'ಹಲಸಿನ ಉತ್ಪನ್ನಗಳಿಗೆ ಸರಕಾರ ಪ್ರೋತ್ಸಾಹ, ನೆರವು ನೀಡಬೇಕು'

Update: 2018-09-09 15:07 GMT

ಬಂಟ್ವಾಳ, ಸೆ. 9: ಕೇರಳ ಮಾದರಿಯಲ್ಲಿ ಹಲಸನ್ನು ಉಳಿಸುವ ಕಾರ್ಯಕ್ಕೆ ಮುಂದಾಗಬೇಕು ಎಂದು ಸರಕಾರಕ್ಕೆ ಆಗ್ರಹ, ಹಲಸಿನ ಉತ್ಪನ್ನಗಳಿಗೆ ಸರಕಾರದ ಪ್ರೋತ್ಸಾಹ ಮತ್ತು ಹಲಸಿನ ತಳಿ ಅಭಿವೃದ್ಧಿಗೆ ಪಂಚಾಯತ್ ಮಟ್ಟದಲ್ಲಿ ನೆರವು ನೀಡುವಂತೆ ಒತ್ತಾಯಿಸಿ ನವಚೇತನ ಸ್ನೇಹ ಸಂಗಮ ವತಿಯಿಂದ ಬಂಟ್ವಾಳದ ಸ್ಪರ್ಶ ಕಲಾ ಮಂದಿರದಲ್ಲಿ ಎರಡು ದಿನ ನಡೆದ ಅಕಾಲ ಹಲಸು ಸಂಗಮದಲ್ಲಿ ನಿರ್ಣಯ ಕೈಗೊಳ್ಳಲಾಗಿದೆ.

ರವಿವಾರ ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಅಕಾಲ ಹಲಸು ಸಂಗಮದ ರೂವಾರಿ ನವಚೇತನ ಸ್ನೇಹ ಸಂಗಮ ಅಧ್ಯಕ್ಷ ಅನಂತಪ್ರಸಾದ ನೈತಡ್ಕ ಈ ನಿರ್ಣಯವನ್ನು ಓದಿದರು.

ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಮಾಜಿ ಸಚಿವ ಬಿ.ರಮಾನಾಥ ರೈ, ಸಕ್ಕರೆ ಕಾಯಿಲೆ ಇರುವವರಿಗು ನಿರ್ದಿಷ್ಟ ತಳಿಯ ಹಲಸು ಇದೆ. ಹಿಂದೆ ಇದು ಬಡವರ ಆಹಾರವಾಗಿತ್ತು. ಗ್ರಾಹಕರ ಮತ್ತು ರೈತರು ಹಣ್ಣಿನ ಬಳಕೆಯ ಕುರಿತು ಜಾಗೃತರಾಗಿದ್ದಾರೆ ಎಂದು ಹೇಳಿದರು. ಹಲಸಿನ ಬಗ್ಗೆ ಬೆಳೆಗಾರರು ಉದಾಸೀನ ಮಾಡದೆ, ಇದರ ಉಪಯೋಗ,ಮಾರಾಟದ ಸಾಧ್ಯತೆಗಳ ಬಗ್ಗೆ ಯೋಚಿಸಬೇಕು. ಲಾಭದಾಯಕ ಕೃಷಿಯತ್ತ ನೋಡುವ ರೈತರು ತೆಂಗು, ಅಡಕೆಯೊಂದಿಗೆ ಹಲಸನ್ನು ಬೆಳೆಸಲು ಪ್ರಚೋದನೆ ನೀಡಲಿ ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಪತ್ರಕರ್ತ, ಕೃಷಿಕ ಮಹೇಶ ಪುಚ್ಚಪ್ಪಾಡಿ, ಹಲಸಿನ ಮೌಲ್ಯವರ್ಧನಕ್ಕೆ ಹಲಸಿನ ಮೇಳ, ಸ್ನೇಹ ಸಂಗಮ,  ಅಡಕೆ ಪತ್ರಿಕೆ ಮೂಲಕ ಕೃಷಿಕರನ್ನು ಸೇರಿಸಿ ಹಲಸಿನ ಉತ್ಪನ್ನಗಳನ್ನುಮಾಡುವ, ಮಾರುಕಟ್ಟೆ ಮಾಡುವ ಕಾರ್ಯ ನಡೆಯಿತು. ಅಕಾಲದಲ್ಲಿ ಹಲಸನ್ನು ಪಡೆದುಕೊಂಡು ಹಬ್ಬದ ರೀತಿಯಲ್ಲಿ ನಡೆಸಬಹುದು ಎಂದು ಈ ಕಾರ್ಯಕ್ರಮ ತೋರಿಸಿಕೊಟ್ಟಿದೆ ಇದಕ್ಕೆ ಸರಕಾರ ಪ್ರೋತ್ಸಾಹ ನೀಡಬೇಕು, ಕೃಷಿಕರಿಗೆ ನೆರವಾಗಬೇಕು ಎಂದು ಹೇಳಿದರು.

ವ್ಯ.ಸ.ಸೇ.ಸಹಕಾರಿ ಬ್ಯಾಂಕ್ ಅಧ್ಯಕ್ಷ ಜಿ.ಆನಂದ, ಬಂಟ್ವಾಳ ಭೂ ಅಭಿವೃದ್ಧಿ ಬ್ಯಾಂಕ್ ಅಧ್ಯಕ್ಷ ಸುದರ್ಶನ ಜೈನ್ ಉಪಸ್ಥಿತರಿದ್ದರು. ಸಂಘಟಕ ಜಯಾನಂದ ಪೆರಾಜೆ ಸ್ವಾಗತಿಸಿದರು. ಸುಭಾಶ್ಚಂದ್ರ ಜೈನ್ ಕಾರ್ಯಕ್ರಮನಿರೂಪಿಸಿದರು. ಎರಡು ದಿನಗಳ ಹಲಸು ಸಂಗಮದಲ್ಲಿ ನೂರಾರು ಮಂದಿ ಆಗಮಿಸಿ ಮಳಿಗೆಗಳಿಗೆ ಭೇಟಿ ನೀಡಿ ಹಲಸಿನ ಖಾದ್ಯಗಳ ಪರಿಚಯ ಮಾಡಿಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News