ಗುತ್ತಿಗೆ ನೌಕರರ ಸಮಸ್ಯೆ ಪರಿಹಾರಕ್ಕೆ ಕಾಯಿದೆ ತಿದ್ದುಪಡಿ ಅಗತ್ಯ: ಡಾ.ಶ್ಯಾನುಭಾಗ್

Update: 2018-09-09 12:33 GMT

ಉಡುಪಿ, ಸೆ.9: ಗುತ್ತಿಗೆ ನೌಕರರ ಸಮಸ್ಯೆಗಳಿಗೆ ಶಾಸಕರುಗಳಿಂದ ಪರಿಹಾರ ದೊರೆಯಲು ಸಾಧ್ಯವಿಲ್ಲ. ಕೇಂದ್ರ ಸರಕಾರವೇ ಈ ಸಂಬಂಧ ಕಾಯಿದೆ ಯನ್ನು ತಿದ್ದುಪಡಿ ಮಾಡಬೇಕು ಎಂದು ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನದ ಅಧ್ಯಕ್ಷ ಹಾಗೂ ಆರೋಗ್ಯ ಇಲಾಖೆ ಗುತ್ತಿಗೆ ನೌಕರರ ಸಂಘದ ಕಾನೂನು ಸಲಹೆಗಾರ ಡಾ.ರವೀಂದ್ರನಾಥ್ ಶ್ಯಾನುಭಾಗ್ ತಿಳಿಸಿದ್ದಾರೆ.

ಉಡುಪಿ ಜಿಲ್ಲಾ ಆರೋಗ್ಯ ಇಲಾಖೆ ಗುತ್ತಿಗೆ ನೌಕರರ ಸಂಘದ ವತಿಯಿಂದ ರವಿವಾರ ಉಡುಪಿ ಕರಾವಳಿ ಬೈಪಾಸ್‌ನ ಲಕ್ಷ್ಮೀ ಸಭಾಭವನದಲ್ಲಿ ಆಯೋಜಿಸ ಲಾದ ನೌಕರರ ಮಹಾ ಸಮ್ಮೇಳನ ಹಾಗೂ ನೌಕರರ ಕೌಶಲ್ಯಾಭಿವೃದ್ಧಿ ತರಬೇತಿ ಕಮ್ಮಟವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಗುತ್ತಿಗೆ ಆಧಾರದಲ್ಲಿ ನೌಕರರನ್ನು ನೇಮಿಸಿಕೊಳ್ಳುವ ಪದ್ಧತಿಯು 1916ರಲ್ಲಿ ಬ್ರಿಟಿಷರ ಆಡಳಿತದಲ್ಲಿ ಪ್ರಥಮವಾಗಿ ಚಾಲ್ತಿಗೆ ಬಂತು. ಇಂದು ದೇಶವ್ಯಾಪಿ ಯಾಗಿರುವ ಈ ಸಮಸ್ಯೆಯನ್ನು ಪರಿಹರಿಸದಿದ್ದರೆ ಸರಕಾರಿ ನೌಕರಿಯ ಮೂಲ ಪಂಚಾಂಗವೇ ಅಲುಗಾಡಲಿದೆ. ಆದುದರಿಂದ ನೌಕರರು ಮೊದಲು ತಮ್ಮ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು, ನಂತರ ಈ ಕುರಿತ ಜನಪ್ರತಿನಿಧಿಗಳ ಮನೋಸ್ಥಿತಿಯನ್ನು ಬದಲಾಯಿಸುವ ಕೆಲಸ ಮಾಡಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಸಂಘದ ಜಿಲ್ಲಾಧ್ಯಕ್ಷ ಮಂಜುನಾಥ ಮಾತನಾಡಿ, ಸರಕಾರ ಆರೋಗ್ಯ ಇಲಾಖೆಯಲ್ಲಿ ಕೆಲಸ ಮಾಡುವ ಖಾಯಂ ಹಾಗೂ ಗುತ್ತಿಗೆ ನೌಕರರ ಮಧ್ಯೆ ತಾರತಮ್ಯ ತೋರಿಸುತ್ತಿದೆ. 21ನೆ ಶತಮಾನದಲ್ಲೂ ನಾವು ಉಳಿಗಮಾನ್ಯ ಪದ್ಧತಿಯಂತೆ ಜೀತದಾಳುಗಳಾಗಿ ಕೆಲಸ ಮಾುತ್ತಿರುವುದು ದುರಂತ ಎಂದರು.

ಸಂಘದ ವತಿಯಿಂದ ಕೊಡಗು ನೆರೆ ಸಂತ್ರಸ್ತರಿಗೆ ಸಂಗ್ರಹಿಸಲಾದ 1.66ಲಕ್ಷ ರೂ. ಮೊತ್ತದ ಚೆಕ್‌ನ್ನು ಈ ಸಂದರ್ಭದಲ್ಲಿ ಉಡುಪಿ ಜಿಪಂ ಮುಖ್ಯಕಾರ್ಯ ನಿರ್ವಹಣಾಧಿಕಾರಿ ಶಿವಾನಂದ ಕಾಪಶಿ ಅವರಿಗೆ ಹಸ್ತಾಂತರಿಸಲಾಯಿತು. ನಿವೃತ್ತ ತಹಶೀಲ್ದಾರ್ ಮುರಳೀಧರ ನೌಕರರ ಕೌಶಲ್ಯಾಭಿವೃದ್ಧಿ ತರಬೇತಿ ಕುರಿತು ಉಪನ್ಯಾಸ ನೀಡಿದರು.

ಮುಖ್ಯ ಅತಿಥಿಗಳಾಗಿ ಜಿಪಂ ಸದಸ್ಯೆ ಗೀತಾಂಜಲಿ ಸುವರ್ಣ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರೋಹಿಣಿ, ಜಿಲ್ಲಾ ಸರ್ಜನ್ ಡಾ.ಮಧುಸೂದನ್ ನಾಯಕ್, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ. ಶ್ರೀರಾಮ್ ರಾವ್, ಆರ್‌ಸಿಎಚ್ ಅಧಿಕಾರಿ ಡಾ.ಎಂ.ಜಿ.ರಾಮ, ಜಿಲ್ಲಾ ಡಿಟಿಓ ಡಾ.ಚಿದಾನಂದ ಸಂಜು, ಮಲೇರಿಯ ನಿಯಂತ್ರಣಾಧಿಕಾರಿ ಡಾ. ಪ್ರೇಮಾನಂದ, ಡಾ.ವಾಸುದೇವ ಉಪಾಧ್ಯಾಯ, ಡಾ.ಸುರೇಂದ್ರ ಚಿಂಬಾಳ್ಕರ್, ತಾಲೂಕು ಆರೋಗ್ಯಾಧಿಕಾರಿಗಳಾದ ಡಾ.ನಾಗರತ್ನ, ಡಾ.ನಾಗಭೂಷಣ ಉಡುಪ, ಡಾ.ಕೃಷ್ಣಾನಂದ ಶೆಟ್ಟಿ, ಕರ್ನಾಟಕ ಸರಕಾರಿ ವೈದ್ಯಾಧಿಕಾರಿಗಳ ಸಂಘದ ಜಿಲ್ಲಾಧ್ಯಕ್ಷ ಡಾ.ಪ್ರಕಾಶ್ ಶೆಟ್ಟಿ, ಸರಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಸುಬ್ರಹ್ಮಣ್ಯ ಶೇರಿಗಾರ್ ಉಪಸ್ಥಿತರಿದ್ದರು.

ಸಂಘದ ಪ್ರಧಾನ ಕಾರ್ಯದರ್ಶಿ ಮಹಾಬಲೇಶ ಸ್ವಾಗತಿಸಿದರು. ಮನು, ಕೃತಿ, ಸಂದೀಪ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News