ನಾಗಾರಾಧನೆಯ ಆಡಂಬರ, ದುಂದುವೆಚ್ಚವನ್ನು ನಿಲ್ಲಿಸಿ: ಬಂಟ ಸಮಾಜಕ್ಕೆ ಸಂತೋಷ್ ಗುರೂಜಿ ಕರೆ

Update: 2018-09-09 12:24 GMT

ಉಡುಪಿ, ಸೆ. 9: ಬಂಟ ಸಮಾಜದ ಭೂತಾರಾಧನೆ, ನಾಗಾರಾಧನೆ ಇಂದು ಹಳಿತಪ್ಪಿ ಹೋಗುತ್ತಿದೆ. ಇದರಲ್ಲಿ ಆಡಂಬರ, ದುಂದುವೆಚ್ಚ ಹೆಚ್ಚಾಗುತ್ತಿದೆ. ಇದಕ್ಕೆ ಕಡಿವಾಣ ಹಾಕಿ ಅದೇ ದುಡ್ಡನ್ನು ಬಡವರ ಆರೋಗ್ಯಕ್ಕಾಗಿ ವಿನಿಯೋಗಿಸಿ ಎಂದು ಬಾರಕೂರು ಮಹಾಸಂಸ್ಥಾನದ ಶ್ರೀ ವಿಶ್ವಸಂತೋಷ್ ಭಾರತಿ ಗುರೂಜಿ ಕರೆ ನೀಡಿದ್ದಾರೆ.

ಉಡುಪಿಯ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾಂಗಣ ಆವರಣದ ತೋನ್ಸೆ ಶಶಿರೇಖಾ ಆನಂದ ಶೆಟ್ಟಿ ವೇದಿಕೆಯಲ್ಲಿ ಜಾಗತಿಕ ಬಂಟರ ಸಂಘಗಳ ಒಕ್ಕೂಟ ಹಾಗೂ ಉಡುಪಿ ಜಿಲ್ಲಾ ಸಮಸ್ತ ಬಂಟರ ಸಂಘಗಳ ಜಂಟಿ ಆಶ್ರಯದಲ್ಲಿ ರವಿವಾರ ನಡೆದ ವಿಶ್ವ ಬಂಟರ ಸಮಾವೇಶ-2018ರ ಉದ್ಘಾಟನಾ ಸಮಾರಂಭದಲ್ಲಿ ಆಶೀರ್ವಚನ ನೀಡಿ ಮಾತನಾಡುತಿದ್ದರು.

ಬಂಟರ, ತುಳುವರ ಆಧ್ಯಾತ್ಮ ಹಾಗೂ ಧಾರ್ಮಿಕ ಸಂಪ್ರದಾಯಗಳನ್ನು ಮುಂದಿನ ಪೀಳಿಗೆಗೆ ದಾಟಿಸಬೇಕಾಗಿದೆ. ಒಂದು ಸಮುದಾಯದಲ್ಲಿ ಬಡವರು ಹಾಗೂ ಶ್ರೀಮಂತರು ಇರುತ್ತಾರೆ. ಶೇ.10ರಷ್ಟು ಮಂದಿ ಶ್ರೀಮಂತರಿರ ಬಹುದು. ಬಂಟ ಸಮಾಜದಲ್ಲೂ ಸಾಕಷ್ಟು ಮಂದಿ ಬಡವರಿದ್ದಾರೆ. ಅವರಿಗೂ ಸಹಾಯ ಮಾಡುವುದು ಸಮಾಜದ ಧರ್ಮ ಎಂದು ಸಂತೋಷ ಗುರೂಜಿ ನುಡಿದರು.

ಇಂದು ಜಿಲ್ಲೆಯಲ್ಲಿ ನಡೆಯುವ ಭೂತಾರಾಧನೆ, ನಾಗಾರಾಧನೆಗಳಲ್ಲಿ ಪ್ರತಿ ವರ್ಷ 30 ಕೋಟಿ ರೂ.ಗಳಿಗೂ ಅಧಿಕ ಮೊತ್ತ ಹರಿದಾಡುತ್ತದೆ. ಬಂಟರು ನಾಗಮಂಡಲಕ್ಕೆ ಕೋಟ್ಯಾಂತರ ರೂ.ಗಳನ್ನು ಖರ್ಚು ಮಾಡುತ್ತಾರೆ. ಇಂದು ಖಂಡಿತ ಅನಗತ್ಯ. ಕೇವಲ 9-10 ಲಕ್ಷ ರೂ.ಗಳಲ್ಲಿ ನಾಗಮಂಡಲವನ್ನು ಮಾಡಿ ಉಳಿದ ಹಣವನ್ನು ಬಡವರ ಆರೋಗ್ಯಕ್ಕಾಗಿ ನೀಡಿ. ಇದರಿಂದ ನಿಮಗೆ ಕನಿಷ್ಠ 10 ಮಂದಿ ಬಡವರಿಗೆ ಸಹಾಯ ಮಾಡಿದ ತೃಪ್ತಿ ಖಂಡಿತ ಸಿಗುತ್ತದೆ ಎಂದರು.

ಆದುದರಿಂದ ಅದ್ದೂರಿನ ನಾಗಮಂಡಲ, ದೈವಾರಾಧನೆಯನ್ನು ಕೈಬಿಟ್ಟು, ಬಡವರ ಆರೋಗ್ಯಕ್ಕೆ ದಾನ ಮಾಡಿ. ಅದೇ ರೀತಿ ಮದುವೆಯನ್ನು ಹೊರತು ಪಡಿಸಿ ಮೆಹಂದಿಯಂಥ ಅಸಾಂಪ್ರದಾಯಿಕ ಆಚರಣೆಗೆ ಮಾಡುವ ದುಂದು ವೆಚ್ಚವನ್ನು ನಿಲ್ಲಿಸಿ. ಅದನ್ನು ಸರಳವಾಗಿ ಆಚರಿಸಿ. ಯಾರನ್ನೂ ಧ್ವೇಷಿಸದೇ, ಒಗ್ಗಟ್ಟಿನಿಂದ ಬದುಕಲು ಕಲಿಯಿರಿ. ಆಗ ಸಮಾಜ ಬಲಿಷ್ಠಗೊಳ್ಳುತ್ತದೆ ಎಂದರು.

ಧರ್ಮದ ಬದ್ಧತೆ ಇರಲಿ

ಒಡೆಯೂರು ಮಠದ ಶ್ರೀಒಡೆಯೂರು ಗುರು ದೇವಾನಂದ ಸ್ವಾಮೀಜಿ ಅವರು ಆಶೀರ್ವಚನ ನೀಡಿ, ಬಂಟ ಎಂದರೆ ಸಂಘಟಕ ಅಥವಾ ಸಂರಕ್ಷಕ. ಬಂಟ ಎಂಬುದು ಆತ್ಮವಿಶ್ವಾಸಕ್ಕೆ ಇನ್ನೊಂದು ಹೆಸರು. ತಾನು ಬೆಳೆದು ಜೊತೆಗೆ ಅನ್ಯರನ್ನು ಬೆಳೆಸುವವನೇ ಬಂಟ ಎಂದರು.

ಸಮಾಜಕ್ಕೆ ಭದ್ರತೆ ಬೇಕಿದ್ದರೆ, ಧರ್ಮದ ಬದ್ಧತೆ ಇರಬೇಕು. ಬಂಟ ಸಮಾಜದಲ್ಲಿ ಮಾತೃ ಪ್ರಧಾನ ಸಂಸ್ಕೃತಿ ಇದ್ದು, ಇದರಿಂದ ಅದು ಸದೃಢವಾಗಿ ಬೆಳೆದು ಬರಲು ಸಾಧ್ಯವಾಯಿತು. ಇದರ ಎಲ್ಲಾ ಶ್ರೇಯಸ್ಸು ‘ಸಿರಿ ಅಮ್ಮ’ನಿಗೆ ಸಲ್ಲಬೇಕು ಎಂದು ಒಡೆಯೂರುಶ್ರೀಗಳು ತಿಳಿಸಿದರು.

ಬಂಟ ಸಮಾಜ ಯಾವುದೇ ಕ್ಷೇತ್ರದಲ್ಲೂ ಹಿಂದುಳಿದಿಲ್ಲ. ಸಮಾಜ ಸೇವಾ ಕ್ಷೇತ್ರದಲ್ಲೂ ನಾವು ಮುಂದಿರಬೇಕು. ಒಡಲಲ್ಲಿ ಪ್ರೀತಿ ತುಂಬಿರುವವರಿಂದ ಒಳ್ಳೆಯ ಸಮಾಜ ಸೃಷ್ಟಿಸಲು ಸಾಧ್ಯ ಎಂದು ಸ್ವಾಮೀಜಿ ನುಡಿದರು. ಮಾತೃ ಭಾಷೆ ಉಳಿದರೆ ಸಂಸ್ಕೃತಿ ಉಳಿಯುತ್ತದೆ. ಭಾಷೆಯನ್ನು ಉಳಿಸೋಣ, ಸಮರಸದ ಬದುಕು ನಮ್ಮದಾಗಲಿ ಎಂದು ಹಾರೈಸಿದರು.

ಪಂಚಮುಖಿ ದೀಪಗಳನ್ನು ಒಡಿಯೂರು ಶ್ರೀಗಳು ಹಾಗೂ ಸಂತೋಷ್ ಗುರೂಜಿ ಪ್ರಜ್ವಲನಗೊಳಿಸಿದರು. ಉದ್ಯಮಿಗಳಾದ ಶಶಿರೇಖಾ ಆನಂದ ಶೆಟ್ಟಿ ದಂಪತಿಗಳು ವೇದಿಕೆಯನ್ನು ಉದ್ಘಾಟಿಸಿದರು. ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಮಂಗಳೂರಿನ ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್‌ಕುಮಾರ್ ರೈ ಮಾಲಾಡಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಸ್ವಾಗತ ಸಮಿತಿಯ ಕಾಪು ಲೀಲಾಧರ ಪಿ.ಶೆಟ್ಟಿ ಅತಿಥಿಗಳನ್ನು ಸ್ವಾಗತಿಸಿದರೆ, ವಿಜಯಪ್ರಸಾದ್ ಶೆಟ್ಟಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕೊಲ್ಲಾಡಿ ಬಾಲಕೃಷ್ಮ ರೈ ವಂದಿಸಿದರೆ, ಕದ್ರಿ ನವನೀತ ಶೆಟ್ಟಿ, ಅಶೋಕ ಪಕ್ಕಳ, ಡಾ.ರೋಶನ್ ಕುಮಾರ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

ಸಮಾಜದ ಸಾಧಕರಿಗೆ, ಹಿರಿಯರಿಗೆ ಸನ್ಮಾನ

ವಿಶ್ವ ಬಂಟ ಸಮ್ಮಿಲನದ ಉದ್ಘಾಟನಾ ಸಮಾರಂಭದಲ್ಲಿ ಬಂಟ ಸಮಾಜದ ಹಿರಿಯ ಸಾಧಕರು, ಹಿರಿಯರನ್ನು ಸನ್ಮಾನಿಸಲಾಯಿತು. ಇಬ್ಬರು ಸ್ವಾಮೀಜಿಗಳು ಈ ಸಾಧಕರನ್ನು ಗೌರವಿಸಿದರು.

ಬೈಂದೂರು ಬಂಟರ ಸಂಘದ ಅಧ್ಯಕ್ಷ ಬಿ.ಜಗನ್ನಾಥ ಶೆಟ್ಟಿ, ಬೆಳಗಾವಿಯ ಉದ್ಯಮಿ ವಿಠಲ ಹೆಗ್ಡೆ, ಬಸ್ರೂರಿನ ಮಾಜಿ ಶಾಸಕ ಬಿ.ಅಪ್ಪಣ್ಣ ಹೆಗ್ಡೆ, ಮಂಗಳೂರಿನ ಉದ್ಯಮಿ ಸದಾನಂದ ಶೆಟ್ಟಿ, ಸಾಹಿತಿ ಏರ್ಯ ಲಕ್ಷ್ಮೀನಾರಾಯಣ ಆಳ್ವ, ಯಕ್ಷಗಾನ ವಿದ್ವಾಂಸ ಶಿಮಂತೂರು ನಾರಾಯಣ ಶೆಟ್ಟಿ, ಪುಣೆಯ ಉದ್ಯಮಿ ಮೈನಾ ಸುಬ್ಬಣ್ಣ ಶೆಟ್ಟಿ, ಕಾಪುವಿನ ಹಿರಿಯ ವೈದ್ಯರಾದ ಕಾಪು ವಿಶ್ವನಾಥ ಶೆಟ್ಟಿ, ಡಾ.ಪ್ರಭಾಕರ ಶೆಟ್ಟಿ, ಯುಎಇ ಬಂಟ ಸಂಘದ ಸರ್ವೋತ್ತಮ ಎನ್.ಶೆಟ್ಟಿ ಇವರು ಸನ್ಮಾನಿತರು.

ಸಮ್ಮಿಲನದಲ್ಲಿ ಬಂಟರ ಜೀವನ ದರ್ಶನ

ವಿಶ್ವ ಬಂಟರ ಸಮ್ಮಿಲನದ ಪ್ರಧಾನ ವೇದಿಕೆಯನ್ನು ಬಂಟರ ಗುತ್ತುಮನೆಯ ಮಾದರಿಯಲ್ಲಿ ನಿರ್ಮಿಸಲಾಗಿದ್ದರೆ, ಮೂಲತ: ಕೃಷಿಕರಾದ ಬಂಟರ ಜೀವನ ಕ್ರಮ, ಜೀವನ ದರ್ಶನದ ಹಲವು ವಸ್ತು, ಪರಿಕರಗಳನ್ನು ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾಂಣ ಆವರಣದಲ್ಲಿ ಪ್ರದರ್ಶಿಸಲಾಗಿತ್ತು.

ಇಲ್ಲಿ ಕಂಬಳ ಕೋಣಗಳು, ದನ-ಕರುಗಳು, ಭೂತ-ದೈವಗಳು, ಭೂತದ ಮೂರ್ತಿಗಳು, ಅದಕ್ಕೆ ಸಂಬಂಧಿಸಿದ ಪರಿಕರಗಳು, ಕೃಷಿ ಸಂಬಂಧಿ ವಸ್ತುಗಳು, ಬಾವಿ ಪ್ರದರ್ಶನಗೊಂಡವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News