ಕುಳುಂಜೆ: ಬಾವಿಗೆ ಬಿದ್ದ ಗಂಡು ಚಿರತೆಯ ರಕ್ಷಣೆ

Update: 2018-09-09 13:00 GMT

ಕುಂದಾಪುರ, ಸೆ.9: ಕುಳುಂಜೆ ಗ್ರಾಮದ ಕಲ್ಲುಮಕ್ಕಿ ಎಂಬಲ್ಲಿ ಇಂದು ಬೆಳಗಿನ ಜಾವ ನಾಯಿ ಬೇಟೆಗೆ ಬಂದು ಬಾವಿಗೆ ಬಿದ್ದ ಚಿರತೆಯನ್ನು ಅರಣ್ಯ ಇಲಾಖೆಯವರು ರಕ್ಷಿಸಿದ್ದಾರೆ.

ನಸುಕಿನ ವೇಳೆ ಒಂದು ಗಂಟೆ ಸುಮಾರಿಗೆ ನಾಯಿ ಬೇಟೆಗೆ ಬಂದ ಚಿರತೆ, ಕಲ್ಲುಮಕ್ಕಿಯ ರಘುರಾಮ್ ಕುಲಾಲ್ ಎಂಬವರ ಮನೆಯ ಅಂಗಳದಲ್ಲಿದ್ದ ನಾಯಿಯನ್ನು ಕಚ್ಚಿ ಹಿಡಿದುಕೊಂಡು ಹೋಗುವಾಗ ಆವರಣ ಇಲ್ಲದ ಬಾವಿಗೆ ಬಿತ್ತೆನ್ನಲಾಗಿದೆ. ಈ ವೇಳೆ ಬಾವಿಗೆ ಬೀಳದೆ ಪಾರಾಗಿರುವ ನಾಯಿ, ಚಿರತೆ ಕಡಿತದಿಂದ ಗಾಯಗೊಂಡಿದೆ.

ಹೊರಗಿನ ಸದ್ದಿನಿಂದ ವಿಚಾರ ತಿಳಿದ ಮನೆಯವರು ಹೊರಗೆ ಬಂದು ನೋಡುವಾಗ ಬಾವಿಯಲ್ಲಿ ಚಿರತೆ ಮುಳುಗುತ್ತಿರುವುದು ಕಂಡುಬಂತು. ಕೂಡಲೇ ರಘುರಾಮ ಕುಲಾಲ್, ಚಿರತೆ ಮುಳುಗದಂತೆ ಬಾವಿಗೆ ಬಾಳೆ ದಿಂಡನ್ನು ಹಾಕಿದರು. ನಂತರ ಅವರು ಶಂಕರನಾರಾಯಣ ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು.

ತಕ್ಷಣ ಕಾರ್ಯಪ್ರವೃತ್ತರಾದ ಅರಣ್ಯ ಇಲಾಖೆಯವರು ಬಲೆ ಹಾಗೂ ಬೋನಿನೊಂದಿಗೆ ಸ್ಥಳಕ್ಕೆ ಆಗಮಿಸಿದರು. ಚಿರತೆ ಓಡಿ ಹೋಗದಂತೆ ಇಡೀ ಬಾವಿಯನ್ನು ಬಲೆಯಿಂದ ಮುಚ್ಚಲಾಯಿತು. ನಂತರ ಬೋನನ್ನು ಬಾವಿಗೆ ಇಳಿಸಲಾಯಿತು. ಬಾಳೆ ದಿಂಡನ್ನು ಹಿಡಿದು ಈಜುತ್ತಿದ್ದ ಚಿರತೆಯು ಬೋನಿ ನೊಳಗೆ ನುಗ್ಗಿ ಬಂಧಿಯಾಯಿತು.

ಮಧ್ಯರಾತ್ರಿ ಬಳಿಕ 1:30ರ ಸುಮಾರಿಗೆ ಆರಂಭಗೊಂಡ ಈ ಕಾರ್ಯಾಚರಣೆ ಬೆಳಗಿನ ಜಾವ 5ಗಂಟೆಗೆ ಮುಕ್ತಾಯವಾಯಿತು. ಸುಮಾರು ಮೂರರಿಂದ ನಾಲ್ಕು ವರ್ಷ ಪ್ರಾಯದ ಗಂಡು ಚಿರತೆ ಇದಾಗಿದೆ. ಬಳಿಕ ಇದನ್ನು ಬೋನು ಸಹಿತ ವಾಹನದಲ್ಲಿ ತೆಗೆದುಕೊಂಡು ಹೋಗಿ ಅಭಯಾರಣ್ಯದಲ್ಲಿ ಬಿಡಲಾಯಿತು.

ಈ ಕಾರ್ಯಾಚರಣೆಯಲ್ಲಿ ಶಂಕರನಾರಾಯಣ ವಲಯ ಅರಣ್ಯಾಧಿಕಾರಿ ಎ.ಎ.ಗೋಪಾಲ, ಉಪವಲಯ ಅರಣ್ಯಾಧಿಕಾರಿ ಹರೀಶ್ ಕೆ., ಅರಣ್ಯ ರಕ್ಷಕ ರಾದ ಗುರುರಾಜ್ ನಾಯ್ಕ, ಶ್ರೀಕಾಂತ್, ರವಿ ಗೋಳಿಯಂಗಡಿ, ಸಂತೋಷ್ ಜೋಗಿ, ಅರಣ್ಯ ವೀಕ್ಷಕ ಶಿವು, ಚಂದ್ರು, ಲಕ್ಷ್ಮಣ್, ಸಮೃದ್ಧಿ ಯುವಕ ತಂಡದ ಸದಸ್ಯರುಗಳು ಪಾಲ್ಗೊಂಡಿದ್ದರು. ಸ್ಥಳೀಯ ಗ್ರಾಪಂ ಅಧ್ಯಕ್ಷ ರವಿ ಕುಲಾಲ್ ಸಹಕರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News