ಉಡುಪಿ: ಭಾರತ್ ಬಂದ್‌ಗೆ ಬೆಂಬಲ ಕೋರಿ ಕಾಂಗ್ರೆಸ್ ಪಾದಯಾತ್ರೆ

Update: 2018-09-09 11:13 GMT

ಉಡುಪಿ, ಸೆ. 9: ಜಿಲ್ಲಾ ಕಾಂಗ್ರೆಸ್ ಪದಾಧಿಕಾರಿಗಳು ರವಿವಾರ ಉಡುಪಿ ನಗರದಲ್ಲಿ ಪಾದಯಾತ್ರೆ ನಡೆಸಿ ಪೆಟ್ರೊಲ್, ಡೀಸೆಲ್ ದರ ಏರಿಕೆಯನ್ನು ಖಂಡಿಸಿ ಕರೆ ನೀಡಿರುವ ಭಾರತ್ ಬಂದ್‌ಗೆ ಬೆಂಬಲ ನೀಡುವಂತೆ ವ್ಯಾಪಾರಸ್ಥರು, ಉದ್ಯಮಿಗಳು, ಸಾರ್ವಜನಿಕರಲ್ಲಿ ಮನವಿ ಮಾಡಿದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜನಾರ್ದನ ತೋನ್ಸೆ ನೇತೃತ್ವದಲ್ಲಿ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಜೋಡುಕಟ್ಟೆ, ಕೋರ್ಟ್ ರಸ್ತೆ, ಕೆ.ಎಂ. ರೋಡ್, ಸರ್ವಿಸ್ ಹಾಗೂ ಸಿಟಿ ಬಸ್ ನಿಲ್ದಾಣಗಳಲ್ಲಿರುವ ಅಂಗಡಿ, ಕಚೇರಿ, ವಾಣಿಜ್ಯ ಸಂಕೀರ್ಣಗಳಿಗೆ ಪಾದಯಾತ್ರೆಯ ಮೂಲಕ ತೆರಳಿ ನಾಳಿನ ಬಂದ್‌ಗೆ ಬೆಂಬಲ ನೀಡುವಂತೆ ಮನವಿ ಮಾಡಿದರು. ಅಲ್ಲದೆ ವಾಹನಗಳಿಗೆ ಭಾರತ್ ಬಂದ್ ಕುರಿತ ಸ್ಟಿಕ್ಕರ್‌ಗಳನ್ನು ಅಂಟಿಸಲಾಯಿತು.

‘ಬೆಲೆ ಏರಿಕೆಯನ್ನು ತಡೆಯವಲ್ಲಿ ಕೇಂದ್ರ ಸರಕಾರ ಸಂಪೂರ್ಣವಾಗಿ ವಿಫಲವಾಗಿದೆ. ತೈಲ ಬೆಲೆ ಏರಿಕೆಯಿಂದ ಜನಸಾಮಾನ್ಯರು ತೊಂದರೆ ಅನುಭವಿಸುತ್ತಿ ದ್ದಾರೆ. ಅಚ್ಚೇ ದಿನ್ ಬರುತ್ತದೆ ಎಂದು ಕಾದು ಕುಳಿತರೆ ಏನೂ ಪ್ರಯೋಜನ ಇಲ್ಲ. ಸೋಮವಾರ ಕಾಂಗ್ರೆಸ್ ಕರೆ ನೀಡಿರುವ ಭಾರತ್ ಬಂದ್‌ಗೆ ಎಲ್ಲರು ಬೆಂಬಲ ನೀಡಬೇಕು. ನಾವು ಜನರಲ್ಲಿ ಮನವಿ ಮಾಡುತ್ತೇವೆಯೇ ಹೊರತು ಒತ್ತಾಯದ ಬಂದ್ ಎಲ್ಲೂ ಮಾಡಲ್ಲ ಎಂದು ಜನಾರ್ದನ ತೋನ್ಸೆ ತಿಳಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಹರೀಶ್ ಕಿಣಿ, ಕೆಪಿಸಿಸಿ ಸದಸ್ಯರಾದ ವೆರೋನಿಕಾ ಕರ್ನೆಲಿಯೊ, ದಿನೇಶ್ ಪುತ್ರನ್, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ವಿಶ್ವಾಸ್ ಅಮೀನ್, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಗೀತಾ ವಾಗ್ಳೆ, ಮುಖಂಡರಾದ ರಮೇಶ್ ಕಾಂಚನ್, ನರಸಿಂಹ ಮೂರ್ತಿ, ಜನಾರ್ದನ ಭಂಡಾರ್ಕರ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News