ಸೆ.10ರಂದು ಭಾರತ ಬಂದ್: ದ.ಕ., ಉಡುಪಿಯಲ್ಲಿ ವಿವಿಧ ಸಂಘಟನೆಗಳ ಬೆಂಬಲ

Update: 2018-09-09 09:24 GMT

ಮಂಗಳೂರು, ಸೆ. 9: ಪೆಟ್ರೋಲ್, ಡೀಸೆಲ್ ಹಾಗೂ ಅಡುಗೆ ಅನಿಲ ದರ ಏರಿಕೆಯನ್ನು ಖಂಡಿಸಿ ಅಖಿಲ ಭಾರತ ಕಾಂಗ್ರೆಸ್ ಸಮಿತಿಯು ಸೆ.10ರಂದು ದೇಶಾದ್ಯಂತ ಬಂದ್ ನಡೆಸುವಂತೆ ನೀಡಲಾದ ಕರೆಗೆ ದ.ಕ.ಜಿಲ್ಲೆಯಲ್ಲಿ ವ್ಯಾಪಕ ಬೆಂಬಲ ವ್ಯಕ್ತವಾಗಿದೆ.

ಈಗಾಗಲೇ ವಿವಿಧ ಕಾರ್ಮಿಕ ಸಂಘಟನೆಗಳು ನಗರ ಮತ್ತು ಹೊರವಲಯದಲ್ಲಿ ಶಕ್ತಿ ಪ್ರದರ್ಶನ, ಜಾಥಾ ನಡೆಸಿದೆಯಲ್ಲದೆ ಸಾರ್ವಜನಿಕರು ಸಹಕರಿಸುವಂತೆ ಮನವಿ ಮಾಡಿದೆ. ಈ ಮಧ್ಯೆ ದ.ಕ. ಜಿಲ್ಲಾ ಬಸ್ ಮಾಲಕರ ಸಂಘ ಹಾಗೂ ಕೆನರಾ ಬಸ್ ಮಾಲಕರ ಸಂಘವು ಶನಿವಾರ ಪ್ರತ್ಯೇಕ ಸಭೆ ನಡೆಸಿ ಬಂದ್‌ಗೆ ನೈತಿಕ ಬೆಂಬಲ ವ್ಯಕ್ತಪಡಿಸಿದೆ. ಹಾಗಾಗಿ ದ.ಕ.ಜಿಲ್ಲೆಯ ಜೀವನಾಡಿಯಂತಿರುವ ಖಾಸಗಿ ಬಸ್‌ಗಳು ಸಂಚಾರ ಸ್ಥಗಿತಗೊಳಿಸಿದರೆ ಜಿಲ್ಲೆಯಲ್ಲಿ ಬಂದ್ ಯಶಸ್ವಿಯಾಗುವ ಸಾಧ್ಯತೆ ಇದೆ.

ಸಂಚಾರಕ್ಕೆ ಅಡ್ಡಿಯಾದರೆ ಬಸ್ ಸೇವೆ ಸ್ಥಗಿತಗೊಳಿಸಲು ಶನಿವಾರ ಮಂಗಳೂರಲ್ಲಿ ನಡೆದ ಬಸ್ ಮಾಲಕರ ಸಂಘದ ಸಭೆಯು ನಿರ್ಣಯ ಕೈಗೊಂಡಿವೆ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ಖಂಡನೀಯ. ಮಿತಿಮೀರಿದ ಏರಿಕೆಯಿಂದ ಬಸ್‌ಗಳ ಸಂಚಾರ ಅಸಾಧ್ಯವಾಗಿದೆ. ಬಸ್ ಮಾಲಕರು ನಷ್ಟದಲ್ಲಿ ಸಂಚಾರ ನಡೆಸುವಂತಾಗಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಆಗಾಗ ಡೀಸೆಲ್ ಬೆಲೆ ಏರಿಕೆಯಾದರೆ ಸಾರಿಗೆ ವ್ಯವಸ್ಥೆಯ ನಿರ್ವಹಣೆ ಸಾಧ್ಯವಿಲ್ಲ. ಹಾಗಾಗಿ ಪೆಟ್ರೋಲಿಯಂ ಉತ್ಪನ್ನಗಳನ್ನು ಜಿಎಸ್‌ಟಿ ವ್ಯಾಪ್ತಿಗೆ ತರಲು ಬಸ್ ಮಾಲಕರ ಸಂಘದ ಅಧ್ಯಕ್ಷ ದಿಲ್‌ರಾಜ್‌ ಆಳ್ವ ಹಾಗೂ ಪ್ರಧಾನ ಕಾರ್ಯಾದರ್ಶಿ ಪ್ರಕಾಶ್ ಶೇಕ ಆಗ್ರಹಿಸಿದ್ದಾರೆ.

ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ನೇತೃತ್ವ ಮತ್ತು ವಿವಿಧ ಸಂಘಟನೆಗಳ ಸಹಕಾರದೊಂದಿಗೆ ಈಗಾಗಲೆ ನಗರಾದ್ಯಂತ ಜನಜಾಗೃತಿ ಜಾಥಾ ನಡೆಸಲಾಗಿದೆ. ಮಾಜಿ ಸಚಿವ ರಮಾನಾಥ ರೈ ಕೂಡಾ ಬಂದ್‌ಗೆ ಬೆಂಬಲ ನೀಡುವಂತೆ ಮನವಿ ಮಾಡಿದ್ದಾರೆ. ಯುವ ಕಾಂಗ್ರೆಸ್ ಕೂಡಾ ಕಾರ್ಯಕರ್ತರನ್ನು ಬಂದ್ ಯಶಸ್ವಿಗೆ ಸಜ್ಜುಗೊಳಿಸುತ್ತಿವೆ. ರವಿವಾರ ಕಾಂಗ್ರೆಸ್‌ನ ಕೆಲವು ಘಟಕಗಳು ತುರ್ತು ಸಭೆ ಕರೆದಿದೆ.

ಕಾಂಗ್ರೆಸ್ ಪಕ್ಷ ನೀಡಿದ ಬಂದ್ ಕರೆಗೆ ಎಡಪಕ್ಷಗಳು ಕೂಡಾ ಬೆಂಬಲ ನೀಡಿದ್ದು, ಸೆ.10ರಂದು ದ.ಕ. ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಲು ಮುಂದಾಗಿದೆ. ತನ್ಮಧ್ಯೆ ಕೆಲವು ರಿಕ್ಷಾ ಸಂಘಟನೆಗಳು ಕೂಡಾ ಬಂದ್‌ಗೆ ಬೆಂಬಲ ಘೋಷಿಸಿವೆ.

ಜೆಡಿಎಸ್ ಬೆಂಬಲ

ಈ ಮಧ್ಯೆ ದ.ಕ. ಜಿಲ್ಲಾ ಜೆಡಿಎಸ್ ಕೂಡಾ ಬಂದ್‌ಗೆ ಬೆಂಬಲ ನೀಡಿವೆ. ಪಕ್ಷದ ಕಾರ್ಯಕರ್ತರು ಸೆ.10ರ ಬಂದ್‌ನಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಪಕ್ಷದ ಜಿಲ್ಲಾಧ್ಯಕ್ಷ ವಿಟ್ಲ ಮುಹಮ್ಮದ್ ಕುಂಞಿ ತಿಳಿಸಿದ್ದಾರೆ.

ಪೂರ್ವ ವಲಯ ಬಸ್ ಮಾಲಕರ ಒಕ್ಕೂಟ

ಸೆ.10ರಂದು ನೀಡಲಾದ ಭಾರತ್ ಬಂದ್ ಕರೆಗೆ ನೈತಿಕ ಬೆಂಬಲ ನೀಡುವುದಾಗಿ ಪೂರ್ವ ವಲಯ ಸಿಟಿ ಮತ್ತು ಸರ್ವಿಸ್ ಬಸ್ ಮಾಲಕರ ಒಕ್ಕೂಟದ ಅಧ್ಯಕ್ಷ ಅಝೀಝ್ ಪರ್ತಿಪ್ಪಾಡಿ ತಿಳಿಸಿದ್ದಾರೆ. ಡೀಸೆಲ್ ದರ ಏರಿಕೆಯಿಂದ ಬಸ್ ಸಂಚಾರ ನಡೆಸಲು ಅಸಾಧ್ಯವಾಗಿದೆ. ಬಸ್ ನಿರ್ವಹಣಾ ವೆಚ್ಚವು ಗಣನೀಯವಾಗಿದೆ. ಇದರಿಂದ ಬಸ್ ಸಾರಿಗೆ ಉದ್ಯಮದ ಮೇಲೆ ದುಷ್ಪರಿಣಾಮ ಬೀರಿದೆ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಡಿವೈಎಫ್‌ಐ

ಎಡಪಕ್ಷಗಳ ಸಹಿತ ವಿರೋಧ ಪಕ್ಷಗಳ ಕರೆಯನ್ವಯ ನಡೆಯುವ ಸೆ.10ರ ಭಾರತ್ ಬಂದ್ ಯಶಸ್ವಿಗೊಳಿಸುವಂತೆ ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಮನವಿ ಮಾಡಿದ್ದಾರೆ.

ಸಿಪಿಎಂ

ಕೇಂದ್ರ ಸರಕಾರದ ವಿರುದ್ಧ ಸೆ.10ರಂದು ದೇಶಾದ್ಯಂತ ನಡೆಯುವ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿರುವ ಸಿಪಿಎಂ ದ.ಕ. ಜಿಲ್ಲಾ ಸಮಿತಿಯು ಅಂದು ಬೆಳಗ್ಗೆ 10ಕ್ಕೆ ದ.ಕ. ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನಾ ಪ್ರದರ್ಶನ ನಡೆಸಲಿದೆ ಎಂದು ಪ್ರಕಟನೆ ತಿಳಿಸಿದೆ.

ಬಂದ್ ಕರೆ ರಾಜಕೀಯ ಪ್ರೇರಿತ

ತೈಲ ಬೆಲೆ ಏರಿಕೆ ವಿರೋಧಿಸಿ ಪ್ರತಿಪಕ್ಷಗಳು ಸೆ.10ರಂದು ನೀಡಿರುವ ಬಂದ್ ಕರೆಯು ರಾಜಕೀಯ ಪ್ರೇರಿತವಾಗಿದೆ ಎಂದು ದ.ಕ.ಜಿಲ್ಲಾ ಬಿಜೆಪಿ ಹೇಳಿಕೆಯಲ್ಲಿ ತಿಳಿಸಿದೆ.

ಇಂಧನ ಬೆಲೆ ಜಾಗತಿಕ ಮಾರುಕಟ್ಟೆಯ ಆಧಾರದಲ್ಲಿ ಏರಿಳಿತವಾಗುತ್ತಿರುವುದು ಸಾಮಾನ್ಯ. ಕಚ್ಚಾ ತೈಲದ ಬೆಲೆ ಏರಿಕೆಯಾಗುತ್ತಿದ್ದರೂ ರಾಜ್ಯದ ಕಾಂಗ್ರೆಸ್-ಜನತಾ ದಳ ಮೈತ್ರಿ ಸರಕಾರ ಇಂಧನ ಬೆಲೆಯಲ್ಲಿ ಕಳೆದ ಬಾರಿ 2 ರೂ. ಹೆಚ್ಚಿಸಿ ಗ್ರಾಹಕರಿಗೆ ಗಾಯದ ಮೇಲೆ ಬರೆ ಎಳೆದಿದೆ. ಈ ಸಂದರ್ಭ ಕಣ್ಣು ಮುಚ್ಚಿ ಕುಳಿತ ಕಾಂಗ್ರೆಸ್ ನಾಯಕರು ಲೋಕಸಭೆ ಚುನಾವಣಾ ದೃಷ್ಟಿಯಿಂದ ಸೆ.10ರಂದು ಬಂದ್‌ಗೆ ಕರೆ ಕೊಟ್ಟಿರುವುದು ರಾಜಕೀಯ ಪ್ರೇರಿತ ಎಂದು ಶಾಸಕ ಹಾಗೂ ಬಿಜೆಪಿ ಜಿಲ್ಲಾಧ್ಯಕ್ಷ ಸಂಜೀವ ಮಠಂದೂರು ತಿಳಿಸಿದ್ದಾರೆ.

ದ.ಕ., ಉಡುಪಿಯಲ್ಲಿ ಖಾಸಗಿ ಬಸ್ ಸೇವೆ ಸ್ಥಗಿತ

ಕಾಂಗ್ರೆಸ್ ಸೇರಿದಂತೆ ವಿಪಕ್ಷಗಳು ಕರೆ ನೀಡಿರುವ ಸೆ.10ರ ಭಾರತ ಬಂದ್‌ಗೆ ದ.ಕ. ಮತ್ತು ಉಡುಪಿ ಜಿಲ್ಲೆಯ ಕೆನರಾ ಬಸ್ ಮಾಲಕರ, ಚಾಲಕರ ಸಂಘ ಬೆಂಬಲ ನೀಡಿರುವ ಹಿನ್ನೆಲೆಯಲ್ಲಿ ಅಂದು ಜಿಲ್ಲೆಯ ಬಸ್ ಸಂಚಾರ ಸ್ಥಗಿತಗೊಳ್ಳುವ ಸಾಧ್ಯತೆ ಇದೆ.

ಇಂಧನ ಬೆಲೆಯನ್ನು ನಿಯಂತ್ರಿಸಲು ಕೇಂದ್ರ ಸರಕಾರ ವಿಫಲವಾದ ಹಿನ್ನೆಲೆಯಲ್ಲಿ ಜನಸಾಮಾನ್ಯರಲ್ಲಿ ಕೇಂದ್ರ ಸರಕಾರದ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು, ಅಂದು ಅವಿಭಜಿತ ಜಿಲ್ಲೆಗಳಲ್ಲಿ ಬಸ್ ಸಂಚಾರವನ್ನು ಸ್ಥಗಿತಗೊಳಿಸಲು ಬಸ್ ಮಾಲಕರ ಸಂಘಗಳು ನಿರ್ಧರಿಸಿವೆ ಎಂದು ಕೆನರಾ ಬಸ್ ಮಾಲಕರ ಸಂಘದ ಅಧ್ಯಕ್ಷ ರಾಜವರ್ಮ ಬಲ್ಲಾಳ್, ಉಪಾಧ್ಯಕ್ಷರಾದ ಸದಾನಂದ ಚಾತ್ರ, ದ.ಕ. ಜಿಲ್ಲಾ ಬಸ್ ಮಾಲಕರ ಸಂಘದ ಅಧ್ಯಕ್ಷ ದಿಲ್‌ರಾಜ್ ಆಳ್ವ, ಕಾರ್ಯದರ್ಶಿ ಪ್ರಕಾಶ್ ಶೇಕ ಹಾಗೂ ಉಡುಪಿ ಜಿಲ್ಲಾ ಬಸ್ ಮಾಲಕರ ಸಂಘದ ಅಧ್ಯಕ್ಷ ಸುರೇಶ್ ನಾಯಕ್ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಪ್ರತಿಭಟನೆಗೆ ಎಡಪಕ್ಷಗಳ ಕರೆ

ಉಡುಪಿ : ಬಿಜೆಪಿ ಸರಕಾರದ ನೀತಿಗಳಿಂದಾಗಿ ಪೆಟ್ರೋಲಿಯಂ ಉತ್ಪನ್ನ ಮತ್ತು ಇತರೆ ವಸ್ತುಗಳ ಬೆಲೆ ಏರಿಕೆ, ರಫೆಲ್ ವಿಮಾನ ಖರೀದಿ ಹಗರಣ, ಉದ್ಯೋಗ ಸೃಷ್ಟಿಸಲು ವಿಫಲ, ಕೋಮುವಾದಿ-ಸರ್ವಾಧಿಕಾರಿ ಧೋರಣೆಗಳ ಮುಂದುವರಿಕೆ ಸೇರಿದಂತೆ ವಿವಿಧ ಜನವಿರೋಧಿ ನೀತಿಗಳ ವಿರುದ್ಧ ದೇಶದಾದ್ಯಂತ ಹರತಾಳ, ಪ್ರತಿಭಟನೆ ನಡೆಸಲು 5 ಎಡ ಪಕ್ಷಗಳು ಕರೆ ನೀಡಿವೆ.

ಈ ಹಿನ್ನೆಲೆಯಲ್ಲಿ ಜಿಲ್ಲೆಯ ಉಡುಪಿ ಮತ್ತು ಕುಂದಾಪುರಗಳಲ್ಲಿ ಪ್ರತಿಭಟನೆ ನಡೆಸಲು ಸಿಪಿಎಂ ಉಡುಪಿ ಜಿಲ್ಲಾ ಕಾರ್ಯದರ್ಶಿ ಮಂಡಳಿ ನಿರ್ಧರಿಸಿದೆ.
ಕೇಂದ್ರ ಸರಕಾರದ ಅಕ್ರಮಗಳನ್ನು ಬಯಲಿಗೆಳೆಯಲು ಸೆ.10ರಂದು ದೇಶಾದ್ಯಂತ ಹರತಾಳ, ಪ್ರತಿಭಟನೆ ನಡೆಸಲು ಎಡಪಕ್ಷಗಳು ಕರೆ ನೀಡಿವೆ. ಜಿಲ್ಲೆಯ ನಾಗರಿಕರು, ವ್ಯಾಪಾರಸ್ಥರು ಸ್ವಯಂ ಪ್ರೇರಿತರಾಗಿ ಹರತಾಳ ನಡೆಸಿ ಬೆಂಬಲ ನೀಡುವಂತೆ ಅವರು ಮನವಿ ಮಾಡಿದೆ.

ಪಕ್ಷದ ವತಿಯಿಂದ ಉಡುಪಿಯಲ್ಲಿ ಸಂಜೆ 5:30ಕ್ಕೆ ಅಜ್ಜರಕಾಡಿನಲ್ಲಿ ಮತ್ತು ಕುಂದಾಪುರದಲ್ಲಿ ಸಂಜೆ 4 ಗಂಟೆಗೆ ಶಾಸ್ತ್ರಿ ಸರ್ಕಲ್‌ನಲ್ಲಿ ಸೆ.10ರಂದು ಪ್ರತಿಭಟನೆ ನಡೆಯಲಿದೆ. ಸಾರ್ವಜನಿಕರು ಇದರಲ್ಲಿ ಭಾಗವಹಿಸುವಂತೆ ಸಿಪಿಎಂ ಪ್ರಕಟನೆಯಲ್ಲಿ ತಿಳಿಸಿದೆ.

ಕಾಂಗ್ರೆಸ್ ಅಲ್ಪಸಂಖ್ಯಾತ ಸಮಿತಿ

ಕೇಂದ್ರ ಸರಕಾರದ ಜನ ವಿರೋಧಿ ನೀತಿಯನ್ನು ಖಂಡಿಸಿ ಸೋಮವಾರ ನಡೆಯುವ ಭಾರತ ಬಂದ್‌ಗೆ ಹೆಚ್ಚಿನ ಜನ ಬೆಂಬಲ ದೊರಕುತ್ತಿದ್ದು, ಭಾರತ್ ಬಂದ್‌ನ್ನು ಯಶಸ್ವಿಗೊಳಿಸಲು ಕಾಪು ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತ ಉತ್ತರ ವಲಯ ಅಧ್ಯಕ್ಷ ರಿಯಾಝ್ ಪಳ್ಳಿ ಆಗ್ರಹಿಸಿದ್ದಾರೆ.

ಉಡುಪಿ ಜಿಲ್ಲಾ ಬಂದ್‌ಗೆ ಕಾಂಗ್ರೆಸ್ ಕರೆ

ದಿನಬಳಕೆಯ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದ್ದಲ್ಲದೇ, ಪೆಟ್ರೋಲ್, ಡೀಸೆಲ್ ಸೇರಿದಂತೆ ಇಂಧನ ಬೆಲೆಯನ್ನು ನಿಯಂತ್ರಿಸಲು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ವಿಫಲವಾದ ಹಿನ್ನೆಲೆಯಲ್ಲಿ ಅದರ ಜನವಿರೋಧಿ ನೀತಿಗಳನ್ನು ಖಂಡಿಸಿ ಪ್ರಮುಖ ವಿರೋಧ ಪಕ್ಷವಾದ ಕಾಂಗ್ರೆಸ್ ಸೇರಿದಂತೆ ವಿವಿಧ ಪಕ್ಷಗಳು ಕರೆ ನೀಡಿರುವ ಸೆ.10ರ ಭಾರತ್ ಬಂದ್‌ಗೆ ಬೆಂಬಲ ನೀಡುವಂತೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜನಾರ್ದನ ತೋನ್ಸೆ ಉಡುಪಿ ಜಿಲ್ಲೆಯ ಜನರಿಗೆ ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News