ವಿದೇಶಿ ಸಾಲದ ಮೇಲೆ ಭಾರತಕ್ಕೆ 68,500 ಕೋಟಿ ರೂ. ಹೆಚ್ಚುವರಿ ಹೊರೆ

Update: 2018-09-07 16:13 GMT

ಹೊಸದಿಲ್ಲಿ, ಸೆ.7: ಡಾಲರ್ ಎದುರು ರೂಪಾಯಿ ನಿರಂತರವಾಗಿ ಮೌಲ್ಯ ಕಳೆದುಕೊಳ್ಳುತ್ತಿರುವುದರಿಂದ ಭಾರತ ಪಾವತಿಸಬೇಕಾಗಿರುವ ಅಲ್ಪಾವಧಿ ವಿದೇಶಿ ಸಾಲದ ಮೇಲೆ 68,500 ಕೋಟಿ ರೂ. ಹೆಚ್ಚುವರಿ ಹೊರೆ ಬೀಳಲಿದೆ ಎಂದು ಭಾರತೀಯ ಸ್ಟೇಟ್ ಬ್ಯಾಂಕ್ ತಿಳಿಸಿದೆ. ವಿಸ್ತ್ರತ ಚಾಲ್ತಿ ಖಾತೆ ಕೊರತೆ ಹಾಗೂ ಇತರ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಗುರುವಾರ ಡಾಲರ್ ಎದುರು ರೂಪಾಯಿ ಮೌಲ್ಯ 72ಕ್ಕೆ ತಲುಪಿತ್ತು. ಈ ವರ್ಷ ಡಾಲರ್ ಎದುರು ರೂಪಾಯಿ ವೌಲ್ಯ 73ಕ್ಕೆ ಕುಸಿದರೆ ಮತ್ತು ಭಾರತ ಅತೀಹೆಚ್ಚು ಆಮದು ಮಾಡಿಕೊಳ್ಳುವ ಕಚ್ಚಾತೈಲ ಬೆಲೆ ಪ್ರತಿ ಬ್ಯಾರೆಲ್ 76 ಡಾಲರ್‌ಗೆ ತಲುಪಿದರೆ ಭಾರತ ತೈಲದ ಮೇಲೆ ಮಾಡುವ ವೆಚ್ಚ 45,700 ಕೋಟಿ ರೂ. ಮುಟ್ಟಲಿದೆ ಎಂದು ಎಸ್‌ಬಿಐಯ ಮುಖ್ಯ ಆರ್ಥಿಕ ಸಲಹೆಗಾರ ಸೌಮ್ಯ ಕಾಂತಿ ಘೋಶ್ ತಿಳಿಸಿದ್ದಾರೆ.

ಅನಿವಾಸಿ ಠೇವಣಿಗಳು ಮತ್ತು ಕಂಪೆನಿಗಳು ಪಡೆದುಕೊಂಡಿರುವ ಸಾಗರೋತ್ತರ ವಾಣಿಜ್ಯ ಸಾಲಗಳು ಸೇರಿದಂತೆ ಭಾರತದ ಅಲ್ಪಾವಧಿ ಸಾಲಗಳು 2017ರಲ್ಲಿ 217.6 ಬಿಲಿಯನ್ ಇತ್ತು. ಇದರಲ್ಲಿ ಅರ್ಧಭಾಗ 2018ರ ಮೊದಲಾರ್ಧದಲ್ಲಿ ಪಾವತಿಸಲಾಗಿದೆ ಅಥವಾ ಮುಂದಿನ ವರ್ಷಕ್ಕೆ ಮುಂದೂಡಲಾಗಿದೆ ಎಂದು ಭಾವಿಸಿದರೂ ಮರುಪಾವತಿ ಮಾಡಬೇಕಾಗಿರುವ ಸಾಲದ ಮೊತ್ತ, 2017ರ 65.1 ರೂಪಾಯಿ ಪ್ರತಿ ಡಾಲರ್ ಬೆಲೆಯಂತೆ ಲೆಕ್ಕ ಹಾಕಿದಾಗ, 7.1 ಲಕ್ಷ ಕೋಟಿ ರೂ. ಆಗುತ್ತದೆ. ವರ್ಷದ ದ್ವಿತಿಯಾರ್ಧದಲ್ಲಿ ರೂಪಾಯಿ ಮೌಲ್ಯ ಡಾಲರ್ ವಿರುದ್ಧ ಸರಾಸರಿ 71.4 ಆಗಿದ್ದರೆ ಮರುಪಾವತಿ ಮಾಡಬೇಕಾದ ಸಾಲದ ಮೊತ್ತ 7.8 ಲಕ್ಷ ಕೋಟಿ ರೂ. ಆಗುತ್ತದೆ. ಅಂದರೆ 70,000 ಕೋಟಿ ಹೆಚ್ಚುವರಿ ಎಂದು ಘೋಶ್ ತಿಳಿಸುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News