ಕೃಷಿ ಸಾಲ ಮನ್ನಾ ಸಮಗ್ರ ಅನುಷ್ಠಾನಕ್ಕೆ ಕ್ಯಾಂಪ್ಕೊ ಒತ್ತಾಯ

Update: 2018-09-09 11:59 GMT

ಮಂಗಳೂರು, ಸೆ. 9: ರಾಜ್ಯ ಸರಕಾರ ಈಗಾಗಲೇ ಘೋಷಣೆ ಮಾಡಿರುವ ಕೃಷಿ ಸಾಲ ಮನ್ನಾದ ಮಾರ್ಗಸೂಚಿ ಗೊಂದಲಮಯವಾಗಿದ್ದು, ಅಡಕೆ ಕೃಷಿಕರ ಸಹಿತ ಬಹುಸಂಖ್ಯೆಯ ರೈತರು ಈ ಸಾಲ ಮನ್ನಾದ ವ್ಯಾಪ್ತಿಯಿಂದ ಹೊರಗುಳಿಯುವ ಭೀತಿಯಲ್ಲಿದ್ದಾರೆ.

ಸಹಕಾರಿ ಸಂಘಗಳ ಮತ್ತು ವಾಣಿಜ್ಯ ಬ್ಯಾಂಕ್‌ಗಳಲ್ಲಿರುವ ಕೃಷಿಕರ ಸಾಲ ಮನ್ನಾದ ಬಗ್ಗೆ ತಕ್ಷಣ ಅಧಿಸೂಚನೆ ಹೊರಡಿಸಬೇಕು ಎಂದು ಕೃಷಿ ಸಚಿವ ಬಂಡಪ್ಪ ಕಾಶೆಂಪೂರ್‌ಗೆ ಬೆಂಗಳೂರಿನಲ್ಲಿ ಸಲ್ಲಿಸಿದಿ ಮನವಿಯಲ್ಲಿ ಕ್ಯಾಂಪ್ಕೊ ಅಧ್ಯಕ್ಷ ಹಾಗೂ ಸಹಕಾರ ಭಾರತಿಯ ರಾಜ್ಯ ಸಂಘಟನಾ ಪ್ರಮುಖ ಎಸ್.ಆರ್.ಸತೀಶ್ಚಂದ್ರ ಆಗ್ರಹಿಸಿದ್ದಾರೆ.

ಅತಿವೃಷ್ಟಿಯಿಂದಾಗಿ ಕೊಡಗು, ದ.ಕ.ಮತ್ತಿತರ ಜಿಲ್ಲೆಗಳಲ್ಲಿ ಅಪಾರವಾದ ಬೆಳೆ, ಆಸ್ತಿ ಹಾಗೂ ಜೀವಹಾನಿಯುಂಟಾಗಿದೆ. ಕೃಷಿಕರು ತಮ್ಮ ಜೀವನಾಧಾರ ವಾದ ಕೃಷಿ, ಮನೆ ಮಠಗಳನ್ನು ಸಂಪೂರ್ಣವಾಗಿ ಕಳೆದುಕೊಂಡಿದ್ದಾರೆ. ರಾಜ್ಯದ ಅಡಕೆ ಕೃಷಿಕರೂ ಕೊಳೆರೋಗ ಬಾಧೆಯಿಂದ ಸಂಕಷ್ಟ ಅನುಭವಿಸು ತ್ತಿದ್ದಾರೆ. ಅಂತಹ ಕೃಷಿಕರ ಸಾಲಗಳನ್ನು ಸಂಪೂರ್ಣವಾಗಿ ಯಾವುದೇ ಷರತ್ತಿಲ್ಲದೆ ಮನ್ನಾ ಮಾಡಬೇಕು ಎಂದು ಸತೀಶ್ಚಂದ್ರ ಒತ್ತಾಯಿಸಿದ್ದಾರೆ.

ಸಾಲ ಮನ್ನಾದ ಬಗ್ಗೆ ರಾಜ್ಯ ಸರಕಾರವು ಸಹಕಾರಿ ಧುರೀಣರು ಮತ್ತು ಕೃಷಿಕರ ಸಭೆಯನ್ನು ಜಿಲ್ಲಾ ಮಟ್ಟದಲ್ಲಿ ಆಯೋಜಿಸಿ ಅಭಿಪ್ರಾಯ ಪಡೆಯಬೇಕು. ರೈತರು ತಮ್ಮ ಕಷ್ಟಕಾಲಕ್ಕೆಂದು ಉಳಿತಾಯ ಮಾಡಿರುವ ನಿರಖು ಠೇವಣಿಯನ್ನು ಸಾಲದ ಖಾತೆಗೆ ವಜಾ ಮಾಡುವ ಸರಕಾರದ ಅಧಿಸೂಚನೆಯನ್ನು ಹಿಂದಕ್ಕೆ ಪಡೆಯಬೇಕು ಎಂದು ಸತೀಶ್ಚಂದ್ರ ಮನವಿ ಮಾಡಿದ್ದಾರೆ.

ನಿಯೋಗದಲ್ಲಿ ಸಹಕಾರ ಭಾರತಿಯ ರಾಜ್ಯ ಅಧ್ಯಕ್ಷ ಎಂ.ಜಿ. ಪಾಟೀಲ್, ಸದಸ್ಯರಾದ ಭಾರತಿ ಭಟ್, ಸುಮನಾ ಶರಣ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News