35 ಎ, 370 ಕಲಂ ಬಗ್ಗೆ ಕೇಂದ್ರ ನಿಲುವು ಸ್ಪಷ್ಟಪಡಿಸಲಿ: ಫಾರೂಕ್ ಅಬ್ದುಲ್ಲಾ

Update: 2018-09-08 14:47 GMT

ಹೊಸದಿಲ್ಲಿ, ಸೆ. 8: ಜಮ್ಮುಕಾಶ್ಮೀರ ಪಂಚಾಯತ್ ಹಾಗೂ ನಗರ ಸಭೆ ಚುನಾವಣೆಯಲ್ಲಿ ಭಾಗವಹಿಸದೇ ಇರುವ ನಿರ್ಧಾರದ ದಿನದ ಬಳಿಕ ನ್ಯಾಶನಲ್ ಕಾನ್ಫರೆನ್ಸ್ ಪಕ್ಷದ ವರಿಷ್ಠ ಫಾರೂಕ್ ಅಬ್ದುಲ್ಲಾ, 35ಎ ಹಾಗೂ 370 ಕಲಂ ಬಗ್ಗೆ ಕೇಂದ್ರ ತನ್ನ ನಿಲುವನ್ನು ಸ್ಪಷ್ಟಪಡಿಸದೇ ಇದ್ದರೆ 2019ರಲ್ಲಿ ನಡೆಯಲಿರುವ ಲೋಕಸಭೆ ಹಾಗೂ ವಿಧಾನ ಸಭೆ ಚುನಾವಣೆ ಬಹಿಷ್ಕರಿಸಲಾಗುವುದು ಎಂದು ಶನಿವಾರ ಎಚ್ಚರಿಸಿದ್ದಾರೆ.

 1954ರ ರಾಷ್ಟ್ರಪತಿಗಳ ಆದೇಶದಂತೆ ಸಂವಿಧಾನದಲ್ಲಿ 35 ಎ ಕಲಂ ಅನ್ನು ಅಳವಡಿಸಲಾಗಿದೆ. ಇದರಂತೆ ಜಮ್ಮು ಹಾಗೂ ಕಾಶ್ಮೀರದ ಜನರಿಗೆ ವಿಶೇಷ ಹಕ್ಕು ಹಾಗೂ ಸವಲತ್ತುಗಳನ್ನು ನೀಡಲಾಗಿದೆ. ಹೊರ ರಾಜ್ಯದ ಜನರು ಜಮ್ಮು ಹಾಗೂ ಕಾಶ್ಮೀರದಲ್ಲಿ ಸ್ಥಿರ ಆಸ್ತಿ ಹೊಂದುವುದನ್ನು ನಿಷೇಧಿಸಲಾಗಿದೆ. ಈ ಬಗ್ಗೆ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದೆ.

‘‘ನಾವು ನಮ್ಮ ಕಾರ್ಯಕರ್ತರ ಬಳಿಗೆ ಹೇಗೆ ಹೋಗುವುದು ಹಾಗೂ ಮತ ನೀಡಲು ಬನ್ನಿ ಎಂದು ಹೇಳುವುದು ಹೇಗೆ? ಮೊದಲು ನಮಗೆ ನ್ಯಾಯ ನೀಡಿ. 35 ಎ ಕಲಂನ ಬಗ್ಗೆ ನಿಮ್ಮ (ಕೇಂದ್ರ) ನಿಲುವು ಸ್ಪಷ್ಟಪಡಿಸಿ. ಜಮ್ಮು ಹಾಗೂ ಕಾಶ್ಮೀರಕ್ಕೆ ನೀಡಿದ ವಿಶೇಷ ಸ್ಥಾನಮಾನ ದುರ್ಬಲಗೊಳಿಸುವುದು ನಿಮ್ಮ ತಂತ್ರವಾಗಿದ್ದರೆ, ನಮ್ಮ ದಾರಿ ಕೂಡ ಬೇರೆ ಆಗಲಿದೆ. ಆದುದರಿಂದ ನಮಗೆ ಚುನಾವಣೆ ಬೇಡ. ಈ ಚುನಾವಣೆ (ಪಂಚಾಯತ್ ಹಾಗೂ ನಗರಸಭೆ) ಮಾತ್ರವಲ್ಲ, ಬದಲಾಗಿ ವಿಧಾನ ಸಭೆ ಹಾಗೂ ಲೋಕಸಭೆ ಚುನಾವಣೆಯನ್ನು ಕೂಡ ಬಹಿಷ್ಕರಿಸಲಿದ್ದೇವೆ ಎಂದು ನ್ಯಾಷನಲ್ ಕಾನ್ಫರೆನ್ಸ್‌ನ ಪಕ್ಷದ ಅಧ್ಯಕ್ಷ ಫಾರೂಕ್ ಅಬ್ದುಲ್ಲಾ ಹೇಳಿದ್ದಾರೆ.

ನ್ಯಾಶನಲ್ ಕಾನ್ಫರೆನ್ಸ್‌ನ ಸ್ಥಾಪಕ ಹಾಗೂ ತಂದೆ ಶೇಖ್ ಮುಹಮ್ಮದ್ ಅಬ್ದಲ್ಲಾ ಅವರ 36ನೇ ನಿಧನದ ದಿನವಾದ ಶನಿವಾರ ಇಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.

 ನಮ್ಮ ಪಕ್ಷ ಚುನಾವಣೆಯಿಂದ ಪಲಾಯನ ಮಾಡದು. ಆದರೆ, ಕೇಂದ್ರ ಸರಕಾರ ಜಮ್ಮು ಹಾಗೂ ಕಾಶ್ಮೀರದ ಜನರಿಗೆ ಮೊದಲು ನ್ಯಾಯ ನೀಡಬೇಕು. ರಾಜ್ಯದ ವಿಶೇಷ ಸ್ಥಾನಮಾನ ರಕ್ಷಿಸಲು ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಫಾರೂಕ್ ಅಬ್ದುಲ್ಲಾ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News