ಸಮಾಜದ ಬಡವರ ಏಳಿಗೆಗೆ ಸಂಘಟನೆ ನೆರವಾಗಲಿ: ನ್ಯಾ.ಸಂತೋಷ್ ಹೆಗ್ಡೆ

Update: 2018-09-09 12:49 GMT

ಉಡುಪಿ, ಸೆ. 9: ಬಂಟ ಸಮಾಜದಲ್ಲಿ ಒಗ್ಗಟ್ಟು ಬಹಳ ಮುಖ್ಯ. ನಮ್ಮ ಸಮಾಜದಲ್ಲಿರುವ ಬಡವರ ಏಳಿಗೆಗೆ ಸಂಘಟನೆ ಗಳು ಕೆಲಸ ಮಾಡಬೇಕಾಗಿದೆ. ಇದಕ್ಕೆ ನಾನು ಕೈಜೋಡಿಸಲು ಸಿದ್ಧನಿದ್ದೇನೆ ಎಂದು ರಾಜ್ಯ ನಿವೃತ್ತ ಮುಖ್ಯ ಲೋಕಾಯುಕ್ತ ಜಸ್ಟಿಸ್ ಎನ್.ಸಂತೋಷ್ ಹೆಗ್ಡೆ ಹೇಳಿದ್ದಾರೆ.

ಜಾಗತಿಕ ಬಂಟರ ಸಂಘಗಳ ಒಕ್ಕೂಟ, ಉಡುಪಿ ಜಿಲ್ಲೆಯ ಸಮಸ್ತ ಬಂಟರ ಸಂಘಗಳ ಸಹಯೋಗದೊಂದಿಗೆ ನಗರದ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾಂಗಣದ ತೋನ್ಸೆ ಶಶಿರೇಖಾ ಆನಂದ ಶೆಟ್ಟಿ ವೇದಿಕೆಯಲ್ಲಿ ಆಯೋಜಿಸಲಾದ ಒಂದು ದಿನದ ವಿಶ್ವ ಬಂಟರ ಸಮ್ಮಿಲನ-2018ನ್ನು ಪಿಂಗಾರದ ಕೊನೆಯನ್ನು ಅರಳಿಸುವ ಮೂಲಕ ಉದ್ಘಾಟಿಸಿ, ಮಾತನಾಡುತಿದ್ದರು.

ನಾನೂ ಒಬ್ಬ ಬಂಟ ಎಂದು ಹೇಳಿಕೊಳ್ಳಲು ನನಗೆ ಹೆಮ್ಮೆ ಇದೆ. ಸುಪ್ರೀಂ ಕೋರ್ಟಿನ ನ್ಯಾಯಾಧೀಶರಾದ ಮೂವರು ದಕ್ಷಿಣ ಕನ್ನಡಿಗರೂ ಬಂಟರು ಎಂಬುದು ನಮಗೆ ಹೆಮ್ಮೆಯ ವಿಷಯವಾಗಿದೆ. ತಾವು ಹಿಡಿದ ಕೆಲಸವನ್ನು ಗುರಿ ಮುಟ್ಟಿಸುವ ಬಂಟರ ಛಲವೇ ಅವರನ್ನು ಇಂದು ಸಮಾಜದ ವಿವಿಧ ರಂಗಗಳಲ್ಲಿ ಉನ್ನತ ಸ್ಥಾನಕ್ಕೆ ಏರಿಸಿದೆ ಎಂದು ಅವರು ಅಭಿಪ್ರಾಯಪಟ್ಟರು.

ಕಳೆದ 70ರ ದಶಕದಲ್ಲಿ ಬಂದ ಭೂಮಸೂದೆ ಕಾನೂನಿನಿಂದ ಬಂಟ ಸಮಾಜ ಸಾಕಷ್ಟು ಕಷ್ಟ-ನಷ್ಟ ಅನುಭವಿಸಿದೆ. ಆದರೆ ಇವನ್ನೆಲ್ಲಾ ಮೀರಿ ಕಠಿಣ ಪರಿಶ್ರಮದಿಂದ ಸಮಾಜ ಇಂದು ತಲೆ ಎತ್ತಿ ನಿಲ್ಲುವಂತಾಗಿದೆ. ಮುಲ್ಕಿ ಸುಂದರ್‌ರಾಮ್ ಶೆಟ್ಟಿ ಅಂಥವರು ಬ್ಯಾಂಕಿಂಗ್ ಕ್ಷೇತ್ರದಲ್ಲಿ ಇದೇ ರೀತಿ ಪರಿಶ್ರಮದಿಂದ ವಿಜಯ ಬ್ಯಾಂಕ್‌ನ್ನು ಕಟ್ಟಿ ಬೆಳೆಸಿದ್ದಾರೆ ಎಂದರು.

ಬಂಟ ಸಮಾಜದಲ್ಲೂ ಇಂದು ಸಾಕಷ್ಟು ಮಂದಿ ಬಡವರಿದ್ದಾರೆ. ಅವರಿಗೆ ನಮ್ಮ ವಿವಿಧ ಸಂಘಟನೆಗಳು ಸಹಾಯ ಮಾಡಬೇಕಾಗಿದೆ. ನಾನೂ ಇದಕ್ಕಾಗಿ ಕೈಜೋಡಿಸಲು ಸಿದ್ಧನಿದ್ದೇನೆ ಎಂದು ನ್ಯಾ.ಸಂತೋಷ್ ಹೆಗ್ಡೆ ನುಡಿದರು.

ಇದೇ ವೇಳೆ ವಿಶ್ವ ಬಂಟ ಸಮ್ಮಿಲನದ ಅಂಗವಾಗಿ ಹೊರತರಲಾದ ‘ಬಂಟ ಸೌರಭ’ ಸ್ಮರಣ ಸಂಚಿಕೆಯನ್ನು ಜಸ್ಟಿಸ್ ಎನ್.ಸಂತೋಷ್ ಹೆಗ್ಡೆ ಬಿಡುಗಡೆಗೊಳಿಸಿದರು. ಸಂಘಟಕರ ವತಿಯಿಂದ ಅವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News