ಮತದಾರರ ಮೇಲೆ ಸರ್ವಾಧಿಕಾರ ಮೆರೆಯುತ್ತಿರುವ ಕೇಂದ್ರ ಸರಕಾರ: ಡಿಎಂಕೆ

Update: 2018-09-08 14:07 GMT

ಚೆನ್ನೈ,ಸೆ.8: ಬಿಜೆಪಿ ನೇತೃತ್ವದ ಕೇಂದ್ರ ಸರಕಾರದ ವಿರುದ್ಧ ಶನಿವಾರ ತೀವ್ರ ದಾಳಿಯನ್ನು ನಡೆಸಿದ ಡಿಎಂಕೆ, ಅದು ಮತದಾರರ ಮೇಲೆ ಸರ್ವಾಧಿಕಾರವನ್ನು ಮೆರೆಯುತ್ತಿದೆ ಎಂದು ಆರೋಪಿಸಿದ್ದು, ಬಿಜೆಪಿಯ ಕೇಸರೀಕರಣ ಕನಸುಗಳನ್ನು ಭಗ್ನಗೊಳಿಸುವುದಾಗಿ ಪಣ ತೊಟ್ಟಿದೆ.

ಎಂ.ಕೆ.ಸ್ಟಾಲಿನ್ ಅವರು ಪಕ್ಷದ ಮುಖ್ಯಸ್ಥ ಹುದ್ದೆಗೇರಿದ ಬಳಿಕ ನಡೆದ ಡಿಎಂಕೆ ಜಿಲ್ಲಾ ಕಾರ್ಯದರ್ಶಿಗಳು,ಸಂಸದರು ಮತ್ತು ಶಾಸಕರ ಸಭೆಯು ಸಾಂವಿಧಾನಿಕ ಮೌಲ್ಯಗಳನ್ನು ಎತ್ತಿಹಿಡಿಯಲು ಯಾವುದೇ ಬೆಲೆಯನ್ನಾದರೂ ತೆರಲು ಪಕ್ಷವು ಸಿದ್ಧವಾಗಿದೆ ಎಂದು ಘೋಷಿಸಿತು.

ನೋಟು ನಿಷೇಧದಿಂದ ಹಿಡಿದು ರಫೇಲ್ ಒಪ್ಪಂದ,ನೀಟ್, ಜಿಎಸ್‌ಟಿ ಜಾರಿ ಮತ್ತು ಪ್ರಚಲಿತ ಆರ್ಥಿಕ ಸ್ಥಿತಿಯವರೆಗೆ ಹಲವಾರು ವಿಷಯಗಳಲ್ಲಿ ಕೇಂದ್ರವು ತಪ್ಪುಗಳನ್ನು ಮಾಡಿದೆ ಎಂದು ಸಭೆಯು ಬೆಟ್ಟು ಮಾಡಿತು.

ಬಿಜೆಪಿಯು ತಮಿಳುನಾಡಿನ ಹಿತಾಸಕ್ತಿಗಳನ್ನು ಕಡೆಗಣಿಸುತ್ತಿದೆ, ವೈವಿಧ್ಯತೆಗೆ ಹಾನಿಯನ್ನುಂಟು ಮಾಡುತ್ತಿದೆ ಮತ್ತು ಕೋಮುವಾದವನ್ನು ಉತ್ತೇಜಿಸುತ್ತಿದೆ. ಮಾನವ ಹಕ್ಕು ಕಾರ್ಯಕರ್ತರು ಮತ್ತು ಬಿಜೆಪಿಯ ವಿರೋಧಿಗಳನ್ನು ರಾಷ್ಟ್ರವಿರೋಧಿಗಳನ್ನಾಗಿ ಬಿಂಬಿಸಲಾಗುತ್ತಿದೆ ಎಂದು ಸ್ಟಾಲಿನ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯು ಅಂಗೀಕರಿಸಿದ ನಿರ್ಣಯದಲ್ಲಿ ಹೇಳಲಾಗಿದೆ.

ಬಿಜೆಪಿ ಸರಕಾರವನ್ನು ಟೀಕಿಸುವ ಮಾಧ್ಯಮಗಳಿಗೆ ಬೆದರಿಕೆಯೊಡ್ಡಲಾಗುತ್ತಿದೆ ಮತ್ತು ಹಲವಾರು ಸ್ಥಳಗಳಲ್ಲಿ ದಲಿತರು ಮತ್ತು ಅಲ್ಪಸಂಖ್ಯಾತರನ್ನು ಗುರಿಯಾಗಿಸಿಕೊಳ್ಳಲಾಗಿದೆ ಎಂದೂ ನಿರ್ಣಯವು ಆರೋಪಿಸಿದೆ. ಹೀಗಾಗಿ ಅಘೋಷಿತ ತುರ್ತು ಪರಿಸ್ಥಿತಿಯ ವಾತಾವರಣ ಸೃಷ್ಟಿಯಾಗಿದೆ ಎಂದು ಅದು ಹೇಳಿದೆ.

ಬಿಜೆಪಿಯು ಮತದಾರರ ಮೇಲೆ ಸರ್ವಾಧಿಕಾರವನ್ನು ನಡೆಸುತ್ತಿದೆ ಮತ್ತು ಕಳೆದ ನಾಲ್ಕು ವರ್ಷಗಳಿಂದ ಜನವಿರೋಧಿ ಸರಕಾರವನ್ನು ನಡೆಸುತ್ತಿದೆ.ಇಂತಹ ದಬ್ಬಾಳಿಕೆಯು ಸಂಸದೀಯ ಪ್ರಜಾಪ್ರಭುತ್ವಕ್ಕೆ ಸವಾಲೆಸೆದಿದೆ ಎಂದು ಹೇಳಿರುವ ನಿರ್ಣಯವು, ಚುನಾವಣಾ ಆಯೋಗ,ಆದಾಯ ತೆರಿಗೆ ಇಲಾಖೆ ಮತ್ತು ಸಿಬಿಐನಂತಹ ಸಂಸ್ಥೆಗಳನ್ನು ಬಿಜೆಪಿಯು ನಿಯಂತ್ರಿಸುತ್ತಿದೆ. ಉನ್ನತ ನ್ಯಾಯಾಂಗದಲ್ಲಿಯೂ ಬಿಕ್ಕಟ್ಟು ಸೃಷ್ಟಿಯಾಗಿದೆ ಎಂದು ಆರೋಪಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News