ಉಡುಪಿ: ಸಂಗೊಳ್ಳಿ ರಾಯಣ್ಣೋತ್ಸವ ಉದ್ಘಾಟನೆ

Update: 2018-09-09 12:36 GMT

ಉಡುಪಿ, ಸೆ. 9: ಶ್ರೀಕ್ರಾಂತಿಕಾರಿ ಸಂಗೊಳ್ಳಿ ರಾಯಣ್ಣ ಸಂಘ ಉಡುಪಿ ಜಿಲ್ಲೆ ಇದರ ವತಿಯಿಂದ ರಾಯಣ್ಣೋತ್ಸವವನ್ನು ಉಡುಪಿ ಬೋರ್ಡ್ ಹೈಸ್ಕೂಲ್ ಸಭಾಂಗಣದಲ್ಲಿ ರವಿವಾರ ಆಯೋಜಿಸಲಾಗಿತ್ತು.

ಮುಖ್ಯ ಅತಿಥಿಯಾಗಿ ಕಾಂಗ್ರೆಸ್ ಮುಖಂಡ ಅಮೃತ್ ಶೆಣೈ ಮಾತನಾಡಿ, ಸಾಮರಸ್ಯದ ಶಾಂತಿಯುತ ಜೀವನ ಇಂದಿನ ಅಗತ್ಯ. ರಾಷ್ಟ್ರಕ್ಕೆ ಹೋರಾಡಿದ ಮಹಾಪುರುಷರ ಆದರ್ಶನಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಕೆಲಸ ಆಗಬೇಕು. ಇಂದು ಇತಿಹಾಸ ತಿರುಚುವ ಕೆಲಸ ನಡೆಯುತ್ತಿದೆ. ನಿಜವಾದ ಇತಿಹಾಸವನ್ನು ಯುವಜನತೆಗೆ ತಿಳಿಸಿಕೊಡಬೇಕು ಎಂದರು.

ಕಾರ್ಯಕ್ರಮವನ್ನು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯಶ್ಪಾಲ್ ಸುವರ್ಣ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಸಮಾಜ ಸೇವಕ ಕೃಷ್ಣಮೂರ್ತಿ ಆಚಾರ್ಯ ಕಿನ್ನಿಮುಲ್ಕಿ ವಹಿಸಿದ್ದರು. ಈ ಸಂದರ್ಭದಲ್ಲಿ ಸಂಗೊಳ್ಳಿ ರಾಯಣ್ಣ ಕುರಿತ ಪುಸ್ತಕವನ್ನು ಹುಬ್ಬಳ್ಳಿ ಕ್ರಾಂತಿಕಾರಿ ಸಂಗೊಳ್ಳಿ ರಾಯಣ್ಣ ಗೆಳೆಯರ ಬಳಗದ ಸ್ಥಾಪಕಾಧ್ಯಕ್ಷ ಸುರೇಶ್ ಗೋಕಾಕ್ ಬಿಡುಗಡೆಗೊಳಿಸಿದರು.

ಉಡುಪಿ ಕರವೇ ಪ್ರಧಾನ ಕಾರ್ಯದರ್ಶಿ ಸುಧೀರ್ ಶೇಟ್ ಬನ್ನಂಜೆ, ತುಳು ನಾಡು ರಕ್ಷಣಾ ವೇದಿಕೆಯ ಸ್ಥಾಪಕಾಧ್ಯಕ್ಷ ಯೋಗೇಶ್ ಶೆಟ್ಟಿ ಜೆಪ್ಪು, ಕರ್ನಾಟಕ ಕಾರ್ಮಿಕರ ವೇದಿಕೆ ಅಧ್ಯಕ್ಷ ರವಿ ಶಾಸ್ತ್ರಿ ಬನ್ನಂಜೆ, ಗುರುಪ್ರಸಾದ್ ವಿ.ಶರ್ಮ, ಸಮಾಜ ಸೇವಕ ಫ್ರಾಂಕಿ ಡಿಸೋಜ ಮೊದಲಾದವರು ಉಪಸ್ಥಿತರಿದ್ದರು.

ಸಂಘದ ಜಿಲ್ಲಾ ಗೌರವಾಧ್ಯಕ್ಷ ಮೇಟಿ ಮುದಿಯಪ್ಪ ಸ್ವಾಗತಿಸಿದರು. ಉಪ ನ್ಯಾಸಕ ಎಸ್.ಜಿ.ಭಾಗವತ್ ವಂದಿಸಿದರು. ರಾಮಾಂಜಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News