ಪರಂಪರೆ-ಆಧುನಿಕತೆಗಳನ್ನು ಕೃತಿಗಳಲ್ಲಿ ವಿಮರ್ಶಿಸಿದ ಅನಂತಮೂರ್ತಿ : ಪ್ರೊ.ಟಿ.ಪಿ. ಅಶೋಕ್

Update: 2018-09-07 18:14 GMT

ಉಡುಪಿ, ಸೆ.7: ಪರಂಪರೆ ಮತ್ತು ಆಧುನಿಕತೆ ಎರಡನ್ನೂ ವಿಮರ್ಶೆಗೊಳಪಡಿಸಿ, ಮುಖಾಮುಖಿಗೊಳಿಸಿ ಎರಡರಿಂದಲೂ ಪಡೆದುಕೊಂಡ ತೃತೀಯ ಮಾರ್ಗದ ಹುಡುಕಾಟವೇ ಯು. ಆರ್. ಅನಂತಮೂರ್ತಿ ಅವರ ಸಾಹಿತ್ಯದ ಪರಿಭಾಷೆ ಎಂದು ಖ್ಯಾತ ವಿಮರ್ಶಕ, ಚಿಂತಕ ಪ್ರೊ.ಟಿ.ಪಿ. ಅಶೋಕ್ ಅಭಿಪ್ರಾಯಪಟ್ಟಿದ್ದಾರೆ.

ಮಣಿಪಾಲ ಇಂಟರ್ ನ್ಯಾಶನಲ್ ಲಿಟರೇಚರ್ ಆ್ಯಂಡ್ ಆರ್ಟ್ಸ್ ಪ್ಲಾಟ್ ಫೋರಂ (ಮಿಲಾಪ್ ) ಆಯೋಜಿಸಿದ ಎರಡನೇ ಮಣಿಪಾಲ ಸಾಹಿತ್ಯೋತ್ಸವದ ಅಂಗವಾಗಿ ಶುಕ್ರವಾರ ಎಂಜಿಎಂ ಕಾಲೇಜು ಹಾಗೂ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದ ಸಹಯೋಗದಲ್ಲಿ ನೂತನ ರವೀಂದ್ರ ಮಂಟಪದಲ್ಲಿ ಆಯೋಜಿಸಲಾದ ‘ಯು.ಆರ್.ಅನಂತಮೂರ್ತಿ: ಸಾಹಿತ್ಯ ಪರಂಪರೆ ಮತ್ತು ಪರಿವರ್ತನೆ’ಎಂಬ ವಿಷಯದ ಕುರಿತು ನಡೆದ ವಿಚಾರಗೋಷ್ಠಿಯಲ್ಲಿ ಅವರು ಮಾತನಾಡುತ್ತಿದ್ದರು.

ತಮ್ಮ ಪ್ರಾರಂಭಿಕ ಸಾಹಿತ್ಯದಲ್ಲಿ ಪರಂಪರೆಯನ್ನು ವಿಮರ್ಶೆಗೊಳಪಡಿಸಿದ ಅನಂತಮೂರ್ತಿ, ನಂತರದ ತಮ್ಮ ಸಾಹಿತ್ಯದಲ್ಲಿ ಆಧುನಿಕತೆಯನ್ನು ವಿಮರ್ಶೆ ಗೊಳಪಡಿಸಿದರು. ಅವರ ‘ಸಂಸ್ಕಾರ’, ‘ಭಾರತೀಪುರ’ಗಳಲ್ಲಿ ಪರಂಪರೆ ಚರ್ಚೆ ಗೊಂಡರೆ, ನಂತರದ ‘ಭವ’, ‘ದಿವ್ಯ’, ‘ಸೂರ್ಯನ ಕುದುರೆ’ಗಳಲ್ಲಿ ಆಧುನಿಕತೆ ಚರ್ಚೆಗೊಳಗಾಯಿತು. ‘ಕ್ಲಿಪ್‌ಜಾಯಿಂಟ್’ ಕಥೆಯಲ್ಲಿ ಪೂರ್ವ ಮತ್ತು ಪಶ್ಚಿಮ ಮುಖಾಮುಖಿಗೊಳ್ಳುತ್ತವೆ ಎಂದರು.

ಅನಂತಮೂರ್ತಿ ಕಥನಕ್ರಮದಲ್ಲೂ ಹೊಸತನವನ್ನುಹುಡುಕಿದರು. ಕುವೆಂಪು, ಕಾರಂತರ ಕಥನಕ್ರಮಕ್ಕೆ ಸ್ಪಂದಿಸುತ್ತಲೇ, ಕಥನದಲ್ಲಿ ಕಾವ್ಯದ ಭಾಷೆಯನ್ನು ಮೈಗೂಡಿಸಿಕೊಂಡರು. ವಾಸ್ತವ ವಾದದ ಆಚೆಗೆ ರೂಪಕದ ಭಾಷೆಯನ್ನು ಸೃಷ್ಟಿಸಿದರು ಎಂದು ಪ್ರೊ. ಅಶೋಕ್ ನುಡಿದರು.

ಇಲ್ಲಿಯ ನೆಲದಲ್ಲಿ ಬೇರುಬಿಟ್ಟು ವಿಶ್ವವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವ ಮಹತ್ವಾಕಾಂಕ್ಷೆ ಅನಂತಮೂರ್ತಿಯವರ ಸಾಹಿತ್ಯದ ವೈಶಿಷ್ಟತೆ. ಪರಂಪರೆ ಮತ್ತು ಆಧುನಿಕತೆಯನ್ನು ಏಕತ್ರವಾಗಿ ಗ್ರಹಿಸಿ ಸಹಸ್ರಮಾನದ ಅನುಭವವನ್ನು ಸಾಹಿತ್ಯವಾಗಿಸಿದ್ದರಿಂದ ಅನಂತಮೂರ್ತಿ ವಿಶ್ವದ ಮೇರು ಲೇಖಕರಲ್ಲಿ ಒಬ್ಬರಾ ದರು ಎಂದು ನುಡಿದ ಅಶೋಕ್, ಕುವೆಂಪು, ಕಾರಂತರ ಕಾಣ್ಕೆಗಳಿಗೆ ತಮ್ಮ ಕಾಣ್ಕೆಯನ್ನು ಸೇರಿಸಿ ಕನ್ನಡ ಸಾಹಿತ್ಯ ಪರಂಪರೆಯನ್ನು ಬಹುದೂರ ಕೊಂಡೊಯ್ದ ಕೀರ್ತಿ ಅನಂತಮೂರ್ತಿಯವರದು ಎಂದರು.

ಎಂಜಿಎಂ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಎಂ.ಜಿ.ವಿಜಯ ಅಧ್ಯಕ್ಷತೆ ವಹಿಸಿದ್ದರು. ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದ ಸಂಯೋಜಕ ಪ್ರೊ. ವರದೇಶ ಹಿರೇಗಂಗೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಸುದೇಷ್ಣ ಪ್ರಾರ್ಥಿಸಿ, ಡಾ. ಪುತ್ತಿ ವಸಂತ ಕುಮಾರ್ ಕಾರ್ಯಕ್ರಮ ನಿರ್ವಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News