ಸಂಕೀರ್ಣ ಸಾಮಾಜಿಕ ವ್ಯವಸ್ಥೆ ಮುಕ್ತಿಗೆ ಮೊಂತಿ ಫೆಸ್ಟ್: ಫಾ.ಫ್ರಾನ್ಸಿಸ್ ಕ್ರಾಸ್ತಾ

Update: 2018-09-08 06:16 GMT

ಶಿರ್ತಾಡಿ, ಸೆ.8: ‘ಮೊಂತಿ ಹಬ್ಬವು ಕರಾವಳಿ ಜಿಲ್ಲೆಯಲ್ಲಿ ಸಾಂಪ್ರದಾಯಿಕವಾಗಿ ಹೆಚ್ಚು ಪ್ರಸ್ತುತಗೊಂಡಿದ್ದು, ಇದೊಂದು ಕುಟುಂಬದ ಹಬ್ಬವೆಂದು ಪರಿಗಣಿಸಲ್ಪಟ್ಟಿದೆ. ಆಧುನಿಕ ದಿನಗಳಲ್ಲಿ ಸಮಯದ ಅಭಾವ ಬಹಳ ಜನರನ್ನು ಕಾಡುತ್ತಿದ್ದು, ಕುಟುಂಬಿಕರಿಗೆ ಮತ್ತು ತಂದೆತಾಯಿಯರಿಗೂ ಸಮಯ ನೀಡುವುದು ಸಾಧ್ಯವಾಗದೇ ಸಮಾಜ ಸಂಕೀರ್ಣ ಪರಿಸ್ಥಿತಿಯಲ್ಲಿದೆ. ಈ ಹಿನ್ನೆ ಲೆಯಲ್ಲಿ ಮೊಂತಿ ಹಬ್ಬ ಕೌಟುಂಬಿಕ ಬಾಂಧವ್ಯವನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಸಮಾಜಕ್ಕೆ ಉತ್ತಮ ಸಂದೇಶ ನೀಡುತ್ತದೆ ಎಂದು ಶಿರ್ತಾಡಿ ಮೌಂಟ್ ಕಾರ್ಮೆಲ್ ಚರ್ಚ್‍ನ ಧರ್ಮಗುರು ಫಾ.ಫ್ರಾನ್ಸಿಸ್ ಕ್ರಾಸ್ತಾ ನುಡಿದರು.

ಅವರು ಶನಿವಾರ ಶಿರ್ತಾಡಿ ಚರ್ಚ್‍ನ ಆವರಣದಿಂದ ಇಲ್ಲಿನ ಬಸ್ ನಿಲ್ದಾಣದವರೆಗೆ ಮೊಂತಿಹಬ್ಬ ಆಚರಣೆಯ ಸಲುವಾಗಿ ನಡೆದ ಧಾರ್ಮಿಕ ಮೆರವಣಿಗೆಯ ಸಮಾರೋಪದಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿದರು. 

ಹಬ್ಬದ ಪ್ರಯುಕ್ತ ಚರ್ಚ್‍ಗೆ ಮಕ್ಕಳು ಹೂಗುಚ್ಛದೊಂದಿಗೆ ಆಗಮಿಸಿ ಮೇರಿ ಮಾತೆಯ ಮೂರ್ತಿಗೆ ಪುಷ್ಪಾರ್ಚನೆಗೈದರು. ಬಳಿಕ ಚರ್ಚ್‍ನ ವತಿಯಿಂದ ಕಬ್ಬನ್ನು ಪ್ರಸಾದರೂಪವಾಗಿ ನೀಡಲಾಯಿತು. ಹೂವಿನಿಂದ ಅಲಂಕೃತಗೊಂಡ ಕ್ರೈಸ್ತ ಧರ್ಮೀಯರ ಎಲ್ಲಾ ವಾಹನಗಳನ್ನು ಚರ್ಚ್‍ನ ಆವರಣದಲ್ಲಿ ನಿಲ್ಲಿಸಿ ಧರ್ಮಗುರುಗಳಿಂದ ಆಶೀರ್ವಾದ ಕಾರ್ಯನಡೆಯಿತು. 

ಫಾ.ದೀಪಕ್, ಧಾರ್ಮಿಕ ಭಗಿನಿಯರು, ಚರ್ಚ್ ಪಾಲನಾ ಮಂಡಳಿಯ ಉಪಾಧ್ಯಕ್ಷ ವಿಲ್ಫ್ರೆಡ್ ಪಿಂಟೋ, ಕಾರ್ಯದರ್ಶಿ ಮರಿಯಾ ಲೀಟಾ ಪಿರೇರ, ಜೊಯೆಲ್ ಸಿಕ್ವೇರ, ಪ್ರಸಾದ್ ರೊಡ್ರಿಗಸ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News