ವಿಪಕ್ಷಗಳ ಒಕ್ಕೂಟದ ನಾಯಕ ಪ್ರಾದೇಶಿಕ ಪಕ್ಷದವರಾಗಿರಬೇಕು: ಚಂದನ್ ಮಿತ್ರ

Update: 2018-09-08 16:59 GMT

ಹೊಸದಿಲ್ಲಿ, ಸೆ.8: 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ವಿರುದ್ಧ ರಚಿಸಲ್ಪಡುವ ವಿಪಕ್ಷಗಳ ಒಕ್ಕೂಟದ ಅಧ್ಯಕ್ಷ ಪ್ರಾದೇಶಿಕ ಪಕ್ಷದವರಾಗಿರಬೇಕು ಎಂದು ಇತ್ತೀಚೆಗೆ ಬಿಜೆಪಿ ತೊರೆದು ಟಿಎಂಸಿಗೆ ಸೇರ್ಪಡೆಗೊಂಡಿರುವ ಚಂದನ್ ಮಿತ್ರ ಹೇಳಿದ್ದಾರೆ.

ಕಾಂಗ್ರೆಸ್ ಮುಖಂಡ ಕಪಿಲ್ ಸಿಬಲ್ ಅವರ ‘ ಶೇಡ್ಸ್ ಆಫ್ ಟ್ರುಥ್- ಎ ಜರ್ನಿ ಡಿರೈಲ್ಡ್’ ಪುಸ್ತಕವನ್ನು ಬಿಡುಗಡೆಗೊಳಿಸುವ ಕಾರ್ಯಕ್ರಮದಲ್ಲಿ ಎನ್‌ಡಿ ಟಿವಿ ಹಮ್ಮಿಕೊಂಡಿದ್ದ ಚರ್ಚೆಯಲ್ಲಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು.

 ಇಂದಿನ ದಿನದಲ್ಲಿ ಓರ್ವ ನಾಯಕ /ನಾಯಕಿ ತನ್ನ ಪ್ರದೇಶದಲ್ಲಿ ಪ್ರಭುತ್ವ ಹೊಂದಿಲ್ಲದಿದ್ದರೆ ಪ್ರಧಾನಿ ಹುದ್ದೆಗೆ ತನ್ನ ಹಕ್ಕು ಚಲಾಯಿಸಲು ಆಗದು. ಅವರನ್ನು ಯಾರೂ ಪರಿಗಣಿಸುವುದೇ ಇಲ್ಲ. ಮುಂದಿನ ದಿನದಲ್ಲಿ ಬಿಜೆಪಿಯೇತರ ಅಥವಾ ಕಾಂಗ್ರೆಸ್‌ಯೇತರ ಮೈತ್ರಿಕೂಟ ಇದ್ದರೆ, ಅಥವಾ ಕಾಂಗ್ರೆಸ್ ಪಕ್ಷ ಮೈತ್ರಿಕೂಟದ ಭಾಗವಾಗಿದ್ದರೂ, ಮೈತ್ರಿಕೂಟದ ನಾಯಕ ಮಾತ್ರ ಪ್ರಾದೇಶಿಕ ಪಕ್ಷದವರಾಗಿರಬೇಕು ಎಂದವರು ಹೇಳಿದರು.

 2019ರ ಚುನಾವಣೆಯಲ್ಲಿ ಬಿಜೆಪಿ ವಿರುದ್ಧದ ಮೈತ್ರಿಕೂಟದ ಸಾಧ್ಯತೆ ಚರ್ಚೆಯ ಪ್ರಮುಖ ವಿಷಯವಾಗಿತ್ತು. ಬಿಜೆಪಿ ವಿರುದ್ಧದ ಮೈತ್ರಿಕೂಟ ಅತ್ಯಗತ್ಯ ಎಂದು ಕಪಿಲ್ ಸಿಬಲ್, ಪಿ.ಚಿದಂಬರಂ, ಸೀತಾರಾಮ ಯೆಚೂರಿ, ಚಂದನ್ ಮಿತ್ರ ಹಾಗೂ ಶರದ್ ಯಾದವ್ ಅಭಿಪ್ರಾಯಪಟ್ಟರು. ಭಾರತದ ಚುನಾವಣೆ ವ್ಯಕ್ತಿಗತವಾಗಿರದೆ ಸಿದ್ಧಾಂತವನ್ನು ಆಧರಿಸಿದ್ದು 2019ರ ಚುನಾವಣೆ ಮೋದಿ  vs ಭಾರತ ಎಂಬ ವಿಷಯದ ಮೇಲೆ ನಡೆಯಲಿದೆ ಎಂದು ಅವರು ಅಭಿಪ್ರಾಯ ವ್ಯಕ್ಯಪಡಿಸಿದರು.

ಮೋದಿ ವಿರುದ್ಧ ಪ್ರಧಾನಿ ಅಭ್ಯರ್ಥಿ ಯಾರಾಗಬಹುದು ಎಂಬ ಪ್ರಶ್ನೆಗೆ ಚಂದನ್ ಮಿತ್ರರನ್ನು ಬಿಟ್ಟು ಉಳಿದವರೆಲ್ಲರೂ ಪ್ರಧಾನಿ ಅಭ್ಯರ್ಥಿ ಎಂಬುದು ಮಹತ್ವದ ವಿಷಯವಲ್ಲ ಎಂದುತ್ತರಿಸಿದರು. ಪ್ರಧಾನಿ ಅಭ್ಯರ್ಥಿಯನ್ನು ಘೋಷಿಸದೇ ನಡೆದಿರುವ ಈ ಹಿಂದಿನ ಹಲವಾರು ಚುನಾವಣೆಗಳ ಉದಾಹರಣೆಯನ್ನು ಜೆಡಿಯು ಸಂಸದ ಶರದ್ ಯಾದವ್ ನೀಡಿದರು. ಆದರೆ ಇದನ್ನು ಒಪ್ಪದ ಮಿತ್ರ, ಈಗ ಯಮುನೆಯಲ್ಲಿ ಸಾಕಷ್ಟು ನೀರು ಹರಿದು ಹೋಗಿದೆ. ಜನತೆ ಹೆಚ್ಚಿನ ತಿಳುವಳಿಕೆ ಹೊಂದಿದ್ದಾರೆ. ಆದ್ದರಿಂದ ಪ್ರಧಾನಿ ಅಭ್ಯರ್ಥಿಯ ಯೋಗ್ಯತೆ,ಅರ್ಹತೆಯನ್ನು ಪರಿಗಣಿಸಲಾಗುತ್ತದೆ ಎಂದು ಹೇಳಿದರು. ಕಾಂಗ್ರೆಸ್ ಪಕ್ಷದವರನ್ನು ಪ್ರಧಾನಿ ಅಭ್ಯರ್ಥಿ ಎಂದು ಬಿಂಬಿಸಬಹುದು ಎಂದು ಭಾವಿಸುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಕಪಿಲ್ ಸಿಬಲ್, ನನಗದು ತಿಳಿದಿಲ್ಲ. ಆ ಸಂದರ್ಭ ಏನಾಗುತ್ತದೋ ನೋಡೋಣ. ಅದನ್ನು ಜನತೆ ನಿರ್ಧರಿಸಬೇಕಿದೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News