ಶಿಕ್ಷಕರು ಮಕ್ಕಳಿಗೆ ಪ್ರಿಯರಾಗದೆ ಹಿತರಾಗಬೇಕು: ಅದಮಾರು ಶ್ರೀ

Update: 2018-09-09 12:50 GMT

ಉಡುಪಿ, ಸೆ.9: ಶಿಕ್ಷಕರು ಮಕ್ಕಳಿಗೆ ಹಿತರಾಗಬೇಕೆ ಹೊರತು ಪ್ರಿಯರಾಗ ಬಾರದು. ಹಿತವಾಗಿ ಕಾಣುವ ಶಿಕ್ಷಕರನ್ನು ಮಕ್ಕಳು ಕೊನೆಯವರೆಗೆ ಮರೆಯಲ್ಲ. ಆದುದರಿಂದ ಮಕ್ಕಳಿಗೆ ಪ್ರಿಯೋಪದೇಶಕ್ಕಿಂತ ಹಿತೋಪದೇಶಗಳನ್ನು ನೀಡುವ ಕೆಲಸ ಮಾಡಬೇಕು ಎಂದು ಅದಮಾರು ಮಠಾಧೀಶ ಶ್ರೀವಿಶ್ವಪ್ರಿಯ ತೀರ್ಥ ಸ್ವಾಮೀಜಿ ಹೇಳಿದ್ದಾರೆ.

ಉಡುಪಿ ಆದರ್ಶ ಆಸ್ಪತ್ರೆ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯ ಸಹ ಯೋಗದಲ್ಲಿ ರವಿವಾರ ಆಸ್ಪತ್ರೆಯಲ್ಲಿ ಆಯೋಜಿಸಲಾದ ಡಾ.ಸರ್ವೆಪಳ್ಳಿ ರಾಧಾ ಕೃಷ್ಣನ್ ಜಯಂತಿ ಹಾಗೂ ಉಡುಪಿ ಜಿಲ್ಲಾಮಟ್ಟದ ಶಿಕ್ಷಕರ ದಿನಾಚರಣೆಯನ್ನು ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು.

ಭಗವಂತ ಶಿಕ್ಷಕರನ್ನು ಮಾಧ್ಯಮವಾಗಿ ಇಟ್ಟುಕೊಂಡು ಎಲ್ಲ ಕೆಲಸಗಳನ್ನು ಮಾಡುತ್ತಿದ್ದಾನೆ. ಆದುದರಿಂದ ಗುರುವಿನ ಸ್ಥಾನ ಹರಿಯ ಸ್ಥಾನ ಕ್ಕಿಂತ ಎತ್ತರದಲ್ಲಿ ಇದೆ. ಸಮಾಜದಲ್ಲಿ ಎತ್ತರದ ಸ್ಥಾನದಲ್ಲಿರುವ ಶಿಕ್ಷಕರಿಗೆ ಜವಾಬ್ದಾರಿಗಳು ಕೂಡ ಹೆಚ್ಚಿವೆ ಎಂದು ಅವರು ತಿಳಿಸಿದರು.

ಇಂದು ಶಿಕ್ಷಕರಿಗೆ ಸಂಬಳ ಸರಿಯಾಗಿ ಆಗುತ್ತಿಲ್ಲ. ಪಠ್ಯ ಪುಸ್ತಕ ಬಾರದೆ ಶಿಕ್ಷಕರಿಗೆ ಪಾಠ ಮಾಡಲು ಆಗುತ್ತಿಲ್ಲ. ಇದರಿಂದ ಶಿಕ್ಷಣ ವ್ಯವಸ್ಥೆ ತೀರಾ ಕೆಳ ಮಟ್ಟಕ್ಕೆ ಹೋಗಿದೆ. ಸೋಮಾರಿ ಕ್ರೀಡಾ ಮಂತ್ರಿ, ಅಶಿಕ್ಷಿತ ಶಿಕ್ಷಣ ಸಚಿವ, ರೋಗಿ ಆರೋಗ್ಯ ಮಂತ್ರಿಯಾಗಿರುವ ವ್ಯವಸ್ಥೆಯನ್ನು ಸರಿಪಡಿಸಬೇಕು ಎಂದರು.
ಈ ಸಂದರ್ಭದಲ್ಲಿ ಆದರ್ಶ ಶಿಕ್ಷಕ ಪ್ರಶಸ್ತಿ ಪ್ರದಾನ ಮಾಡಲಾಯಿತು. ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್‌ನ ಪ್ರವರ್ತಕ ಡಾ.ಜಿ.ಶಂಕರ್, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಶೇಷಶಯನ ಕಾರಿಂಜ, ಆಸ್ಪತ್ಪೆಯ ಹಿರಿಯ ನರ ರೋಗ ಶಸ್ತ್ರಚಿಕಿತ್ಸಾ ತಜ್ಞ ಡಾ.ಎ.ರಾಜಾ ಮುಖ್ಯ ಅತಿಥಿಗಳಾಗಿದ್ದರು.

ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ಜಿ.ಎಸ್.ಚಂದ್ರಶೇಖರ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ನೆಂಪು ನರಸಿಂಹ ಭಟ್, ವಿಮಲಾ ಚಂದ್ರ ಶೇಖರ್ ಉಪಸ್ಥಿತರಿದ್ದರು. ಪ್ರಶಾಂತ್ ಹಾವಂಜೆ ಕಾರ್ಯಕ್ರಮ ನಿರೂಪಿಸಿ ದರು. ಬಳಿಕ ಶಿಕ್ಷಕರಿಗೆ ಉಚಿತ ಆರೋಗ್ಯ ತಪಾಸಣೆ ಹಾಗೂ ಮಾಹಿತಿ ಶಿಬಿರ ವನ್ನು ಏರ್ಪಡಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News