ದೇಶದ ಪರಿಸ್ಥಿತಿ ಹದಗೆಡಿಸಿದ ಕೇಂದ್ರ ಸರಕಾರ: ಮನಮೋಹನ್ ಟೀಕೆ

Update: 2018-09-08 14:16 GMT

ಹೊಸದಿಲ್ಲಿ, ಸೆ.8: ಬಿಜೆಪಿ ನೇತೃತ್ವದ ಸರಕಾರ ದೇಶದ ಪರಿಸ್ಥಿತಿಯನ್ನು ಭಾರೀ ಪ್ರಮಾಣದಲ್ಲಿ ಹದಗೆಡಿಸಿದೆ ಎಂದು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಟೀಕಿಸಿದ್ದಾರೆ.

ನೋಟು ರದ್ದತಿ ಮತ್ತು ಉದ್ಯೋಗ ಸೃಷ್ಟಿ ವಿಷಯದಲ್ಲಿ ಕೇಂದ್ರ ಸರಕಾರವನ್ನು ಕಟುವಾಗಿ ಟೀಕಿಸಿದ ಅವರು, ಉದ್ಯೋಗ ಸೃಷ್ಟಿ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಹೇಳುತ್ತಿರುವ ಮಾಹಿತಿ ಪ್ರಶ್ನಾರ್ಹವಾಗಿದೆ ಎಂದಿದ್ದಾರೆ. ಸರಕಾರ ಬೃಹತ್ ಪ್ರಮಾಣದಲ್ಲಿ ಉದ್ಯೋಗ ಸೃಷ್ಟಿಸಿದೆ ಎಂಬ ಹೇಳಿಕೆಯನ್ನು ಪುಷ್ಟೀಕರಿಸಲು ಮೋದಿ ಸರಕಾರ ಮುಂದಿಟ್ಟಿರುವ ಅಂಕಿಅಂಶದಿಂದ ಜನತೆ ಪ್ರಭಾವಿತರಾಗಿಲ್ಲ. ಕಪ್ಪುಹಣವನ್ನು ಪತ್ತೆಹಚ್ಚುವುದಾಗಿ ಹೇಳಿಕೊಂಡು ಸರಕಾರ ನೋಟುಗಳನ್ನು ರದ್ದುಗೊಳಿಸಿತು. ಆದರೆ ರದ್ದಾದ ಶೇ.99ರಷ್ಟು ನೋಟುಗಳು ಮರಳಿ ಬಂದಿರುವುದಾಗಿ ಆರ್‌ಬಿಐ ತಿಳಿಸಿದೆ. ಇನ್ನೊಂದೆಡೆ ವಿದೇಶದ ಬ್ಯಾಂಕ್‌ನಲ್ಲಿ ಇಟ್ಟಿರುವ ಕಪ್ಪುಹಣವನ್ನು ಭಾರತಕ್ಕೆ ಮರಳಿ ತರುವುದಾಗಿ ಸರಕಾರ ಘೋಷಿಸಿತ್ತು. ಆದರೆ ಇದು ಕೇವಲ ಭರವಸೆಯಾಗಿಯೇ ಉಳಿದಿದೆ ಎಂದು ಮನಮೋಹನ್ ಟೀಕಿಸಿದರು.

ಸರಕು ಮತ್ತು ಸೇವಾ ತೆರಿಗೆ(ಜಿಎಸ್‌ಟಿ)ಕಾಯ್ದೆಯ ಅಸಮರ್ಪಕ ಅನುಷ್ಟಾನದಿಂದ ಸಮಸ್ಯೆಯಾಗಿದೆ. ಮೇಕ್ ಇನ್ ಇಂಡಿಯಾ, ಸ್ಟಾಂಡ್ ಅಪ್ ಇಂಡಿಯಾ ಮುಂತಾದ ಕಾರ್ಯಕ್ರಮಗಳು ಇದುವರೆಗೆ ಕೈಗಾರಿಕಾ ಉತ್ಪನ್ನದ ಹೆಚ್ಚಳದ ಮೇಲೆ ಅರ್ಥಗರ್ಭಿತ ಪರಿಣಾಮ ಬೀರಿಲ್ಲ. ಸಣ್ಣ ಮತ್ತು ಅತೀ ಸಣ್ಣ ಉದ್ದಿಮೆಗಳು ಜಿಎಸ್‌ಟಿ ಅಸಮರ್ಪಕ ಅನುಷ್ಠಾನ ಹಾಗೂ ಅವಸರದಿಂದ ಮಾಡಲಾಗಿರುವ ನೋಟು ರದ್ದತಿಯ ಹೊಡೆತದ ಆಘಾತದಿಂದ ಇನ್ನೂ ಹೊರಬಂದಿಲ್ಲ ಎಂದವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News