ಐದನೇ ಟೆಸ್ಟ್: ಶತಕ ವಂಚಿತ ಅಲಿಸ್ಟೆರ್ ಕುಕ್

Update: 2018-09-07 18:25 GMT

ಲಂಡನ್, ಸೆ.7: ಪ್ರವಾಸಿ ಭಾರತದ ವಿರುದ್ಧ ಐದನೇ ಹಾಗೂ ಅಂತಿಮ ಟೆಸ್ಟ್‌ನಲ್ಲಿ ಆರಂಭಿಕ ದಾಂಡಿಗ ಅಲಿಸ್ಟೈರ್ ಕುಕ್ ಮತ್ತು ಮೊಯಿನ್ ಅಲಿ ಅರ್ಧಶತಕಗಳ ನೆರವಿನಲ್ಲಿ ಇಂಗ್ಲೆಂಡ್ ತಂಡ ಸ್ಪರ್ಧಾತ್ಮಕ ಮೊತ್ತ ದಾಖಲಿಸಿದೆ.

 ದಿನದಾಟದಂತ್ಯಕ್ಕೆ ಇಂಗ್ಲೆಂಡ್ ಮೊದಲ ಇನಿಂಗ್ಸ್‌ನಲ್ಲಿ 90 ಓವರ್‌ಗಳಲ್ಲಿ 7 ವಿಕೆಟ್ ನಷ್ಟದಲ್ಲಿ 198 ರನ್ ಗಳಿಸಿದೆ. ಜೋಸ್ ಬಟ್ಲರ್ ಔಟಾಗದೆ 11 ರನ್ ಮತ್ತು ಆದಿಲ್ ರಶೀದ್ 4 ರನ್ ಗಳಿಸಿ ಕ್ರೀಸ್‌ನಲ್ಲಿದ್ದಾರೆ.

ಅಂತಿಮ ಟೆಸ್ಟ್ ಆಡುತ್ತಿರುವ ಇಂಗ್ಲೆಂಡ್‌ನ ಆರಂಭಿಕ ದಾಂಡಿಗ ಅಲಿಸ್ಟೈರ್ ಕುಕ್ ಶತಕದ ಹಾದಿಯಲ್ಲಿ ಎಡವಿದ್ದಾರೆ. ಅಲಿಸ್ಟೈರ್ ಕುಕ್ 71 ರನ್ (190ಎ, 8ಬೌ) ಗಳಿಸಿ ಔಟಾದರು. ಮೊಯಿನ್ ಅಲಿ(50) ಅರ್ಧಶತಕದ ಕೊಡುಗೆ ನೀಡಿದರು. ಇಂಗ್ಲೆಂಡ್ ಟಾಸ್ ಜಯಿಸಿ ಮೊದಲು ಬ್ಯಾಟಿಂಗ್ ಆಯ್ದುಕೊಂಡಿತ್ತು.

 ಇನಿಂಗ್ಸ್ ಆರಂಭಿಸಿದ ಅಲಿಸ್ಟೈರ್ ಕುಕ್ ಮತ್ತು ಕೀಟನ್ ಜೆನ್ನಿಂಗ್ಸ್ ಮೊದಲ ವಿಕೆಟ್‌ಗೆ 60 ರನ್‌ಗಳ ಜೊತೆಯಾಟ ನೀಡಿದರು. 23.1ನೇ ಓವರ್‌ನಲ್ಲಿ ಕೀಟನ್ ಜೆನ್ನಿಂಗ್ಸ್ ಆಲ್‌ರೌಂಡರ್ ಜಡೇಜ ಎಸೆತದಲ್ಲಿ ಲೋಕೇಶ್ ರಾಹುಲ್‌ಗೆ ಕ್ಯಾಚ್ ನೀಡಿದರು. ಔಟಾಗುವ ಮುನ್ನ ಜೆನ್ನಿಂಗ್ಸ್ 23 ರನ್ ಗಳಿಸಿದರು. 1.2ನೇ ಓವರ್‌ನಲ್ಲಿ ಇಶಾಂತ್ ಶರ್ಮಾ ಎಸೆತದಲ್ಲಿ 3 ರನ್ ಗಳಿಸುವ ಮೂಲಕ ಇನಿಂಗ್ಸ್ ಆರಂಭಿಸಿದ್ದ ಕುಕ್ 30.5ನೇ ಓವರ್‌ನಲ್ಲಿ ಜೀವದಾನ ಪಡೆದರು. ಇದರ ಪ್ರಯೋಜನ ಪಡೆದ ಅವರು ಅರ್ಧಶತಕ ದಾಖಲಿಸಿದರು. 161ನೇ ಟೆಸ್ಟ್ ಆಡುತ್ತಿರುವ ಅವರು 139 ಎಸೆತಗಳಲ್ಲಿ 6 ಬೌಂಡರಿಗಳ ಸಹಾಯದಿಂದ 57ನೇ ಅರ್ಧಶತಕ ಗಳಿಸಿದರು.

  ಎರಡನೇ ವಿಕೆಟ್‌ಗೆ ಕುಕ್ ಮತ್ತು ಮೊಯಿನ್ ಅಲಿ 73 ರನ್‌ಗಳ ಜೊತೆಯಾಟ ನೀಡಿದರು. 63.2ನೇ ಓವರ್‌ನಲ್ಲಿ ಕುಕ್ ಅವರು ಜಸ್‌ಪ್ರೀತ್ ಬುಮ್ರಾ ಎಸೆತದಲ್ಲಿ ಬೌಲ್ಡ್ ಆಗಿ ಪೆವಿಲಿಯನ್ ಸೇರಿದರು. ಕುಕ್ ನಿರ್ಗಮನದ ಬಳಿಕ ಇಂಗ್ಲೆಂಡ್‌ನ ಇನ್ನೆರಡು ವಿಕೆಟ್‌ಗಳು ಪಟಪಟನೆ ಉರುಳಿತು. ನಾಯಕ ಜೋ ರೂಟ್ (0) ಅವರನ್ನು ಖಾತೆ ತೆರೆಯಲು ಅವಕಾಶ ನೀಡದೆ ಬುಮ್ರಾ ಎಲ್‌ಬಿಡಬ್ಲು ಬಲೆಗೆ ಬೀಳಿಸಿದರು. ಇದರ ಬೆನ್ನಲ್ಲೇ ಇಂಗ್ಲೆಂಡ್‌ಗೆ ಇನ್ನೊಂದು ಆಘಾತ. ಜಾನಿ ಬೈರ್‌ಸ್ಟೋವ್ (0) ಅವರು ಇಶಾಂತ್ ಶರ್ಮಾ ಎಸೆತದಲ್ಲಿ ವಿಕೆಟ್ ಕೀಪರ್ ರಿಷಭ್ ಪಂತ್‌ಗೆ ಕ್ಯಾಚ್ ನೀಡಿದರು. ಮೊಯಿನ್ ಅಲಿ 50 ರನ್(170ಎ, 4ಬೌ) ಗಳಿಸಿ ಇಶಾಂತ್ ಶರ್ಮಾ ಎಸೆತದಲ್ಲಿ ಪಂತ್‌ಗೆ ಕ್ಯಾಚ್ ನೀಡಿದರು. ಬೈರ್ ಸ್ಟೋವ್ (0) ಮತ್ತು ಸ್ಯಾಮ್ ಕರನ್(0) ಖಾತೆ ತೆರೆಯದೆ ನಿರ್ಗಮಿಸಿದರು. ಭಾರತದ ಪರ ಇಶಾಂತ್ ಶರ್ಮಾ 28ಕ್ಕೆ 3, ಜಸ್‌ಪ್ರೀತ್ ಬುಮ್ರಾ ಮತ್ತು ರವೀಂದ್ರ ಜಡೇಜ ತಲಾ 2 ವಿಕೆಟ್ ಹಂಚಿಕೊಂಡರು.

ಪಾಂಟಿಂಗ್ ದಾಖಲೆ ಮುರಿದ ಕುಕ್

ಅಂತರ್‌ರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿರುವ ಇಂಗ್ಲೆಂಡ್ ತಂಡದ ಆರಂಭಿಕ ದಾಂಡಿಗ ಅಲಿಸ್ಟೈರ್ ಕುಕ್ ಅವರು ತನ್ನ ಕೊನೆಯ ಟೆಸ್ಟ್‌ನಲ್ಲಿ ಟೀಮ್ ಇಂಡಿಯಾ ವಿರುದ್ಧ ಗರಿಷ್ಠ ಟೆಸ್ಟ್‌ಗಳನ್ನು ಆಡಿರುವ ಆಸ್ಟ್ರೇಲಿಯದ ರಿಕಿ ಪಾಂಟಿಂಗ್ ದಾಖಲೆಯನ್ನು ಮುರಿದಿದ್ದಾರೆ.

ಕುಕ್ ಅವರು ಟೀಮ್ ಇಂಡಿಯಾ ವಿರುದ್ಧ 30ನೇ ಟೆಸ್ಟ್ ಆಡುತ್ತಿದ್ದಾರೆ. ಆದರೆ ಪಾಂಟಿಂಗ್ 29 ಟೆಸ್ಟ್‌ಗಳನ್ನು ಆಡಿದ್ದಾರೆ.

ಕುಕ್ ಓವಲ್ ಟೆಸ್ಟ್‌ನಲ್ಲಿ 1,000 ರನ್ ಪೂರ್ಣ ಗೊಳಿಸಿದ್ದಾರೆ. ಓವಲ್‌ನಲ್ಲಿ ಈ ಸಾಧನೆ ಮಾಡಿರುವ ವಿಶ್ವದ ಮೂರನೇ ಆಟಗಾರ ಎನಿಸಿಕೊಂಡಿದ್ದಾರೆ. ಲೆನ್ ಹಟನ್ (1,521) ಮತ್ತು ಗ್ರಹಾಂ ಗೂಚ್ (1,097) ಅವರು ಒಂದು ಸಾವಿರಕ್ಕಿಂತ ಹೆಚ್ಚು ರನ್ ಪೂರ್ಣಗೊಳಿಸಿದ್ದರು. ಓವಲ್‌ನಲ್ಲಿ ಕುಕ್ 2 ಶತಕ ಮತ್ತು 6 ಅರ್ಧಶತಕಗಳನ್ನು ದಾಖಲಿಸಿದ್ದರು. ಕುಕ್ ಟೆಸ್ಟ್ ಕ್ರಿಕೆಟ್‌ನಲ್ಲಿ 12 ಸಾವಿರಕ್ಕಿಂತ ಹೆಚ್ಚು ರನ್ ಗಳಿಸಿದ್ದಾರೆ. 161 ಟೆಸ್ಟ್‌ಗಳಲ್ಲಿ 32 ಶತಕ ಮತ್ತು 56 ಅರ್ಧಶತಕಗಳನ್ನು ದಾಖಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News