ಡಾ.ವೀರೇಂದ್ರ ಹೆಗ್ಗಡೆಗೆ ‘ಜೀವಮಾನ ಶ್ರೇಷ್ಠ ಸಾಧಕ ಪ್ರಶಸ್ತಿ’ ಪ್ರದಾನ

Update: 2018-09-08 13:39 GMT

ಮಣಿಪಾಲ, ಸೆ.8: ಧಾರ್ಮಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಕ್ಷೇತ್ರಗಳಲ್ಲಿ ಮಾಡಿದ ವಿಶೇಷ ಸಾಧನೆಗಳಿಗಾಗಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಅವರಿಗೆ ಮಣಿಪಾಲದ ಅಕಾಡೆಮಿ ಆಫ್ ಜನರಲ್ ಎಜ್ಯುಕೇಶನ್ ವತಿಯಿಂದ ಇಂದು ‘ಜೀವಮಾನ ಶ್ರೇಷ್ಠ ಸಾಧಕ ಪ್ರಶಸ್ತಿ’ ನೀಡಿ ಗೌರವಿಸಲಾಯಿತು.

ಮಣಿಪಾಲದ ಫಾರ್ಚ್ಯೂನ್ ಇನ್ ವ್ಯಾಲಿವ್ಯೆ ಹೊಟೇಲ್‌ನ ಚೈತ್ಯ ಸಭಾಂಗಣದಲ್ಲಿ ಇಂದು ನಡೆದ ಅಕಾಡೆಮಿ ಆಫ್ ಜನರಲ್ ಎಜ್ಯುಕೇಷನ್‌ನ ಅಮೃತ ಮಹೋತ್ಸ್ಸವ ಆಚರಣೆಯ ಸಮಾರೋಪ ಸಮಾರಂಭದಲ್ಲಿ ಅಕಾಡೆಮಿಯ ಮಾಜಿ ಅಧ್ಯಕ್ಷರೂ ಆಗಿರುವ ಡಾ.ಹೆಗ್ಗಡೆ ಅವರಿಗೆ ಈ ಪ್ರಶಸ್ತಿಯನ್ನು ನೀಡಲಾಯಿತು.

ಸನ್ಮಾನಕ್ಕೆ ಉತ್ತರಿಸಿ ಮಾತನಾಡಿದ ಡಾ.ಹೆಗ್ಗಡೆ, ಅಕಾಡೆಮಿಯ ಸ್ಥಾಪಕರಾದ ಡಾ.ಟಿ.ಎಂ.ಎ.ಪೈ ಅವರು ದೂರದೃಷ್ಟಿಯುಳ್ಳ ದಾರ್ಶನಿಕರಾಗಿದ್ದರು. ಸ್ವಾತಂತ್ರ ಪೂರ್ವದಲ್ಲೇ ಡಾ.ಪೈ ಭವಿಷ್ಯದ ಭಾರತದ ಕನಸು ಕಂಡಿದ್ದರು, ಚಿಂತನೆ ನಡೆಸಿದ್ದರು ಎಂದರು.

ಶಿಕ್ಷಣ, ಆರೋಗ್ಯ ಹಾಗೂ ಬ್ಯಾಂಕಿಂಗ್ ಕ್ಷೇತ್ರಗಳಲ್ಲಿ ತನ್ನ ದೂರದೃಷ್ಟಿತ್ವದ ಮೂಲಕ ಅಸಾಧಾರಣವಾದುದನ್ನು ಸಾಧಿಸಿದ ಅವರ ಸಾಧನೆಗೆ ಮಣಿಪಾಲ ಇಂದು ಸಾಕ್ಷಿಯಾಗಿ ನಿಂತಿದೆ. 1982ರಿಂದ ಸ್ವಉದ್ಯೋಗ ಹಾಗೂ ಗ್ರಾಮೀಣಾಭಿವೃದ್ಧಿ ಕ್ಷೇತ್ರದಲ್ಲಿ ತಾನು ಏನನ್ನಾದರೂ ಸಾಧಿಸಿದ್ದರೆ ಅದಕ್ಕೆ ಡಾ. ಟಿ.ಎಂ.ಎ.ಪೈ ಅವರ ಪ್ರೇರಣೆಯೇ ಕಾರಣವಾಗಿದೆ ಎಂದರು.

ಅಕಾಡೆಮಿಯ ಅಧ್ಯಕ್ಷ ಡಾ.ಎಚ್.ಎಸ್.ಬಲ್ಲಾಳ್, ರಿಜಿಸ್ಟ್ರಾರ್ ಡಾ.ರಂಜನ್ ಆರ್.ಪೈ ಹಾಗೂ ಪ್ರಧಾನ ಕಾರ್ಯದರ್ಶಿ ಮತ್ತು ಆಡಳಿತಾಧಿಕಾರಿ ಡಾ.ಎಚ್. ಶಾಂತಾರಾಮ್ ಅವರು ಡಾ.ಹೆಗ್ಗಡೆ ಅವರನ್ನು ಸನ್ಮಾನಿಸಿದರು.

ಇದೇ ಸಂದರ್ಭದಲ್ಲಿ ಅಂಚೆ ಇಲಾಖೆ ಹೊರತಂದ ವಿಶೇಷ ಅಂಚೆ ಕವರ್‌ನ್ನು ದಕ್ಷಿಣ ಕರ್ನಾಟಕ ವಲಯದ ಪೋಸ್ಟ್‌ಮಾಸ್ಟರ್ ಜನರಲ್ ಶಿರ್ತಾಡಿ ರಾಜೇಂದ್ರಕುಮಾರ್ ಅವರು ಬಿಡುಗಡೆಗೊಳಿಸಿದರು.

ಈ ಸಂದರ್ಭದಲ್ಲಿ ಹೇಮಾವತಿ ವಿ.ಹೆಗ್ಗಡೆ, ವಸಂತಿ ಆರ್.ಪೈ, ಟಿ.ಸತೀಶ್ ಪೈ, ಟಿ.ಅಶೋಕ್ ಪೈ, ಮಾಹೆಯ ಕುಲಪತಿ ಡಾ.ಎಚ್.ವಿನೋದ್ ಭಟ್, ಉಡುಪಿ ಅಂಚೆ ಅಧೀಕ್ಷಕರಾದ ರಾಜಶೇಖರ್ ಭಟ್ ಮುಂತಾದವರು ಉಪಸ್ಥಿತರಿದ್ದರು.

ಮಾಹೆಯ ಪ್ರೊ ಚಾನ್ಸಲರ್ ಹಾಗೂ ಅಕಾಡೆಮಿಯ ಅಧ್ಯಕ್ಷ ಡಾ.ಎಚ್. ಎಸ್.ಬಲ್ಲಾಳ್ ಅಕಾಡೆಮಿ ನಡೆದು ಬಂದ ದಾರಿಯ ಬಗ್ಗೆ ತಮ್ಮ ಪ್ರಾಸ್ತಾವಿಕ ಮಾತುಗಳಲ್ಲಿ ವಿವರಿಸಿದರೆ, ಡಾ.ಅಪರ್ಣ ರಘು ಸ್ವಾಗತಿಸಿದರು. ಡಾ.ಜಿ.ಕೆ. ಪ್ರಭು ಸನ್ಮಾನಿತರನ್ನು ಸಭೆಗೆ ಪರಿಚಯಿಸಿ ಸನ್ಮಾನ ಪತ್ರವನ್ನು ವಾಚಿಸಿದರು. ಡಾ.ಎಚ್. ಶಾಂತಾರಾಮ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News