ಸೆ.10ರ ಭಾರತ್ ಬಂದ್ ಯಶಸ್ವಿಗೆ ದ.ಕ. ಜಿಲ್ಲೆಯಲ್ಲಿ ಸಕಲ ಸಿದ್ಧತೆ

Update: 2018-09-09 10:10 GMT

ಮಂಗಳೂರು, ಸೆ.9: ಪೆಟ್ರೋಲ್, ಡೀಸೆಲ್ ಹಾಗು ಅಡುಗೆ ಅನಿಲ ದರ ಏರಿಕೆಯನ್ನು ಖಂಡಿಸಿ ಮತ್ತು ಬಿಜೆಪಿ ನೇತೃತ್ವದ ಕೇಂದ್ರ ಸರಕಾರದ ಅನೀತಿಯ ವಿರುದ್ಧ ಕಾಂಗ್ರೆಸ್, ಜೆಡಿಎಸ್, ಸಿಪಿಐ, ಸಿಪಿಎಂ ಹಾಗೂ ವಿವಿಧ ಸಮಾನ ಮನಸ್ಕ ಸಂಘಟನೆಗಳು ಜಂಟಿಯಾಗಿ ಸೆ.10ರಂದು ನಡೆಸಲು ಉದ್ದೇಶಿಸಿರುವ ಭಾರತ್ ಬಂದ್‌ಗೆ ದ.ಕ.ಜಿಲ್ಲೆಯಲ್ಲಿ ಸಕಲ ಸಿದ್ಧತೆ ನಡೆದಿದೆ.

ಕಾಂಗ್ರೆಸ್ ಪಕ್ಷದ ವಿವಿಧ ಘಟಕಗಳು ಅಲ್ಲಲ್ಲಿ ಸಭೆ ನಡೆಸಿ ಬಂದ್‌ಗೆ ಬೆಂಬಲ ಕೋರುತ್ತಿವೆ. ಅಂಗಡಿ ಮುಂಗಟ್ಟುಗಳಿಗೆ ತೆರಳಿ ಮನವಿ ಸಲ್ಲಿಸುತ್ತಿವೆ. ಈ ಮಧ್ಯೆ ವಿವಿಧ ಸಂಘಟನೆಗಳು ಕೂಡಾ ಭಾರತ್ ಬಂದ್‌ಗೆ ಬೆಂಬಲ ಘೋಷಿಸಿವೆ.

ಸ್ವಯಂ ಪ್ರೇರಿತ ಬಂದ್-ಬಲವಂತವಿಲ್ಲ

ಸೆ. 10ರಂದು ಸ್ವಯಂ ಪ್ರೇರಿತ ಬಂದ್‌ಗೆ ಕರೆ ನೀಡಲಾಗಿದೆಯೇ ವಿನಃ ಬಲವಂತದ ಬಂದ್ ಮಾಡುವುದಿಲ್ಲ. ತೈಲ ಬೆಲೆ ಏರಿಕೆಯಿಂದ ಜನಸಾಮಾನ್ಯರ ಬದುಕು ಶೋಚನೀಯವಾಗಿದೆ. ಇದನ್ನು ಮನಗಂಡು ಎಲ್ಲರೂ ಸ್ವಯಂ ಪ್ರೇರಿತ ಬಂದ್ ಮಾಡಬೇಕು. ಈ ಮಧ್ಯೆ ಹಾಲು ಪೂರೈಕೆ, ಪತ್ರಿಕೆ ವಿತರಣೆ, ಆಸ್ಪತ್ರೆಗಳು ಮತ್ತು ಮೆಡಿಕಲ್ ಅಂಗಡಿಗಳಿಗೆ ತೊಂದರೆಯಾಗದಂತೆ ನೋಡಿಕೊಳ್ಳಲು ಪಕ್ಷದ ಕಾರ್ಯಕರ್ತರಿಗೆ ಸ್ಪಷ್ಟ ಸೂಚನೆ ನೀಡಲಾಗಿದೆ ಎಂದು ಕಾಂಗ್ರೆಸ್ ಮುಖಂಡರು ತಿಳಿಸಿದ್ದಾರೆ.

ಸರಕಾರಿ ಬಸ್ ಓಡಾಟ ಸಂಶಯ

ಸೆ. 10ರಂದು ನಡೆಯುವ ಬಂದ್‌ಗೆ ಬೆಂಬಲ ಘೋಷಿಸಿ ಕರ್ತವ್ಯಕ್ಕೆ ಹಾಜರಾಗುವುದಿಲ್ಲ ಎಂದು ಎಐಟಿಯುಸಿ ನೇತೃತ್ವದ ಕೆಎಸ್ಸಾರ್ಟಿಸಿ ನೌಕರರ ಸಂಘಟನೆ ಇಲಾಖಾಧಿಕಾರಿಗೆ ಮುನ್ಸೂಚನೆ ನೀಡಿದೆ. ನೌಕರರಲ್ಲಿ ಈ ಸಂಘಟನೆಯವರು ಅಧಿಕ ಸಂಖ್ಯೆಯಲ್ಲಿರುವ ಕಾರಣ ಸೆ.10ರಂದು ಸರಕಾರಿ ಬಸ್ ಓಡಾಟದ ಸಾಧ್ಯತೆ ಕಡಿಮೆಯಾಗಿದೆ. ಈಗಾಗಲೆ ಕೆನರಾ ಬಸ್ ಮಾಲಕರ ಸಂಘ, ದ.ಕ.ಜಿಲ್ಲಾ ಬಸ್ ಮಾಲಕರ ಸಂಘ ಕೂಡಾ ಬೆಂಬಲ ಘೋಷಿಸಿರುವ ಕಾರಣ ಮತ್ತು ಸರಕಾರಿ ಬಸ್‌ಗಳು ಕೂಡಾ ರಸ್ತೆಗಿಳಿಯುವ ಸಾಧ್ಯತೆ ಇಲ್ಲವಾದುದರಿಂದ ಹಾಗೂ ಎಡಪಕ್ಷಗಳ ಅಧೀನದ ರಿಕ್ಷಾ ಚಾಲಕ-ಮಾಲಕರ ಸಂಘಟನೆಗಳು ಹಾಗೂ ಅಲ್ಪಸಂಖ್ಯಾತರ ರಿಕ್ಷಾ ಚಾಲಕ-ಮಾಲಕರ ಸಂಘಟನೆಗಳು ಕೂಡಾ ಬಂದ್‌ಗೆ ಬೆಂಬಲ ನೀಡಿರುವುದರಿಂದ ದ.ಕ.ಜಿಲ್ಲೆಯಲ್ಲಿ ಬಂದ್ ಯಶಸ್ವಿಯಾಗುವ ಎಲ್ಲಾ ಲಕ್ಷಣಗಳೂ ಕಂಡು ಬರುತ್ತಿವೆ.

‘ಬಂದ್’ ಯಶ್ವಸಿಗೆ ಬೆಂಬಲ ಕೋರಿ ಕಾಂಗ್ರೆಸ್ ಮನವಿ

ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಸೂಚನೆಯಂತೆ ಸೆ.10ರಂದು ದೇಶಾದ್ಯಂತ ನಡೆಯಲಿರುವ ಬಂದ್ ಅನ್ನು ಯಶಸ್ವಿಗೊಳಿಸುವಂತೆ ಕಾಂಗ್ರೆಸ್ ಪಕ್ಷದ ಮುಖಂಡರು, ಕಾರ್ಯಕರ್ತರು ರವಿವಾರ ನಗರದ ಕದ್ರಿ ಮಾರುಕಟ್ಟೆ, ಸಿಟಿ ಸೆಂಟರ್ ಮಾಲ್ ಹಾಗೂ ಮತ್ತಿತರ ಮಾರುಕಟ್ಟೆಗಳಿಗೆ ಭೇಟಿ ನೀಡಿ ಮನವಿ ಮಾಡಿದರು.

ಕೇಂದ್ರದ ಬಿಜೆಪಿ ನೇತೃತ್ವದ ಸರಕಾರದ ಜನರೋಧಿ ನೀತಿಗೆ ಜನರು ಬಹಳಷ್ಟು ಬೇಸತ್ತಿದ್ದಾರೆ. ದಿನದಿಂದ ದಿನಕ್ಕೆ ಪೆಟ್ರೋಲ್, ಡೀಸಿಲ್ ಹಾಗೂ ಅಡುಗೆ ಅನಿಲ ದರ ಏರಿಸಿ ಜನಸಾಮಾನ್ಯರ ನಿದ್ದೆಗೆಡಿಸಿದ್ದಾರೆ. ಹಾಗಾಗಿ ಬಂದ್ ಮಾಡುವ ಮೂಲಕ ಕೇಂದ್ರ ಸರಕಾರ ಎಚ್ಚೆತ್ತುಕೊಳ್ಳುವಂತೆ ಮಾಡಬೇಕು ಎಂದು ಅಂಗಡಿಮುಂಗಟ್ಟುಗಳ ಮಾಲಕರು, ಕೆಲಸಗಾರರ ಬಳಿ ಮನವಿ ಮಾಡಿದರು.

ಈ ಸಂದರ್ಭ ಮಾಜಿ ಶಾಸಕ ಜೆ.ಆರ್.ಲೊಬೊ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪಿ.ವಿ.ಮೋಹನ್, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ, ಬ್ಲಾಕ್ ಅಧ್ಯಕ್ಷರಾದ ವಿಶ್ವಾಸ್ ಕುಮಾರ ದಾಸ್, ಅಬ್ದುಲ್ ಸಲೀಮ್, ಪಕ್ಷದ ಮುಖಂಡರಾದ ಪ್ರವೀಣ್‌ಚಂದ್ರ ಆಳ್ವ, ವಿನಯರಾಜ್, ಮೇರಿಲ್ ರೇಗೋ, ಶಶಿರಾಜ್ ಅಂಭಟ್, ಟಿ.ಕೆ.ಸುಧೀರ್, ರಮಾನಂದ ಪೂಜಾರಿ, ಹನೀಫ್ ಮುಹಮ್ಮದ್, ಹೊನ್ನಯ್ಯ, ನಮಿತ ರಾವ್, ರಾಜೇಶ್ ಬಾಳೆಕಲ್ಲು, ಅಪ್ಪಿ, ಜೆಸಿಂತಾ ಅಲ್ಪ್ರೇಡ್, ಬಿಲಾಲ್ ಮೊದಿನ್, ಆಸೀಫ್ ಬೆಂಗರೆ, ಹುಸೈನ್ ಬೋಳಾರ, ಸದಾಶಿವ ಅಮೀನ್, ದುರ್ಗಾಪ್ರಸಾದ್, ಸುನೀಲ್ ಶೆಟ್ಟಿ, ಬೆನೆಟ್ ಡಿಮೆಲ್ಲೊ, ಉಮೇಶ್ ದೇವಾಡಿಗ, ಹೇಮಂತ್ ಗರೋಡಿ ಮತ್ತಿತರರು ಉಪಸ್ಥಿತರಿದ್ದರು.

ಶಾಲಾ ಹಾಗೂ ಕಾಲೇಜು ಬಂದ್‌ಗೆ ಕರೆ

ಗಗನಕ್ಕೆ ಏರುತ್ತಿರುವ ಪೆಟ್ರೋಲ್ ಮತ್ತು ದಿನ ಬಳಕೆ ವಸ್ತುಗಳ ಬೆಲೆ ಏರಿಕೆಯನ್ನು ಖಂಡಿಸಿ ಸೆ.10ರಂದು ನಡೆಯುವ ಭಾರತ ಬಂದ್‌ಗೆ ಮಂಗಳೂರು ವಿಶ್ವವಿದ್ಯಾನಿಲಯಕ್ಕೆ ಒಳಪಟ್ಟ ಎಲ್ಲಾ ಕಾಲೇಜುಗಳು ಮತ್ತು ಜಿಲ್ಲೆಯ ಎಲ್ಲಾ ಶಾಲೆಗಳು ಬಂದ್ ಮಾಡಿ ಬೆಂಬಲ ನೀಡುವಂತೆ ಸರ್ವ ಕಾಲೇಜು ವಿದ್ಯಾರ್ಥಿ ಸಂಘದ ಸಂಚಾಲಕ ಮಿಥುನ್ ರೈ ಕರೆ ನೀಡಿದ್ದಾರೆ.

ದ.ಕ.ಜಿಲ್ಲಾ ಸಿಪಿಐ

ಹೆಚ್ಚುತ್ತಿರುವ ತೈಲ ಬೆಲೆ ಇಳಿಕೆಗೆ ಯಾವುದೇ ಕ್ರಮ ಜರುಗಿಸದ ಬಿಜೆಪಿ ನೇತೃತ್ವದ ಕೇಂದ್ರ ಸರಕಾರದ ವಿರುದ್ಧ ಸೆ.10ರಂದು ನಡೆಯುವ ಭಾರತ್ ಬಂದ್‌ಗೆ ಸಿಪಿಐ ದ.ಕ. ಮತ್ತು ಉಡುಪಿ ಜಿಲ್ಲಾ ಸಮಿತಿ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದೆ ಎಂದು ಜಿಲ್ಲಾ ಕಾರ್ಯದರ್ಶಿ ವಿ.ಕುಕ್ಯಾನ್ ತಿಳಿಸಿದ್ದಾರೆ.

ಮುಸ್ಲಿಂ ವರ್ತಕರ ಸಂಘ

ನೋಟು ಅಮಾನ್ಯಗೊಳಿಸುವ ಮೂಲಕ ಕಪ್ಪು ಹಣ ಪತ್ತೆ ಹಚ್ಚುವುದಾಗಿ ಬೀಗಿದ್ದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರಕಾರ ಇದೀಗ ಹೆಚ್ಚುತ್ತಿರುವ ತೈಲ ಬೆಲೆಯನ್ನು ಇಳಿಸದೆ ಜನಸಾಮಾನ್ಯರ ಬದುಕಿನ ಮೇಲೆ ಚೆಲ್ಲಾಟವಾಡುತ್ತಿರುವ ನೀತಿಯನ್ನು ಖಂಡಿಸಿ ಸೆ.10ರಂದು ನಡೆಯುವ ಬಂದ್‌ಗೆ ಸಂಪೂರ್ಣ ಬೆಂಬಲ ನೀಡಲಾಗುವುದು ಎಂದು ಮುಸ್ಲಿಂ ವರ್ತಕರ ಸಂಘ ಹಾಗೂ ಮಾಂಸ ವ್ಯಾಪಾರಸ್ಥರ ಸಂಘ ಮತ್ತು ದ.ಕ.ಜಿಲ್ಲಾ ಅಲ್ಪಸಂಖ್ಯಾತರ ರಿಕ್ಷಾ ಚಾಲಕ-ಮಾಲಕರ ಸಂಘದ ಮುಖಂಡ ಅಲಿ ಹಸನ್ ತಿಳಿಸಿದ್ದಾರೆ.

ಬಂದ್‌ಗೆ ಪೂರಕವಾಗಿ ಕುದ್ರೋಳಿಯ ವಧಾಗೃಹವನ್ನು ಸೆ.10ರಂದು ತೆರೆಯಲಾಗುವುದಿಲ್ಲ ಎಂದು ಗುತ್ತಿಗೆದಾರ ಜೆ. ಅಬ್ದುಲ್ ಖಾದರ್ ತಿಳಿಸಿದ್ದಾರೆ.

ಪ್ರತಿಭಾ ಕಾರಂಜಿ ಒಂದು ದಿನ ಮುಂದೂಡಿಕೆ

ದ.ಕ. ಜಿಲ್ಲೆಯ ಸಾರ್ವಜನಿಕ ಶಿಕ್ಷಣ ಇಲಾಖೆಯು ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಸ್ಪರ್ಧೆಗಳನ್ನು ಅನಿವಾರ್ಯ ಕಾರಣಗಳಿಂದ ಒಂದು ದಿನ ಮುಂದೂಡಿದೆ. ಸೆ.10ರ ಪ್ರೌಢಶಾಲಾ ವಿಭಾಗದ ಸ್ಪರ್ಧೆಗಳನ್ನು ಸೆ.11 ಮತ್ತು ಸೆ.11ರ ಪ್ರಾಥಮಿಕ ವಿಭಾಗದ ಸ್ಪರ್ಧೆಗಳನ್ನು ಸೆ. 12ರಂದು ನಡೆಸಲಾಗುವುದು ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News