ಜಗತ್ತಿನ ಬೇಡಿಕೆಗೆ ತಕ್ಕಷ್ಟು ಹಲಸು ಸಂಸ್ಕರಣೆ ಆಗುತ್ತಿಲ್ಲ: ಶ್ರೀ ಪಡ್ರೆ

Update: 2018-09-08 14:41 GMT

ಬಂಟ್ವಾಳ, ಸೆ. 8: ಜಗತ್ತಿನಲ್ಲಿ ಭಾರತೀಯ ಹಲಸಿಗೆ ಭಾರೀ ಬೇಡಿಕೆ ಇದ್ದರೂ ಇಲ್ಲಿ ಸಂಸ್ಕರಣೆ ಕೊರತೆಯಿಂದಾಗಿ ಬೇಡಿಕೆಗೆ ತಕ್ಕಷ್ಟು ಪೂರೈಕೆ ಮಾಡಲು ಸಾಧ್ಯವಾಗುತ್ತಿಲ್ಲ. ಮಾವು ಹಣ್ಣುಗಳ ರಾಜ ಎಂಬುದು ನಿಜ ಆಗಿದ್ದರೂ ಹಲಸು "ಕಿಂಗ್ ಮೇಕರ್" ಎಂಬುದು ಅಷ್ಟೇ ಸತ್ಯ. ಕಲ್ಪವೃಕ್ಷದಂತೆ ಎಲ್ಲ ರೀತಿಯಿಂದಲೂ ಉಪಯೋಗಕ್ಕೆ ಸಿಗುವ ಹಲಸಿನ ಬಗ್ಗೆ ಕೀಳರಿಮೆ ತೊರೆದು, ಸ್ವಾದಿಷ್ಟಕರ ಮತ್ತು ಆರೋಗ್ಯದಾಯಕ ಹಲಸು ಹಾಗೂ ಹಲಸಿನ ಖಾದ್ಯ ವರ್ಷವಿಡೀ ಮಾರುಕಟ್ಟೆಯಲ್ಲಿ ಸುಗುವಂತೆ ಮಾಡುವ ಮಹತ್ತರ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಅಡಿಕೆ ಪತ್ರಿಕೆ ಕಾರ್ಯನಿರ್ವಾಹಕ ಸಂಪಾದಕ ಜಲ ತಜ್ಞ ಶ್ರೀಪಡ್ರೆ ಹೇಳಿದ್ದಾರೆ.

ತಾಲೂಕಿನ ಬಿ.ಸಿ.ರೋಡು ಸ್ಪರ್ಶ ಕಲಾ ಮಂದಿರದಲ್ಲಿ ಶನಿವಾರ ಆರಂಭಗೊಂಡ ಎರಡು ದಿನಗಳ ಅಕಾಲ ಹಲಸು ಸಂಗಮ-2018 ಕಾರ್ಯಕ್ರಮದಲ್ಲಿ ಮಧ್ಯಾಹ್ನ ನಡೆದ "ಹಲಸಿನ ವಿಶ್ವ ದರ್ಶನ" ಮಾತುಕತೆ ಕಾರ್ಯಕ್ರಮದಲ್ಲಿ ಅವರು ಮಾಹಿತಿ ನೀಡಿದರು.

ದೇಶದಲ್ಲಿ ಸಹಕಾರಿ ಮಾದರಿ ಅಥವಾ ಸ್ತ್ರೀಶಕ್ತಿ ಮತ್ತಿತರ ಸಂಘಟನೆಗಳು ಈ ಬಗ್ಗೆ ಆಸಕ್ತಿ ವಹಿಸಿ ಉದ್ಯಮವನ್ನಾಗಿ ರೂಪಿಸಿಕೊಂಡಾಗ ನಿರುದ್ಯೋಗ ಸಮಸ್ಯೆಯೂ ನಿವಾರಣೆಯಾಗಲಿದೆ. ಮಾತ್ರವಲ್ಲದೆ ಮುಂದಿನ ಒಂದು ವರ್ಷದೊಳಗೆ ಭಾರತಾದ್ಯಂದ ಹಲಸು ಸಂಸ್ಕರಣೆ ಉದ್ಯಮವಾಗಿ ಪರಿವರ್ತನೆಯಾಗಲಿದೆ ಎಂದರು.

ಈಗಾಗಲೇ ಕೇರಳದಲ್ಲಿ ಗೃಹ ಕೈಗಾರಿಕೆಯಾಗಿ ಹಲಸು ಖಾದ್ಯ ತಯಾರಿ ಮತ್ತು ಸಂಸ್ಕರಣೆ ಉದ್ಯಮ ಯಶಸ್ವಿಯಾಗಿ ನಡೆಯುತ್ತಿದ್ದರೂ ಯಾಂತ್ರೀಕರಣ ವ್ಯವಸ್ಥೆ ಬೆಳವಣಿಗೆ ಆಗಿಲ್ಲ. ಇಂಡೋನೇಶಿಯಾ ದೇಶದಲ್ಲಿ ಮಾತ್ರ ಹಲಸು ಉದ್ಯಮವು ಗರಿಷ್ಟ ಪ್ರಮಾಣದಲ್ಲಿ ಯಾಂತ್ರೀಕರಣಗೊಂಡಿದ್ದು, ಉಳಿದಂತೆ ಮೆಕ್ಸಿಕೋ, ಶ್ರೀಲಂಕಾ ಮತ್ತಿತರ ರಾಷ್ಟ್ರಗಳಲ್ಲಿ ಕೂಡಾ ಹಲಸು ಉದ್ಯಮವಾಗಿ ಬೆಳೆದು ಬಂದಿದೆ. ಮೆಕ್ಸಿಕೋ ಯಾಂತ್ರೀಕರಣಕ್ಕೆ ಸಂಶೋಧನೆ ಮುಂದುವರಿಸಿದ್ದರೆ, ಶ್ರೀಲಂಕಾದಲ್ಲಿ 5 ಸಾವಿರ ಕುಟುಂಬಗಳು ಹಲಸು ತುಂಡರಿಸಿ ಸಂಸ್ಕರಿಸುತ್ತಿದೆ. ಕೇರಳದಲ್ಲಿ ವರ್ಷಕ್ಕೆ ಸುಮಾರು 30 ಲಕ್ಷ ಹಪ್ಪಳ ತಯಾರಿಸುತ್ತಿದ್ದರೂ ಮತ್ತಷ್ಟು ಬೇಡಿಕೆ ಇದೆ. ಹಲಸಿನ ಬೀಜದಿಂದಲೇ 12 ಬಗೆಯ ತಿನಿಸು ತಯಾರಾಗುತ್ತಿದೆ. ಇಲ್ಲಿನ ಎರಡು ಹೋಟೆಲುಗಳಲ್ಲಿ ಅನ್ನ ಹೊರತುಪಡಿಸಿ ಉಳಿದಂತೆ ಎಲ್ಲಾ ಹಲಸಿನ ಖಾದ್ಯವನ್ನೇ ನೀಡುತ್ತಿದ್ದಾರೆ ಎಂದು ಮಾಹಿತಿ ನೀಡಿದರು.

ಮಹಾರಾಷ್ಟ್ರದಲ್ಲಿ ಹಲಸಿನ ಪಲ್ಪ್ ತಯಾರಿಸಿ ವಿದೇಶಗಳಿಗೆ ರಪ್ತುಗೊಳಿಸುವ ಉದ್ಯಮ ಯಶಸ್ವಿಯಾಗಿದೆ. ಈ ದೇಶದಲ್ಲಿ 1 ಸಾವಿರ ಹೆಕ್ಟೇರು ಪ್ರದೇಶದಲ್ಲಿ ಹಲಸು ಬೆಳೆಯಲಾಗುತ್ತಿದೆ ಎಂದು ಸರಕಾರಿ ದಾಖಲೆಯಲ್ಲಿ ಕಂಡು ಬಂದಿದ್ದರೂ ಎಲ್ಲಿವೆ...? ಎಂಬ ಪ್ರಶ್ನೆಗೆ ಉತ್ತರ ಇಲ್ಲ ಎಂದು ಅವರು ಖೇದ ವ್ಯಕ್ತಪಡಿಸಿದರು.

ಇದೇ ವೇಳೆ ತುಮಕೂರಿನ ಕೃಷಿತಜ್ಞ ಡಾ.ಕರುಣಾಕರ್ ಮಾತನಾಡಿ, ರಾಜ್ಯದಲ್ಲಿ ಕಡಿಮೆ ಮಳೆ ಬೀಳುತ್ತಿರುವ ತುಮಕೂರು, ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಪ್ರದೇಶದಲ್ಲಿ "ಸಿದ್ಧು" ಎಂಬ ಹೆಸರಿನಲ್ಲಿ ತಲಾ ಎರಡೂವರೆ ಕಿಲೋ ತೂಕದ ಕೆಂಪು ಬಣ್ಣದ ಸೊಳೆ ಹೊಂದಿರುವ ಆಕರ್ಷಕ ಹಲಸು ತಳಿ ಸಿದ್ಧಪಡಿಸಲಾಗಿದ್ದು, ಭಾರೀ ಯಶಸ್ವು ಕಂಡಿದೆ ಎಂದರು.

ಸಮಿತಿ ಅಧ್ಯಕ್ಷ ಜಿ.ಆನಂದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. 

ಗೌರವಾಧ್ಯಕ್ಷ ಸುದರ್ಶನ್ ಜೈನ್, ಸಂಚಾಲಕ ಜಯಾನಂದ ಪೆರಾಜೆ, ಪ್ರಮುಖರಾದ ಅನಂತ ಪ್ರಸಾದ್ ನೈತಡ್ಕ, ನಾ.ಕಾರಂತ ಪೆರಾಜೆ, ಪಾಂಡುರಂಗ ಭಟ್ ಕುದಿಂಗಿಲ, ಮಧುಸೂದನ ಶೆಣೈ, ಸುಭಾಶ್ಚಂದ್ರ ಜೈನ್ ಮತ್ತಿತರರು ಇದ್ದರು.

ಸಮಿತಿ ಗೌರವ ಸಲಹೆಗಾರ ಮಹಾಬಲೇಶ್ವರ ಹೆಬ್ಬಾರ್ ಸ್ವಾಗತಿಸಿ, ಪತ್ರಕರ್ತ ಮೋಹನ್ ಕೆ.ಶ್ರೀಯಾನ್ ರಾಯಿ ವಂದಿಸಿದರು. ತುಳು ಸಾಹಿತ್ಯ ಅಕಾಡೆಮಿ ಸದಸ್ಯ ಎ.ಗೋಪಾಲ ಅಂಚನ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News