ಉದ್ಯೋಗ ಮೇಳದಿಂದ ಸ್ವಾಭಿಮಾನಿ ಜೀವನಕ್ಕೆ ಪ್ರೇರಣೆ: ಸಂಜೀವ ಮಠಂದೂರು

Update: 2018-09-08 12:34 GMT

ಪುತ್ತೂರು, ಸೆ. 8: ಸಮಾಜಮುಖಿ ಚಿಂತನೆಯೊಂದಿಗೆ ಕಾರ್ಯಪ್ರವೃತ್ತವಾಗಿರುವ ವಿದ್ಯಾಮಾತಾ ಫೌಂಡೇಶನ್ ಉದ್ಯೋಗ ಮೇಳದಂತಹ ಸೇವಾ ಕಾರ್ಯವನ್ನು ಆಯೋಜಿಸುವ ಮೂಲಕ ಯುವ ಜನಾಂಗವು ಸ್ವಾಭಿಮಾನದೊಂದಿಗೆ ಜೀವನ ನಡೆಸುವಂತೆ ಪ್ರೇರಣೆ ನೀಡುತ್ತಿದೆ ಎಂದು ಪುತ್ತೂರು ಶಾಸಕ ಸಂಜೀವ ಮಠಂದೂರು ಹೇಳಿದರು.

ಅವರು ಶನಿವಾರ ಮಂಜಲ್ಪಡ್ಪು ಸುದಾನ ಶಾಲಾ ವಠಾರದಲ್ಲಿ ವಿದ್ಯಾಮಾತಾ ಫೌಂಡೇಶನ್ ವತಿಯಿಂದ ಆಯೋಜಿಸಲಾದ ರಾಜ್ಯ ಮಟ್ಟದ ಉದ್ಯೋಗ ಮೇಳವನ್ನು ಉದ್ಘಾಟಿಸಿದರು. ಭಾರತವು ಯುವ ಸಂಪನ್ಮೂಲಗಳಿಂದ ಕೂಡಿದ ರಾಷ್ಟ್ರವಾಗಿದ್ದು, ಯುವ ಸಂಪನ್ಮೂಲವು ಉದ್ಯೋಗ ಅವಕಾಶಗಳ ಮೂಲಕ ಜೀವನ ರೂಪಿಸಲು ಸಾಧ್ಯವಾದರೆ ಸಶಕ್ತ ಯುವ ಭಾರತ ನಿರ್ಮಾಣವಾಗುತ್ತದೆ. ಈ ಮೂಲಕ ದೇಶದ ಆರ್ಥಿಕ ಮತ್ತು ಸಾಮಾಜಿಕ ಪ್ರಗತಿಗೂ ಸಹಕಾರಿಯಾಗುತ್ತದೆ ಎಂದರು.

ಈ ದೇಶದ ಸುಶಿಕ್ಷಿತ ಯುವ ಸಮೂಹ ಉದ್ಯೋಗಿಗಳಾಗದೆ ಉದ್ಯೋಗದಾತರಾಗಬೇಕು. ಈ ಮೂಲಕ ದೇಶದ ಪ್ರಗತಿಯ ರೂವಾರಿಗಳಾಗಬೇಕು ಎಂದು ಅಭಿಪ್ರಾಯಪಟ್ಟ ಸಂಜೀವ ಮಠಂದೂರು, ಯುವ ಸಮುದಾಯ ಸ್ವಉದ್ಯೋಗ ಕೈಗೊಳ್ಳುವ ಮೂಲಕ ವಾಣಿಜ್ಯ ಮತ್ತು ಕೈಗಾರಿಕಾ ಕ್ಷೇತ್ರದಲ್ಲೂ ಪ್ರಗತಿ ಸಾಧಿಸುವ ಮೂಲಕ ಮಾದರಿ ನಾಗರಿಕರಾಗಿ ರೂಪುಗೊಳ್ಳಬೇಕು ಎಂದು ಹೇಳಿದರು. 

ವಿದ್ಯಾಮಾತಾ ಫೌಂಡೇಶನ್ ಹಮ್ಮಿಕೊಂಡಿರುವ ವಿದ್ಯಾನಿಧಿ ಯೋಜನೆಗೆ ಚಾಲನೆ ನೀಡಿದ ಮಾಜಿ ಶಾಸಕಿ ಶಕುಂತಳಾ ಟಿ ಶೆಟ್ಟಿ ಮಾತನಾಡಿ, ಶೈಕ್ಷಣಿಕವಾಗಿ ಆರ್ಥಿಕ ದುರ್ಬಲರನ್ನು ಪ್ರೋತ್ಸಾಹಿಸುವ ಚಿಂತನೆ ವಿದ್ಯಾವಂತ ಯುವ ಸಮೂಹವನ್ನು ಸಿದ್ಧಪಡಿಸುವ ದೂರಗಾಮಿ ಚಿಂತನೆಯ ಯೋಜನೆಯಾಗಿದೆ. ಈ ನಿಟ್ಟಿನಲ್ಲಿ ವಿದ್ಯಾಮಾತಾ ಫೌಂಡೇಶನ್ ಮಾದರಿಯಾಗಿದೆ. ಸುದಾನ ಶಿಕ್ಷಣ ಸಂಸ್ಥೆಗಳ ಸಂಚಾಲಕ ರೆ.ಫಾ. ವಿಜಯ ಹಾರ್ವಿನ್ ಮಾತನಾಡಿ, ಸಾಮಾಜಿಕ ತುಡಿತದೊಂದಿಗೆ ವಿದ್ಯಾಮಾತಾ ಫೌಂಡೇಶನ್‍ನ ಅಧ್ಯಕ್ಷ ಭಾಗ್ಯೇಶ್ ರೈಯವರು ಇಂತಹ ಸೇವಾ ಯೋಜನೆಯನ್ನು ಸಮಾಜಕ್ಕೆ ನೀಡುತ್ತಿದ್ದಾರೆ. ಇದು ಇತರರಿಗೆ ಪ್ರೇರಣೆಯಾಗಿದೆ ಎಂದರು.

ಉದ್ಘಾಟನಾ ಸಮಾರಂಭದಲ್ಲಿ ರೈಲ್ವೇ ಸುರಕ್ಷಾ ದಳದ ಅಮೃತ್ ಎಸ್ ಹಿರಿಯಣ್ಣ, ಪರಿಣಾಮಕಾರಿ ಸಂವಹನಗಾರ್ತಿ ಡಾ. ಉಷಾ ಮೋಹನ್, ಉದ್ಯಮಿ ಅಚ್ಚುತಾನಂದ ಎಸ್, ಮಡಿಕೇರಿಯ ಪತ್ರಕರ್ತ ಕಿಶೋರ್ ರೈ ಕತ್ತಲೆಕಾಡು ಅವರನ್ನು ವಿದ್ಯಾಮಾತಾ ಫೌಂಡೇಶನ್ ವತಿಯಿಂದ ಗೌರವಿಸಲಾಯಿತು. ವಿಕಲಚೇತನಿರಿಗೆ ಫೌಂಡೇಶನ್ ವತಿಯಿಂದ ಸಹಾಧನವನ್ನು ವಿತರಿಸಲಾಯಿತು. ರಾಜ್ಯ ಮಟ್ಟದ ಉದ್ಯೋಗ ಮೇಳದಲ್ಲಿ 84 ಕಂಪೆನಿಗಳು ಪಾಲ್ಗೊಂಡಿವೆ ಎಂದು ಈ ಸಂದರ್ಭದಲ್ಲಿ ಸಂಘಟಕರು ಪ್ರಕಟಿಸಿದರು.

ವೇದಿಕೆಯಲ್ಲಿ ಜಯ ಕರ್ನಾಟಕ ಗೌರವಾಧ್ಯಕ್ಷ ಎನ್. ಚಂದ್ರಹಾಸ ಶೆಟ್ಟಿ, ಉದ್ಯಮಿಗಳಾದ ಪ್ರಸಾದ್ ಕೌಶಲ್ ಶೆಟ್ಟಿ, ಜಯಂತ ನಡುಬೈಲು, ಕರುಣಾಕರ ರೈ, ಪ್ರಸನ್ನ ಕುಮಾರ್ ಶೆಟ್ಟಿ, ಮನ್ವಿಜ್ ಶೆಟ್ಟಿ ಉಪಸ್ಥಿತರಿದ್ದರು.

ವಿದ್ಯಾಮಾತಾ ಫೌಂಡೇಶನ್‍ನ ಅಧ್ಯಕ್ಷ ಭಾಗ್ಯೇಶ್ ರೈ ಸ್ವಾಗತಿಸಿ, ಪಶುಪತಿ ಶರ್ಮ ವಂದಿಸಿದರು. ರಾಜ್ಯ ತುಳು ಸಾಹಿತ್ಯ ಅಕಾಡೆಮಿ ಸದಸ್ಯ ನಿರಂಜನ್ ರೈ ಮಠಂತಬೆಟ್ಟು ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News