ಆಲ್ವಾರ್ ಪ್ರಕರಣ: ಗುಂಪಿನಿಂದ ಥಳಿಸಿ ಹತ್ಯೆ ಅಲ್ಲ ಎಂದ ಆರೋಪ ಪಟ್ಟಿ !

Update: 2018-09-07 16:12 GMT

ಜೈಪುರ, ಸೆ. 7: ಜಾನುವಾರು ಸಾಗಾಟಗಾರನೆಂದು ಶಂಕಿಸಿ ರಾಜಸ್ಥಾನದ ಆಲ್ವಾರ್‌ನಲ್ಲಿ ಜುಲೈಯಲ್ಲಿ ಗುಂಪೊಂದು ವ್ಯಕ್ತಿಯ ಥಳಿಸಿ ಹತ್ಯೆಗೈದ ಬಳಿಕ ಘಟನಾ ಸ್ಥಳದಿಂದ ಬಂಧಿಸಲಾಗಿದ್ದ ಮೂವರ ಆರೋಪಿಗಳ ವಿರುದ್ಧ ಪೊಲೀಸರು ಆರೋಪ ಪಟ್ಟಿಯಲ್ಲಿ ಕೊಲೆ ಆರೋಪ ಹೊರಿಸಿದ್ದಾರೆ. ಆದರೆ, 28ರ ಹರೆಯದ ಅಕ್ಬರ್ ಖಾನ್ ಸಾವು ಗುಂಪಿನ ಥಳಿತದಿಂದ ಸಂಭವಿಸಿದ್ದಲ್ಲ ಎಂದು ಹೇಳಿದ್ದಾರೆ.

ಜುಲೈ 20ರಂದು ಅಕ್ಬರ್ ಖಾನ್ ಮೇಲೆ ನಡೆದ ದಾಳಿಗೆ ನಾಲ್ವರು ಕಾರಣ ಎಂದು ಪೊಲೀಸರು ಸಲ್ಲಿಸಿದ 25 ಪುಟಗಳ ಆರೋಪ ಪಟ್ಟಿಯಲ್ಲಿ ಹೇಳಲಾಗಿದೆ. ಈ ನಾಲ್ವರು ಆರೋಪಿಗಳಲ್ಲಿ ಓರ್ವನನ್ನು ಇದುವರೆಗೆ ಬಂಧಿಸಿಲ್ಲ. ಇಬ್ಬರ ವಿರುದ್ಧ ಮುಖ್ಯವಾಗಿ ಘಟನೆ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ ಗೋರಕ್ಷಕ ನವಲ್ ಕಿಶೋರ್ ವಿರುದ್ಧ ತನಿಖೆ ಬಾಕಿ ಇದೆ ಎಂದು ಪೊಲೀಸರು ತಿಳಿಸಿದ್ದಾರೆ. ಹರ್ಯಾಣ ನಿವಾಸಿ ಅಕ್ಬರ್ ಖಾನ್ ಹಾಗೂ ಅವರ ಗೆಳೆಯ ಅಸ್ಲಾಂ ಎರಡು ದನಗಳನ್ನು ಅರಣ್ಯ ಪ್ರದೇಶದ ಮೂಲಕ ಕೊಲ್ಗಾಂವ್‌ಗೆ ಒಯ್ಯುತ್ತಿದ್ದರು. ಈ ಸಂದರ್ಭ ಅವರನ್ನು ಜಾನುವಾರು ಕಳ್ಳರು ಎಂದು ಶಂಕಿಸಿ ಗುಂಪೊಂದು ದಾಳಿ ನಡೆಸಿತ್ತು. ಈ ಸಂದರ್ಭ ಅಸ್ಲಾಂ ಗದ್ದೆಯಲ್ಲಿ ಅಡಗಿಕೊಂಡು ಜೀವ ಉಳಿಸಿಕೊಂಡರು. ಆದರೆ, ಅಕ್ಬರ್ ಖಾನ್ ಥಳಿತಕ್ಕೊಳಗಾಗಿ ಮೃತಪಟ್ಟಿದ್ದರು.

ಗಂಭೀರ ಗಾಯಗೊಂಡಿದ್ದ ಅಕ್ಬರ್ ಖಾನ್ ಅವರನ್ನು ಆಸ್ಪತ್ರೆಗೆ ಕೊಂಡೊಯ್ಯುವ ಮುನ್ನ ಅವರು 3 ಗಂಟೆಗಳ ಕಾಲ ಪೊಲೀಸ್ ಕಸ್ಟಡಿಯಲ್ಲಿ ಇದ್ದರು. ಈ ಬಗ್ಗೆ ಈಗಾಗಲೇ ನ್ಯಾಯಾಂಗ ದಂಡಾಧಿಕಾರಿ ತನಿಖೆ ನಡೆಸಿದ್ದಾರೆ. ಪೊಲೀಸರ 25 ಪುಟಗಳ ಆರೋಪಪಟ್ಟಿಯಲ್ಲಿ ಹಲವು ದಾಖಲೆಗಳು ಇವೆ. ಈ ಪ್ರಕರಣದ ಮುಖ್ಯ ಆರೋಪಿಗಳು ಪರಮ್‌ಜಿತ್, ಧರ್ಮೇಂದ್ರ ಹಾಗೂ ನರೇಶ್. ಇತರ ವಿರುದ್ಧ ತನಿಖೆ ಬಾಕಿ ಇದೆ ಎಂದು ಆಲ್ವಾರ್‌ನ ಹಿರಿಯ ಪೊಲೀಸ್ ಅಧಿಕಾರಿ ಅಶೋಕ್ ಚೌಹಾಣ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News