ಕಥುವಾದ ಅನಾಥಾಶ್ರಮದ ಮೇಲೆ ದಾಳಿ: 19 ಮಕ್ಕಳ ರಕ್ಷಣೆ

Update: 2018-09-08 14:10 GMT

ಜಮ್ಮು,ಸೆ.8: ಜಮ್ಮು-ಕಾಶ್ಮೀರದ ಕಥುವಾ ಜಿಲ್ಲೆಯಲ್ಲಿ ಅನಧಿಕೃತವಾಗಿ ಕಾರ್ಯಾಚರಿಸುತ್ತಿದ್ದ ಅನಾಥಾಶ್ರಮದ ಮೇಲೆ ದಾಳಿ ನಡೆಸಿ ಎಂಟು ಬಾಲಕಿಯರು ಸೇರಿದಂತೆ 19 ಮಕ್ಕಳನ್ನು ರಕ್ಷಿಸಲಾಗಿದೆ ಎಂದು ಪೊಲೀಸರು ಶನಿವಾರ ತಿಳಿಸಿದರು.

ಕೇರಳದ ಪಾದ್ರಿ ಆ್ಯಂಟನಿ ಥಾಮಸ್ ನಡೆಸುತ್ತಿದ್ದ ಅನಾಥಾಶ್ರಮದಲ್ಲಿ ತಮಗೆ ಕಿರುಕುಳ ಮತ್ತು ಹಿಂಸೆಯನ್ನು ನೀಡಲಾಗುತ್ತಿದೆ ಎಂದು ಕೆಲವು ಮಕ್ಕಳು ದೂರಿಕೊಂಡಿದ್ದ ಹಿನ್ನೆಲೆಯಲ್ಲಿ ಶುಕ್ರವಾರ ಜಿಲ್ಲಾಡಳಿತದ ಅಧಿಕಾರಿಗಳು ಮತ್ತು ಪೊಲೀಸರು ಈ ದಾಳಿಯನ್ನು ನಡೆಸಿದ್ದರು.

ಈ ಬಗ್ಗೆ ಪೊಕ್ಸೊ ಕಾಯ್ದೆಯಡಿ ಪ್ರಕರಣವನ್ನು ದಾಖಲಿಸಿಕೊಂಡು ಥಾಮಸ್‌ರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದರು. ಆದರೆ ಕೇಂದ್ರದಲ್ಲಿ ಅಕ್ರಮಗಳು ನಡೆಯುತ್ತಿರುವ ಎಲ್ಲ ಆರೋಪಗಳನ್ನು ಥಾಮಸ್ ನಿರಾಕರಿಸಿದ್ದಾರೆ. ಆಶ್ರಮದಲ್ಲಿ ಒಟ್ಟು 21 ಮಕ್ಕಳು ವಾಸವಿದ್ದು,ಇಬ್ಬರು ಮದುವೆಯೊಂದಕ್ಕೆ ಹಾಜರಾಗಲು ತಮ್ಮ ಹುಟ್ಟೂರಾದ ಪಂಜಾಬಿನ ಪಠಾಣ್ ಕೋಟ್‌ಗೆ ತೆರಳಿದ್ದಾರೆ ಎಂದು ಪೊಲೀಸರು ತನ್ನನ್ನು ಕರೆದೊಯ್ಯುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಥಾಮಸ್ ಹೇಳಿದರು.

5ರಿಂದ 16 ಹರೆಯದ ಈ ಮಕ್ಕಳನ್ನು ಸರಕಾರಿ ಆಶ್ರಮಗಳಿಗೆ ಸೇರಿಸಲಾಗಿದ್ದು, ಇವರೆಲ್ಲ ಪಂಜಾಬ್,ಹಿಮಾಚಲ ಪ್ರದೇಶ ಮತ್ತು ಜಮ್ಮುವಿನ ವಿವಿಧ ಸ್ಥಳಗಳಿಗೆ ಸೇರಿದವರಾಗಿದ್ದಾರೆ ಎಂದು ತಿಳಿಸಿದ ಕಥುವಾ ಎಸ್‌ಪಿ ಶ್ರೀಧರ ಪಾಟೀಲ್ ಅವರು,ಈ ಅನಾಥಾಶ್ರಮವು ಹಲವಾರು ವರ್ಷಗಳಿಂದ ಕಾರ್ಯಾಚರಿಸುತ್ತಿತ್ತು. ಅದು ಎನ್‌ಜಿಒ ಒಂದರ ಜೊತೆಗೆ ಸಂಯೋಜನೆಗೊಂಡಿತ್ತಾದರೂ ಕೆಲವು ದಿನಗಳ ಹಿಂದೆ ಆ ನಂಟನ್ನು ಕಳೆದುಕೊಂಡಿತ್ತು ಎಂದರು.

ಥಾಮಸ್ ಪತ್ನಿ ನೆರೆಪೀಡಿತ ಕೇರಳಕ್ಕೆ ತೆರಳಿದ್ದು,ಕೆಲ ದಿನಗಳಲ್ಲಿ ಕಥುವಾಕ್ಕೆ ಮರಳಲಿದ್ದಾರೆ ಎಂದರು.

ತನ್ಮಧ್ಯೆ ಶನಿವಾರ ಜಮ್ಮುವಿನ ಪ್ರೆಸ್ ಕ್ಲಬ್‌ನೆದುರು ಪ್ರತಿಭಟನೆ ನಡೆಸಿದ ರಾಷ್ಟ್ರೀಯ ಬಜರಂಗ ದಳದ ಕಾರ್ಯಕರ್ತರು ಆರೋಪಿಗೆ ಕಠಿಣ ಶಿಕ್ಷೆ ನೀಡುವಂತೆ ಆಗ್ರಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News