ಬಂಡವಾಳಶಾಹಿ ಪರವಾಗಿರುವ ಕೇಂದ್ರ ಸರಕಾರಕ್ಕೆ ಜನಸಾಮಾನ್ಯರ ನೋವು ಅರ್ಥವಾಗುತ್ತಿಲ್ಲ: ರಮಾನಾಥ ರೈ ಟೀಕೆ

Update: 2018-09-08 07:29 GMT

ಮಂಗಳೂರು, ಸೆ.8: ಬಂಡವಾಳಶಾಹಿಗಳ ಪರವಾಗಿರುವ ಕೇಂದ್ರ ಸರಕಾರಕ್ಕೆ ಜನ ಸಾಮಾನ್ಯರ ನೋವು ಅರ್ಥವಾಗುವುದಿಲ್ಲ. ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಜನಮಾನ್ಯರ ಮೇಲೆ ಹೇರುತ್ತಿರುವ ಹೊರೆಯಾಗಿದೆ. ಇದರಿಂದ ಸಂಕಷ್ಟಕ್ಕೀಡಾಗಿರುವ ಜನ ಸಾಮಾನ್ಯ ನೋವಿಗೆ ಸ್ಪಂದಿಸಿರುವ ವಿಪಕ್ಷ ಕಾಂಗ್ರೆಸ್ ದೇಶಾದ್ಯಂತ ಸೆ.10ರಂದು ಬಂದ್ ಮೂಲಕ ಪ್ರತಿಭಟನೆ ನಡೆಸಲು ನಿರ್ಧರಿಸಿದೆ ಎಂದು ಮಾಜಿ ಸಚಿವ ಹಾಗೂ ಹಿರಿಯ ಕಾಂಗ್ರೆಸ್ ಮುಖಂಡ ರಮಾನಾಥ ರೈ ತಿಳಿಸಿದ್ದಾರೆ.

ಮಂಗಳೂರಿನಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಸಂಘಸಂಸ್ಥೆಗಳು, ಜನ ಸಾಮಾನ್ಯರು ಬೆಳಗ್ಗೆ 10ರಿಂದ ಸಂಜೆಯವರೆಗೆ ನಡೆಯುವ ಈ ಬಂದ್‌ನಲ್ಲಿ ಭಾಗಿಯಾಗಬೇಕು ಎಂದು ಮನವಿ ಮಾಡಿದರು.

ಕೇಂದ್ರ ಸರಕಾರ ಬಂಡವಾಳಶಾಹಿಗಳ ಪರವಾಗಿದೆ ಎನ್ನುವುದಕ್ಕೆ ಸಾಕಷ್ಟು ಉದಾಹರಣೆಗಳು ನಮ್ಮ ಮುಂದಿವೆ. ಏರುತ್ತಿರುವ ಪೆಟ್ರೋಲ್ ಡೀಸೆಲ್ ಬೆಲೆ ಇಳಿಸಲು ಕೇಂದ್ರ ಸರಕಾರ ಹಲವು ಸಬೂಬುಗಳನ್ನು ನೀಡುತ್ತಿದೆ. ಈ ಹಿಂದೆ ಬೆಲೆ ಏರಿಕೆಗೆ ಕಾಂಗ್ರೆಸ್ ಕಾರಣ ಎಂದು ಸಾಕಷ್ಟು ಸುಳ್ಳುಗಳನ್ನೇ ಹೇಳಿ ಕೇಂದ್ರದಲ್ಲಿ ಅಧಿಕಾರ ಪಡೆದಿರುವ ಪ್ರಧಾನಿ ನರೇಂದ್ರ ಮೋದಿ ತಮ್ಮ ಭಾಷಣದಲ್ಲಿ ಅಚ್ಛೇದಿನ ಭಾರತಕ್ಕೆ ಬರುತ್ತದೆ. ಪೆಟ್ರೋಲ್ ಡೀಸೆಲ್ ದರವೂ ಕಡಿಮೆಯಾಗುತ್ತದೆ. ಡಾಲರ್ ಎದುರು ರೂಪಾಯಿ ವೌಲ್ಯ ಹೆಚ್ಚಾಗುತ್ತದೆ ಎನ್ನುವ ಹೇಳಿಕೆ ನೀಡಿದ್ದರು ಆದರೆ ಅವೆಲ್ಲ ಪೊಳ್ಳು ಭರವಸೆಗಳೆಂಬುದು ಈಗ ದೇಶದ ಜನತೆಗೆ ಮನವರಿಕೆಯಾಗತೊಡಗಿದೆ ಎಂದು ರೈ ಟೀಕಿಸಿದರು.

ದಿನನಿತ್ಯ ಬಳಕೆಯ ವಸ್ತುಗಳ ಬೆಲೆಯೇರಿಕೆಯನ್ನು ನಿಯಂತ್ರಿಸುವಲ್ಲಿ ಕೇಂದ್ರ ಸರಕಾರ ಸಂಪೂರ್ಣ ವಿಫಲವಾಗಿದೆ. ಹಿಂದೆ ಯುಪಿಎ ಸರಕಾರ ಇದ್ದ ಸಂದರ್ಭದಲ್ಲಿ ಜಾಗತಿಕ ಮಾರುಕಟ್ಟೆಯಲ್ಲಿ ತೈಲ ಬೆಲೆ ಕುಸಿದಾಗಲೂ ಸೂಕ್ತ ಕ್ರಮ ಕೈಗೊಂಡು ಇಂಧನ ತೈಲ ಬೆಲೆಯನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾಗಿತ್ತು ಎನ್ನುವುದು ಇಂದು ನೆನಪಿಸಿಕೊಳ್ಳಬೇಕಾಗಿದೆ ಎಂದು ರಮಾನಾಥ ರೈ ಹೇಳಿದರು.

*ಕೇಂದ್ರ ಸರಕಾರದ ರಫೇಲ್ ಹಗರಣ ಖಂಡಿಸಿ ಸೆ.11ರಂದು ಪ್ರತಿಭಟನೆ
ದೇಶದ ಬೊಕ್ಕಸಕ್ಕೆ ಕೋಟ್ಯಂತರ ರೂ. ನಷ್ಟಕ್ಕೆ ಕಾರಣವಾಗುವ ಕೇಂದ್ರ ಸರಕಾರದ ರಫೇಲ್ ಡೀಲ್ ಹಗರಣ ಬಗ್ಗೆ ಸೆ.11ರಂದು ನಗರದ ನಗರದ ಬಲ್ಮಠ ಶಾಂತಿ ನಿಲಯದಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಯಲಿದೆ ಎಂದು ರಮಾನಾಥ ರೈ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾಜಿ ಶಾಸಕ ಜೆ.ಆರ್.ಲೋಬೊ, ಮೊಯ್ದಿನ್ ಬಾವ, ಶಾಸಕ ಐವನ್ ಡಿ ಸೋಜ, ಹಿರಿಯ ಕಾಂಗ್ರೆಸ್ ಮುಖಂಡ ಇಬ್ರಾಹೀಂ ಕೋಡಿಜಾಲ್, ಮಮತಾ ಗಟ್ಟಿ, ಶಶಿಧರ ಹೆಗ್ಡೆ, ವಿನಯ ರಾಜ್, ಕವಿತಾ ಸನಿಲ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News