'ಗ್ರಾಮದ ಸರ್ವಾಂಗೀಣ ಅಭಿವೃದ್ಧಿಯಲ್ಲಿ ನೌಕರರ ಪಾತ್ರ ಪ್ರಮುಖ'

Update: 2018-09-08 12:37 GMT

 ಉಡುಪಿ, ಸೆ.8: ಗ್ರಾಮ ಪಂಚಾಯತ್‌ಗಳೆಂದರೆ ಸ್ಥಳೀಯ ಸರಕಾರ ಆಗಿದೆ. ರಾಜ್ಯ ಸರಕಾರಕ್ಕಿಂತ ಹೆಚ್ಚು ಪ್ರಾಮಾಣಿಕವಾಗಿ ಗ್ರಾಪಂಗಳು ಕೆಲಸ ಮಾಡುತ್ತಿವೆ. ಗ್ರಾಮಗಳ ಸರ್ವಾಂಗೀಣ ಅಭಿವೃದ್ಧಿಯ ಜವಾಬ್ದಾರಿ ಪಂಚಾಯತ್ ನೌಕರರ ಮೇಲಿದೆ ಎಂದು ರಾಜ್ಯ ವಿಧಾನ ಪರಿಷತ್ ವಿರೋಧಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

ಕರ್ನಾಟಕ ರಾಜ್ಯ ಗ್ರಾಮ ಪಂಚಾಯತ್ ನೌಕರರ ಶ್ರೇಯೋಭಿವೃದ್ಧಿ ಸಂಘ (ಆರ್‌ಡಿಪಿಆರ್) ಉಡುಪಿ ಜಿಲ್ಲಾ ಸಮಿತಿಯ ವತಿಯಿಂದ ಶನಿವಾರ ಮಣಿಪಾಲ ರಜತಾದ್ರಿಯ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ಆಯೋಜಿಸಲಾದ ಅಭಿನಂದನಾ ಕಾರ್ಯಕ್ರಮ ಹಾಗೂ ಗ್ರಾಪಂ ನೌಕರರ ಜಿಲ್ಲಾ ಮಟ್ಟದ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಕರ್ನಾಟಕದ ಪಂಚಾಯತ್‌ರಾಜ್ ವ್ಯವಸ್ಥೆ ಇಡೀ ದೇಶದಲ್ಲೇ ಅತ್ಯಂತ ವಿಶಿಷ್ಟವಾದುದು. ರಾಜ್ಯದಲ್ಲಿ ಸುಮಾರು 6020 ಗ್ರಾಪಂಗಳಲ್ಲಿ 50000 ಸಿಬ್ಬಂದಿಗಳು ದುಡಿಯುತ್ತಿದ್ದಾರೆ. ನೌಕರರು ಪ್ರತಿ ಗ್ರಾಪಂ ನಮ್ಮ ಮನೆ ಎಂಬು ದಾಗಿ ಭಾವಿಸಿ ಕೆಲಸ ಮಾಡಬೇಕು. ಅವರ ಸಮಸ್ಯೆಗಳನ್ನು ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಅವರು ತಿಳಿಸಿದರು.

ಕರಾವಳಿಯ ಮೂರು ಜಿಲ್ಲೆಗಳ ಗ್ರಾಪಂಗಳಲ್ಲಿ ಶೇ.70ರಿಂದ 80ರಷ್ಟು ತೆರಿಗೆ ಸಂಗ್ರಹವಾದರೆ ಗುಲ್ಬರ್ಗಾದಂತಹ ಜಿಲ್ಲೆಗಳ ಗ್ರಾಪಂಗಳ ತೆರಿಗೆ ಸಂಗ್ರಹ ಶೇ.1ರಷ್ಟು ಕೂಡ ಇರುವುದಿಲ್ಲ. ಆ ಮೂಲಕ ಉಡುಪಿ ಜಿಲ್ಲೆ ಇಡೀ ರಾಜ್ಯಕ್ಕೆ ಮಾದರಿಯಾಗಿದೆ. ಗ್ರಾಪಂಗಳು ಪರಿಣಾಮಕಾರಿಯಾಗಿ ಕೆಲಸ ಮಾಡಲು ನೌಕರರ ಪಾತ್ರ ಅತ್ಯಂತ ಪ್ರಮುಖವಾಗಿದೆ. ಇಂದು ಗ್ರಾಪಂಗಳಲ್ಲಿ ಕೆಲಸದ ಒ್ತಡಗಳು ಹೆಚ್ಚಾಗುತ್ತಿವೆ ಎಂದರು.

ಕಳೆದ ಐದು ವರ್ಷಗಳಲ್ಲಿ ಪಂಚಾಯತ್ ನೌಕರರ ಸಮಸ್ಯೆಗಳ ಕುರಿತು ಸದನದಲ್ಲಿ ಬಹಳಷ್ಟು ಚರ್ಚೆಗಳು ನಡೆದಿವೆ. ಗ್ರಾಪಂ ನೌಕರರಿಗೆ ಇಎಸ್‌ಐ ಹಾಗೂ ಪಿಂಚಣಿ ನೀಡುವ ವಿಚಾರ ಸರಕಾರದ ಪರಿಶೀಲನೆ ಹಂತದಲ್ಲಿದೆ. ಅನಾಹುತ ಸಂಭವಿಸಿದಾಗ 10ಲಕ್ಷ ರೂ. ಪರಿಹಾರ ನೀಡುವ ಬಗ್ಗೆ ಸರಕಾರದ ಗಮನಕ್ಕೆ ತರಲಾಗಿದೆ ಎಂದು ಅವರು ಹೇಳಿದರು.

ಕಾಪು ಶಾಸಕ ಲಾಲಾಜಿ ಆರ್.ಮೆಂಡನ್, ಉಡುಪಿ ಜಿಪಂ ಅಧ್ಯಕ್ಷ ದಿನಕರ ಬಾಬು, ಉಪಾಧ್ಯಕ್ಷೆ ಶೀಲಾ ಕೆ.ಶೆಟ್ಟಿ, ಮುಖ್ಯಕಾರ್ಯನಿರ್ವಹಣಾಧಿಕಾರಿ ಶಿವಾನಂದ ಕಾಪಶಿ, ಉಡುಪಿ ತಾಪಂ ಅಧ್ಯಕ್ಷೆ ನಳಿನಿ ಪ್ರದೀಪ್ ರಾವ್, ಕಾರ್ಯನಿರ್ವಹಣಾಧಿಕಾರಿ ಮೋಹನ್‌ರಾಜ್, ಸಹಾಯಕ ನಿರ್ದೇಶಕ ಹರಿಕೃಷ್ಣ ಶಿವತ್ತಾಯ, ಕುಂದಾಪುರ ತಾಪಂ ಸಹಾಯಕ ನಿರ್ದೇಶಕ ಎಚ್.ವಿ.ಇಬ್ರಾಹಿಂ ಪುರ, ಜಿಪಂ ಸದಸ್ಯರಾದ ಗೀತಾಂಜಲಿ ಸುವರ್ಣ, ಶಿಲ್ಪಾ ಸುವರ್ಣ, ತಾಪಂ ಸದಸ್ಯರುಗಳಾದ ನೀತಾ ಗುರುರಾಜ್, ಧನಂಜಯ್, ವಸಂತಿ, ಸಂಧ್ಯಾ ಕಾಮತ್ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳನ್ನು ಅಭಿನಂದಿ ಸಲಾಯಿತು. ಅಧ್ಯಕ್ಷತೆಯನ್ನು ಸಂಘದ ಜಿಲ್ಲಾಧ್ಯಕ್ಷ ಉದಯ ಶೆಟ್ಟಿ ಪೆರ್ಡೂರು ವಹಿಸಿದ್ದರು. ಸಂಘದ ರಾಜ್ಯಾಧ್ಯಕ್ಷ ದೇವಿಪ್ರಸಾದ್ ಬೊಳ್ಮ ಪ್ರಾಸ್ತಾವಿಕವಾಗಿ ಮಾತನಾಡಿದರು.

ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಪದ್ಮನಾಭ ಕುಲಾಲ್ ಮುದ್ರಾಡಿ ಸ್ವಾಗತಿಸಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಸೇರಿಗಾರ್ ಅಲೆ ವೂರು ವಂದಿಸಿದರು. ಪ್ರಶಾಂತ್ ಹಾವಂಜೆ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News