ಗ್ರಾಹಕರ ನಕಲಿ ಎಟಿಎಂ ಬಳಸಿ ಹಣ ವಂಚನೆ: ದೂರು

Update: 2018-09-07 18:34 GMT

ಉಡುಪಿ, ಸೆ.7: ವಸ್ತು ಖರೀದಿಸಿದ ಅಂಗಡಿಯವರು ಗ್ರಾಹಕರ ಪಿನ್ ನಂಬರ್ ಬಳಸಿ ನಕಲಿ ಎಟಿಎಂ ಕಾರ್ಡ್ ಮೂಲಕ ಸಾವಿರಾರು ರೂ. ಹಣ ಡ್ರಾ ಮಾಡಿ ವಂಚನೆ ಎಸಗಿರುವ ಬಗ್ಗೆ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಚತ್ತೀಸ್‌ಘಡ ರಾಜ್ಯದ ಡಾ.ಪ್ರಭಾತ್ ಕುಮಾರ್ ಶ್ರೀವಾತ್ಸವ ಎಂಬವರು ಪತ್ನಿ ನೀತಾ ಮತ್ತು ಮಗಳ ಜೊತೆ ಜು.12ರಂದು ಮಣಿಪಾಲದ ಸ್ಕೆಚರ್ಸ್ ಸ್ಟೋರ್ಸ್‌ನಲ್ಲಿ ಶೂ ಖರೀದಿಸಿದ್ದು, ಹಣವನ್ನು ಪಾವತಿಸಲು ನೀತಾರ ಎಸ್‌ಬಿಐ ಎಟಿಎಂ ಕಾರ್ಡ್ ನೀಡಿದ್ದರು. ಅಂಗಡಿಯವರು ಮೊದಲು ಒಂದು ಮೇಷಿನ್ ನಲ್ಲಿ ಎರಡು ಬಾರಿ ಸ್ವೈಪ್ ಮಾಡಿದರೂ ಹಣ ಸ್ವೀಕರಿಸದಿದ್ದಾಗ ಬೇರೆ ಮೇಷಿನ್‌ನಲ್ಲಿ ಸ್ವೈಪ್ ಮಾಡಿ ಹಣ ಪಡೆದುಕೊಂಡಿದ್ದರು.

ಆ.13ರಂದು ನೀತಾ ಚತ್ತೀಸ್‌ಘಡನಲ್ಲಿರುವಾಗ ಅಪರಿಚಿತ ವ್ಯಕ್ತಿಯು ನ್ಯೂ ಬೆಲ್ ರಸ್ತೆ ಎಸ್‌ಬಿಐ ಎಟಿಎಂನಿಂದ ನೀತಾರ ಖಾತೆಯಿಂದ 80,000ರೂ. ಡ್ರಾ ಮಾಡಿದ್ದು, ಆ.14ರಂದು ಮಣಿಪಾಲದ ಸ್ಕೆಚರ್ಸ್ ಸ್ಟೋರ್ಸ್‌ನವರು ನೀತಾ ರಿಗೆ ಕರೆ ಮಾಡಿ ಎಟಿಎಂ ಪಿನ್ ನಂಬರ್ ಬದಲಿಸಲು ಸೂಚಿಸಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ.

ಮಣಿಪಾಲದ ಸ್ಕೆಚರ್ಸ್ ಸ್ಟೋರ್ಸ್‌ನವರು ಇತರೊಂದಿಗೆ ಸೇರಿಕೊಂಡು ನೀತಾರಿಗೆ ತಿಳಿಯದಂತೆ ನಕಲಿ ಎಟಿಎಂ ಕಾರ್ಡ್ ತಯಾರಿಸಿ ಪಿನ್ ನಂಬ್ರ ಬಳಸಿ 80,000ರೂ. ಡ್ರಾ ಮಾಡಿ ವಂಚನೆ ಎಸಗಿರುವುದಾಗಿ ಡಾ.ಪ್ರಭಾತ್ ಕುಮಾರ್ ಶ್ರೀವಾತ್ಸವ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News