ಕ್ಷಮೆ ಕೋರದ ಅರ್ನಾಬ್ ಗೋಸ್ವಾಮಿ: ಎನ್‌ ಬಿಎಸ್‌ ಎ ನೋಟಿಸನ್ನು ಕಡೆಗಣಿಸಿದ ರಿಪಬ್ಲಿಕ್ ಟಿವಿ ಸಂಪಾದಕ

Update: 2018-09-07 17:25 GMT

ಹೊಸದಿಲ್ಲಿ, ಸೆ.7: ಚರ್ಚಾ ಕಾರ್ಯಕ್ರಮದಲ್ಲಿ ಅನುಚಿತವಾಗಿ ಮಾತನಾಡಿದ್ದ ಹಿನ್ನೆಲೆಯಲ್ಲಿ ಇತ್ತೀಚೆಗಷ್ಟೇ ನ್ಯೂಸ್ ಬ್ರಾಡ್ ಕಾಸ್ಟಿಂಗ್ ಸ್ಟ್ಯಾಂಡರ್ಡ್ಸ್ ಅಥಾರಿಟಿ ವೀಕ್ಷಕರೊಂದಿಗೆ ‘ಫುಲ್ ಸ್ಕ್ರೀನ್’ ಕ್ಷಮೆ ಕೋರಬೇಕೆಂದು ರಿಪಬ್ಲಿಕ್ ಟಿವಿಯ ಸಂಪಾದಕ ಅರ್ನಾಬ್ ಗೋಸ್ವಾಮಿಯವರಿಗೆ ಸೂಚಿಸಿತ್ತು. ಸೆ.7ರಂದು ಅರ್ನಾಬ್ ಗೋಸ್ವಾಮಿಯವರ 9 ಗಂಟೆಯ ಕಾರ್ಯಕ್ರಮದ ಮೊದಲು ಕ್ಷಮೆ ಕೋರಬೇಕೆಂದು ಸೂಚಿಸಲಾಗಿತ್ತು. ಆದರೆ ಅರ್ನಾಬ್ ಇಂದಿನ ಚರ್ಚಾ ಕಾರ್ಯಕ್ರಮಕ್ಕೆ ಮುನ್ನ ಯಾವುದೇ ಕ್ಷಮೆ ಕೋರಿಲ್ಲ.

ಇಂದು ಅರ್ನಾಬ್ ಕ್ಷಮೆ ಕೋರಲಿದ್ದಾರೆ ಎಂದು ನಿರೀಕ್ಷಿಸಲಾಗಿತ್ತು. ಸಾಮಾಜಿಕ ಜಾಲತಾಣ ಫೇಸ್ ಬುಕ್, ಟ್ವಿಟರ್ ಗಳಲ್ಲೂ ಈ ಬಗ್ಗೆ ವ್ಯಾಪಕ ಚರ್ಚೆ ನಡೆದಿತ್ತು. ಆದರೆ ಎನ್ ಬಿಎಸ್ ಎ ನೋಟಿಸನ್ನು ಕಡೆಗಣಿಸಿದ ಅರ್ನಾಬ್ ಗೋಸ್ವಾಮಿ ಕ್ಷಮೆ ಯಾಚಿಸಿಲ್ಲ.

ಜಿಗ್ನೇಶ್ ಮೇವಾನಿ ಕಾರ್ಯಕ್ರಮದಲ್ಲಿ ಬೆಂಬಲಿಗರ ಕೊರತೆ ಕುರಿತು ವರದಿ ಮಾಡುತ್ತಿರುವಾಗ ಗುಂಪೊಂದು ವರದಿಗಾರ್ತಿ ಶಿವಾನಿ ಗುಪ್ತಾ ಅವರನ್ನು ಸುತ್ತುವರಿದಿತ್ತು. ಅನಂತರ ಪೊಲೀಸರು ಗುಪ್ತಾ ಅವರನ್ನು ರಕ್ಷಿಸಿ ಕರೆದೊಯ್ಯುತ್ತಿರುವ ವೀಡಿಯೋವನ್ನು ಸುದ್ದಿಯೊಂದಿಗೆ ರಿಪಬ್ಲಿಕ್ ಟಿವಿ ಪ್ರಸಾರ ಮಾಡಿತ್ತು. ಜಿಗ್ನೇಶ್ ಮೇವಾನಿ ಕಾರ್ಯಕ್ರಮದ ಸಂದರ್ಭದ ಈ ವೀಡಿಯೊ ಪ್ರದರ್ಶಿಸುವುದರೊಂದಿಗೆ ಚರ್ಚೆ ಆರಂಭಿಸಿದ ಅರ್ನಬ್ ಗೋಸ್ವಾಮಿ ಅಗೌರವಯುತವಾಗಿ ಮಾತನಾಡಿದ್ದರು ಎಂದು ಆರೋಪಿಸಲಾಗಿದೆ.

ಒಂದು ಗಂಟೆಗಳ ಕಾಲ ನಡೆದ ಚರ್ಚೆಯಲ್ಲಿ ಗೋಸ್ವಾಮಿ ಹಲವು ಅನುಚಿತ ಪದಗಳನ್ನು ಬಳಸಿದ್ದರು ಎನ್ನಲಾಗಿದೆ. ಇದನ್ನು ಪ್ರಶ್ನಿಸಿ ಟಿವಿಗೆ ಇಮೇಲ್ ಸಂದೇಶ ಕಳುಹಿಸಲಾಗಿತ್ತು. ಇದಕ್ಕೆ ಪ್ರತಿಕ್ರಿಯಿಸಿದ ರಿಪಬ್ಲಿಕ್ ಟಿವಿ, ತನ್ನ ವರದಿಗಾರ್ತಿ ವರದಿ ಮಾಡುತ್ತಿರುವಾಗ ಸಿಂಗ್ (ದೂರುದಾರರಲ್ಲಿ ಒಬ್ಬರು) ಸೇರಿದಂತೆ ಹಲವರು ಮಧ್ಯೆ ಪ್ರವೇಶಿಸಿದ್ದಾರೆ ಎಂದು ಹೇಳಿತ್ತು. ಬಳಿಕ ಈ ಚರ್ಚೆಯ ವೀಡಿಯೊವನ್ನು ವೆಬ್‌ಸೈಟ್ ಹಾಗೂ ಯುಟ್ಯೂಬ್‌ನಿಂದ ತೆಗೆದು ಹಾಕಿತ್ತು. ಈ ಬಗ್ಗೆ ಪರಿಶೀಲನೆ ನಡೆಸಿದ ಎನ್‌ಬಿಎಸ್‌ಎ ಅರ್ನಾಬ್ ಗೋಸ್ವಾಮಿ ಅವರ ಭಾಷೆಯ ಆಯ್ಕೆಯನ್ನು ಖಂಡಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News