ನೇಪಾಳಕ್ಕೆ ವ್ಯಾಪಾರ ಮಾರ್ಗ: ಭಾರತದ ಏಕಸ್ವಾಮ್ಯ ಅಂತ್ಯ

Update: 2018-09-08 03:50 GMT

ಕಠ್ಮಂಡು, ಸೆ.8: ನಾಲ್ಕು ಬಂದರುಗಳನ್ನು ಸರಕು ಸಾಗಣೆಗೆ ಬಳಸಿಕೊಳ್ಳಲು ಚೀನಾವು ನೇಪಾಳಕ್ಕೆ ಅನುಮತಿ ನೀಡುವುದರೊಂದಿಗೆ ಈ ಪುಟ್ಟ ಹಿಮಾಲಯನ್ ದೇಶದ ವ್ಯಾಪಾರ ಮಾರ್ಗದಲ್ಲಿ ಭಾರತ ಹೊಂದಿದ್ದ ಏಕಸ್ವಾಮ್ಯ ಅಂತ್ಯಗೊಂಡಿದೆ.

ಇದುವರೆಗೆ ಇಂಧನ ಸೇರಿದಂತೆ ಎಲ್ಲ ಅಗತ್ಯ ವಸ್ತುಗಳ ಸಾಗಣೆಗೆ ನೇಪಾಳವು ಭಾರತದ ಬಂದರುಗಳನ್ನು ಅವಲಂಬಿಸಬೇಕಿತ್ತು. 2015-16ರಲ್ಲಿ ಭಾರತ- ನೇಪಾಳ ಗಡಿಯಲ್ಲಿ ತಡೆ ಉಂಟಾದ ಹಿನ್ನೆಲೆಯಲ್ಲಿ ಇಂಧನ ಹಾಗೂ ಔಷಧ ಸೇರಿದಂತೆ ಅಗತ್ಯ ವಸ್ತುಗಳಿಗಾಗಿ ಪರದಾಡಬೇಕಾದ ಪರಿಸ್ಥಿತಿ ಸೃಷ್ಟಿಯಾಗಿದ್ದರಿಂದ ನೇಪಾಳವು ಚೀನಾ ಬಂದರುಗಳ ಬಳಕೆಗೆ ಅನುಮತಿ ಕೋರಿತ್ತು. ಶುಕ್ರವಾರ ಚೀನಾ ಹಾಗೂ ನೇಪಾಳ ಸಾಗಣೆ ಶಿಷ್ಟಾಚಾರವನ್ನು ಅಂತಿಮಪಡಿಸಿವೆ.

ಉಭಯ ದೇಶಗಳು ನೇಪಾಳ- ಚೀನಾ ಸಾಗಣೆ ಮತ್ತು ಸಾರಿಗೆ ಒಪ್ಪಂದವನ್ನು ಅಂತಿಮಪಡಿಸಿದ್ದು, ಚೀನಾದ ತಿಯಾಂಜಿನ್, ಶೆಂಝೆನ್, ಲಿಯಾನ್ಯುಂಗ್‌ಗಾಂಗ್ ಮತ್ತು ಝಂಗಿಯಾಂಗ್ ಬಂದರುಗಳನ್ನು ಬಳಸಿಕೊಳ್ಳಲು ನೇಪಾಳಕ್ಕೆ ಅನುಮತಿ ನೀಡಲಾಗಿದೆ ಎಂದು ಕೈಗಾರಿಕೆ ಮತ್ತು ವಾಣಿಜ್ಯ ಸಚಿವಾಲಯ ಪ್ರಕಟಿಸಿದೆ.

ಇದರ ಜತೆಗೆ ಲಂಝೋಹು, ಲ್ಹಾಸಾ ಮತ್ತು ಕ್ಸಿಗಾಸೆ ಭೂ ಬಂದರುಗಳನ್ನು ನೇಪಾಳ ಬಳಸಿಕೊಳ್ಳಲು ಕೂಡಾ ಅನುಮತಿ ನೀಡಲಾಗಿದೆ. ಉಭಯ ದೇಶಗಳ ಆಂತರಿಕ ವಿಧಿವಿಧಾನಗಳನ್ನು ಪೂರ್ಣಗೊಳಿಸಿದ ಬಳಿಕ ಒಪ್ಪಂದಕ್ಕೆ ಸಹಿ ಮಾಡಲಾಗುವುದು. 2019ರಲ್ಲಿ ಚೀನಾ ಅಧ್ಯಕ್ಷ ಕ್ಸಿ ಜಿಂಪಿಂಗ್ ನೇಪಾಳಕ್ಕೆ ಭೇಟಿ ನೀಡುವ ವೇಳೆ ಒಪ್ಪಂದಕ್ಕೆ ಸಹಿಮಾಡುವ ನಿರೀಕ್ಷೆ ಇದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News