೆದುಕೊಳ್ಳುವುದಾಗಿ ತಿಳಿಸಿದರು.
ಜಿಲ್ಲೆಯ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಿ, ಜನರ ವಿಶ್ವಾಸ ಸಂಪಾದಿಸಲು ಸರಕಾರ ಬದ್ಧವಿದೆ. ನಿರುದ್ಯೋಗ ಸಮಸ್ಯೆ ನಿವಾರಣೆಗೆ ಇಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಅವಕಾಶ ಸಿಗಬೇಕು. ಆದರೆ ಇಲ್ಲಿ ಮಾಲಿನ್ಯಕಾರಕ ಉದ್ದಿಮೆಗೆ ಅವಕಾಶವಿಲ್ಲ. ಪ್ರವಾಸೋದ್ಯಮಕ್ಕೂ ವಿಶೇಷ ಆದ್ಯತೆ ನೀಡುವುದಾಗಿ ತಿಳಿಸಿದರು.

ಇತ್ತೀಚೆಗೆ ಜಿಲ್ಲೆಯಲ್ಲಿ ಬಿದ್ದ ಬೂದಿ ಮಳೆಯಲ್ಲಿ ಹಾರುಬೂದಿ ಇರುವುದು ತಜ್ಞರ ಪರೀಕ್ಷೆಯಲ್ಲಿ ಸಾಬೀತಾಗಿರುವುದರಿಂದ ಏನು ಕ್ರಮ ತೆಗೆದುಕೊಳ್ಳುತ್ತೀರಿ ಎಂದು ಪ್ರಶ್ನಿಸಿದಾಗ, ವರದಿ ಬಗ್ಗೆ ಕ್ರಮ ತೆಗೆದುಕೊಳ್ಳುವಂತೆ ಸೂಚಿಸುವುದಾಗಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News