ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೊಂತಿ ಫೆಸ್ಟ್ ಸಂಭ್ರಮ

Update: 2018-09-08 05:39 GMT

ಮಂಗಳೂರು, ಸೆ.8: ಕನ್ಯಾ ಮರಿಯಮ್ಮನವರ ಹುಟ್ಟಿದ ದಿನವನ್ನು ಸಂಭ್ರಮಿಸುವ ‘ಮೊಂತಿ ಫೆಸ್ಟ್’ ಅನ್ನು ದ.ಕ. ಮತ್ತು ಉಡುಪಿ ಹಾಗೂ ಕಾಸರಗೋಡು ಜಿಲ್ಲೆ ಸೇರಿದಂತೆ ಕರಾವಳಿಯಾದ್ಯಂತ ಕ್ರೈಸ್ತರು ಇಂದು ಸಂಭ್ರಮದಿಂದ ಆಚರಿಸುತ್ತಿದ್ದಾರೆ. ಮಾತೆ ಮರಿಯಮ್ಮ ಹುಟ್ಟುಹಬ್ಬ ಮತ್ತು ತೆನೆ ಹಬ್ಬವನ್ನ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಡಗರ, ಸಂಭ್ರಮದಿಂದ ಆಚರಿಸಲಾಯಿತು.

ಮಂಗಳೂರಿನ ರೊಸಾರಿಯೋ ಕೆಥಡ್ರಾಲ್‌ನಲ್ಲಿ ಮಂಗಳೂರು ಕ್ರೈಸ್ತ ಧರ್ಮಪ್ರಾಂತದ ಧರ್ಮಗುರು ವಿಶೇಷ ಬಲಿಪೂಜೆಯನ್ನು ನೆರವೇರಿಸಿದರು. ಅದೇರೀತಿ ಬೊಂದೆಲ್‌ನಲ್ಲಿರುವ ಸೈಂಟ್ ಲಾರೆನ್ಸ್ ಚರ್ಚ್, ಉರ್ವಾ ಚರ್ಚ್, ಕುಲಶೇಖರದ ಹೋಲಿ ಕ್ರಾಸ್ ಚರ್ಚ್ ಹಾಗೂ ಪುತ್ತೂರು, ಬೆಳ್ತಂಗಡಿ, ಸುಳ್ಯ, ಬಂಟ್ವಾಳ ತಾಲೂಕಿನ ಚರ್ಚ್‌ಗಳಲ್ಲಿ ಚರ್ಚ್ಗಳಲ್ಲಿ ಹೊಸ ತೆನೆಗಳಿಗೆ ಪೂಜೆ, ವಿಶೇಷ ಪ್ರಾರ್ಥನೆ ನಡೆಯಿತು.

ಮಾತೆ ಮರಿಯಮ್ಮರ ಬಾಲ ರೂಪಕ್ಕೆ ಮಕ್ಕಳಿಂದ ಪುಷ್ಪಾರ್ಚನೆ ನಡೆಯಿತು. ಮುಂಜಾನೆಯೇ ಭತ್ತದ ತೆನೆ ಮತ್ತು ಕಬ್ಬನ್ನು ಗುರಿಕಾರರು ಚರ್ಚ್‌ಗೆ ಮೆರವಣಿಗೆಯಲ್ಲಿ ಕೊಂಡೊಯ್ದರು. ಅಲ್ಲಿ ಧರ್ಮಗುರುಗಳು ತೆನೆ ಪೂಜೆ ನಡೆಸಿ ಭಕ್ತರಿಗೆ ಹಂಚಿದರು. ಭತ್ತದ ತೆನೆಯನ್ನು ಭಕ್ತಿಪೂರ್ವಕವಾಗಿ ಮನೆಗೆ ಕೊಂಡೊಯ್ದ ಕ್ರೈಸ್ತರು ದೇವರ ಪೀಠದ ಮೇಲಿರಿಸಿ ಪ್ರಾರ್ಥನೆ ಸಲ್ಲಿಸಿದರು.

ಹಬ್ಬದ ಹಿನ್ನೆಲೆಯಲ್ಲಿ ಭತ್ತದ ಕಾಳಿನ ಅಕ್ಕಿಯನ್ನು ಕುಟ್ಟಿ ಪುಡಿ ಮಾಡಿ ಹಾಲು, ತೆಂಗಿನ ಹಾಲು, ಪಾಯಸದ ಮೂಲಕ ಮಾಡುವ ಹೊಸ ಅಕ್ಕಿಯ ಊಟ ಇಂದಿನ ವಿಶೇಷವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News