ಸಮವಸ್ತ್ರದ ಹೆಮ್ಮೆ ಕಳೆದುಕೊಳ್ಳುವ ಬೇಸರವಿದೆ: ಎಸ್.ಪಿ. ವೈದ್

Update: 2018-09-08 14:18 GMT

ಶ್ರೀನಗರ, ಸೆ.8: “ಸಮವಸ್ತ್ರದಲ್ಲಿದ್ದಾಗ ಹೆಮ್ಮೆ ಮತ್ತು ತೃಪ್ತಿಯ ಭಾವನೆ ಇರುತ್ತದೆ. ಅದನ್ನು ನಾನಿನ್ನು ಕಳೆದುಕೊಳ್ಳಲಿದ್ದೇನೆ. ನನ್ನ ಮುಂದಿನ ಕರ್ತವ್ಯ ನಿರ್ವಹಣೆಯ ಸಂದರ್ಭದಲ್ಲಿ ಇದು ನನಗಾಗುವ ಬಹುದೊಡ್ಡ ನಷ್ಟವಾಗಿರುತ್ತದೆ” ಎಂದು ಜಮ್ಮು ಕಾಶ್ಮೀರ ಪೊಲೀಸ್ ವಿಭಾಗದ ಮಾಜಿ ಮುಖ್ಯಸ್ಥ ಎಸ್.ಪಿ.ವೈದ್ ಹೇಳಿದ್ದಾರೆ.

 ಗುರುವಾರ ವೈದ್‌ರನ್ನು ಪೊಲೀಸ್ ಮುಖ್ಯಸ್ಥ ಹುದ್ದೆಯಿಂದ ತೆಗೆದು ಹಾಕಿ ರಾಜ್ಯದ ಸಾರಿಗೆ ಆಯುಕ್ತರನ್ನಾಗಿ ವರ್ಗಾಯಿಸಲಾಗಿತ್ತು. ಜಮ್ಮು ಕಾಶ್ಮೀರದ ನೂತನ ರಾಜ್ಯಪಾಲ ಸತ್ಯಪಾಲ್ ಮಲಿಕ್‌ರೊಂದಿಗೆ ವೈದ್ ತೀವ್ರ ಭಿನ್ನಾಭಿಪ್ರಾಯ ಹೊಂದಿದ್ದರು ಎನ್ನಲಾಗಿದೆ. ಅಲ್ಲದೆ ಅಪಹೃತ ಪೊಲೀಸ್ ಸಿಬ್ಬಂದಿಗಳ ಬಿಡುಗಡೆಗಾಗಿ ಭಯೋತ್ಪಾದಕರ ಬಂಧುಗಳನ್ನು ಬಿಡುಗಡೆ ಮಾಡಿರುವುದೂ ವಿವಾದಕ್ಕೆ ಕಾರಣವಾಗಿತ್ತು.

ಕಾಶ್ಮೀರದಲ್ಲಿ ಹಿಂಸಾಚಾರದ ಆವೃತ್ತಿಯನ್ನು ಸಮಾಪ್ತಿಗೊಳಿಸಲು ತಾನು ಬಯಸಿದ್ದೆ. ಹಿಂಸಾಚಾರ ಕಡಿಮೆಯಾಗಿದ್ದರೂ ಪೂರ್ತಿ ಕೊನೆಗೊಂಡಿಲ್ಲ. ನೂತನ ಡಿಜಿಪಿ ಹಾಗೂ ಅವರ ತಂಡ ಈ ಕಾರ್ಯ ಪೂರ್ತಿಗೊಳಿಸಲಿ ಎಂದು ಶುಭ ಹಾರೈಸುವುದಾಗಿ ವೈದ್ ತಿಳಿಸಿದರು. ವೈದ್ ಕಳೆದ 20 ತಿಂಗಳಿಂದ ರಾಜ್ಯದ ಪೊಲೀಸ್ ಪಡೆಯ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸಿದ್ದು ಇವರ ಸ್ಥಾನಕ್ಕೆ ಬಂಧೀಖಾನೆ ಇಲಾಖೆಯ ಡಿಜಿಪಿ ದಿಲ್‌ಭಾಗ್ ಸಿಂಗ್‌ರನ್ನು ನೇಮಿಸಲಾಗಿದೆ. ಭಯೋತ್ಪಾದಕರ ಕುಟುಂಬದವರು ವಾಸಿಸುತ್ತಿದ್ದ ಮನೆಯನ್ನು ಸುಟ್ಟು ಹಾಕಿರುವುದು(ಸೇನಾ ಕಾರ್ಯಾಚರಣೆ ಸಂದರ್ಭ), ಅಲ್ಲದೆ ಕುಟುಂಬದವರ ವಿರುದ್ಧ ಕ್ರಮ ಕೈಗೊಂಡಿರುವುದು ಮುಂತಾದ ಕಾರ್ಯ ನಡೆಸಲು ನಿಮಗೆ ಯಾರು ಸೂಚಿಸಿದ್ದರು ಎಂಬ ಪ್ರಶ್ನೆಗೆ ಉತ್ತರಿಸಲು ವೈದ್ ನಿರಾಕರಿಸಿದರು. ಭಯೋತ್ಪಾದಕರ ಕುಟುಂಬದವರ ವಿರುದ್ಧ ಸೇನಾಪಡೆ ಕ್ರಮ ಕೈಗೊಂಡಿರುವುದಕ್ಕೆ ಪ್ರತೀಕಾರವಾಗಿ ಭಯೋತ್ಪಾದಕರು ಕಳೆದ ವಾರ ಪೊಲೀಸರ ಕುಟುಂಬದವರನ್ನು ಅಪಹರಿಸಿದ್ದರು. ಬಳಿಕ ಅಪಹೃತರ ಬಿಡುಗಡೆಗಾಗಿ ಒಬ್ಬ ಭಯೋತ್ಪಾದಕರ ಸಂಬಂಧಿಕರನ್ನು ಬಿಡುಗಡೆಗೊಳಿಸಲಾಗಿತ್ತು. ದಕ್ಷಿಣ ಕಾಶ್ಮೀರದಲ್ಲಿ ಮೂವರು ಪೊಲೀಸರು ಹಾಗೂ ಅವರ ಎಂಟು ಮಂದಿ ಸಂಬಂಧಿಕರನ್ನು ಭಯೋತ್ಪಾದಕರು ಅಪಹರಿಸಿ, ತಮ್ಮ ಸಂಬಂಧಿಕರ ಬಿಡುಗಡೆ ಮಾಡುವಂತೆ ಒತ್ತಡ ಹೇರಿದ್ದರು.

ಈ ಸಂದರ್ಭ ಪೊಲೀಸರು ಬಿಡುಗಡೆ ಮಾಡಿದವರಲ್ಲಿ ಹಿಝ್‌ಬುಲ್ ಮುಜಾಹಿದೀನ್ ಉಗ್ರ ರಿಯಾಝ್ ನೈಕೂನ ತಂದೆಯೂ ಸೇರಿದ್ದರು. ಕೇಂದ್ರ ಸರಕಾರದೊಂದಿಗೆ ಭಿನ್ನಾಭಿಪ್ರಾಯ ಹೊಂದಿರುವ ವರದಿಯ ಬಗ್ಗೆಯೂ ಅವರು ಪ್ರತಿಕ್ರಿಯಿಸಲು ನಿರಾಕರಿಸಿದರು. ವೈದ್‌ರನ್ನು ಪೊಲೀಸ್ ಮುಖ್ಯಸ್ಥರ ಹುದ್ದೆಯಿಂದ ಕೆಳಗಿಳಿಸಿದ ಬಳಿಕ ಕೇಂದ್ರ ಸರಕಾರ ರಾಜ್ಯದ ಪೊಲೀಸ್ ಪಡೆಗೆ ಕಾರ್ಯಾಚರಣೆ ನಿಧಿಯನ್ನು ಬಿಡುಗೆಗೊಳಿಸಿತ್ತು ಹಾಗೂ ಅವರಿಗಿಂತ ಕಡಿಮೆ ಸೇವಾನುಭವ ಇರುವ ಮುನೀರ್ ಖಾನ್‌ಗೆ ಕೆಲವು ಜವಾಬ್ದಾರಿಗಳನ್ನು ವಹಿಸಲಾಗಿತ್ತು. ಈ ಬಗ್ಗೆ ತಮ್ಮ ಆಕ್ಷೇಪವನ್ನು ವೈದ್ ರಾಜ್ಯಪಾಲರಿಗೆ ಹಾಗೂ ಗೃಹ ಇಲಾಖೆಯ ಕಾರ್ಯದರ್ಶಿಗೆ ಸಲ್ಲಿಸಿದ್ದರು ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News