ಮಂಗಳೂರು: ನಿರ್ಗಮನ ಬಿಷಪ್‌ಗೆ ಬೀಳ್ಕೊಡುಗೆ, ನಿಯೋಜಿತ ಬಿಷಪ್‌ಗೆ ಸನ್ಮಾನ

Update: 2018-09-09 15:13 GMT

ಮಂಗಳೂರು, ಸೆ. 9: ಕೊಡಿಯಾಲ್‌ಬೈಲ್ ಬಿಷಪ್ಸ್ ಹೌಸ್ ಶಾಲೋಮ್ ಪ್ರೇಯರ್ ಮಿನಿಷ್ಟ್ರಿ ಸಂಸ್ಥೆಯ 3ನೇ ವಾರ್ಷಿಕ ದಿನಾಚರಣೆ ಹಾಗೂ ಸಂಸ್ಥೆಯಿಂದ ನಿರ್ಗಮನ ಬಿಷಪ್ ರೆ. ಡಾ. ಅಲೋಶಿಯಸ್ ಪೌಲ್ ಡಿಸೋಜ ಅವರಿಗೆ ಬೀಳ್ಕೊಡುಗೆ ಹಾಗೂ ನಿಯೋಜಿತ ಬಿಷಪ್ ರೆ.ಡಾ. ಪೀಟರ್ ಪೌಲ್ ಸಲ್ಡಾನ್ಹಾ ಅವರಿಗೆ ಸ್ವಾಗತ ಕೋರುವ ಸಮಾರಂಭ ಬಿಷಪ್ಸ್ ಹೌಸ್ ಚಾಪೆಲ್‌ನಲ್ಲಿ ರವಿವಾರ ಜರಗಿತು.

ಕಳೆದ 12 ವರ್ಷಗಳಿಂದ ಧರ್ಮ ಪ್ರಾಂತದ ಪ್ರಧಾನ ಗುರುವಾಗಿ ಕಾರ್ಯ ನಿರ್ವಹಿಸುತ್ತಿರುವ ಮೊ. ಡೆನಿಸ್ ಮೊರಾಸ್ ಪ್ರಭು ಅವರೂ ಸದ್ಯದಲ್ಲಿಯೇ ನಿವೃತ್ತರಾಗಲಿದ್ದು, ಅವರನ್ನು ಕೂಡ ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ರೋಸ್ ಮಿಸ್ತಿಕಾ ಕಾನ್ವೆಂಟ್‌ನ ಸುಪೀರಿಯರ್ ಸಿ.ಜುಲಿಯಾನಾ ಬಿಷಪ್ ಅಲೋಶಿಯಸ್ ಅವರ ಸಮ್ಮಾನ ಪತ್ರ ಹಾಗೂ ಚೇತನ್ ಮೆಂಡೊನ್ಸಾ ಅವರು ಮೊ. ಡೆನಿಸ್ ಮೊರಾಸ್ ಅವರ ಸಮ್ಮಾನ ಪತ್ರವನ್ನು ವಾಚಿಸಿದರು.

ಸಮ್ಮಾನಕ್ಕೆ ಪ್ರತಿಕ್ರಿಯಿಸಿರುವ ಮೊ. ಡೆನಿಸ್ ಮೊರಾಸ್ ಪ್ರಭು, ಶಾಲೋಮ್ ಪ್ರೇಯರ್ ಮಿನಿಸ್ಟ್ರಿಯ ಚಟುವಟಿಕೆಗಳಿಂದ ಜನರಲ್ಲಿ ಪ್ರಾರ್ಥನೆಯ ಬಗೆಗಿನ ಒಲವು ಹೆಚ್ಚಾಗುವಂತೆ ಪ್ರೇರಣೆ ಲಭಿಸಲಿ ಎಂದು ಹಾರೈಸಿದರು.

ಮನೆಗಳಲ್ಲಿ ದೈನಂದಿನ ದೇವರ ಪ್ರಾರ್ಥನೆ ಕುರಿತಂತೆ ಜನರಲ್ಲಿ ಆಸಕ್ತಿ ಹೆಚ್ಚಬೇಕು ಎಂದು ನಿಯೋಜಿತ ಬಿಷಪ್ ರೆ. ಡಾ.ಪೀಟರ್ ಪೌಲ್ ಸಲ್ಡಾನ್ಹಾ ಹೇಳಿದರು.

ದೇವರಲ್ಲಿ ಅಚಲ ವಿಶ್ವಾಸ ಇರಿಸಿ ಪ್ರಾರ್ಥಿಸುವುದರಿಂದ ಭಕ್ತರ ಬದುಕಿನಲ್ಲಿ ಪರಿವರ್ತನೆ ಸಾಧ್ಯವಾಗುತ್ತದೆ. ಶಾಲೋಮ್ ಪ್ರೇಯರ್ ಮಿನಿಸ್ಟ್ರಿ ಈ ದಿಸೆಯಲ್ಲಿ ಜನರಲ್ಲಿ ಪ್ರಾರ್ಥನೆಯ ಮಹತ್ವವನ್ನು ತಿಳಿಸುವಲ್ಲಿ ಮಾದರಿಯಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದು ಬಿಷಪ್ ಅಲೋಶಿಯಸ್ ಪೌಲ್ ಡಿಸೋಜ ಶ್ಲಾಘಿಸಿದರು. ತನಗೆ ನೀಡಿದ ಸಮ್ಮಾನಕ್ಕೆ ಕೃತಜ್ಞತೆ ಸಲ್ಲಿಸಿದರು.

ಧರ್ಮಪ್ರಾಂತದ ಪಾಲನಾ ಪರಿಷತ್ ಕಾರ್ಯದರ್ಶಿ ಎಂ.ಪಿ. ನೊರೋನ್ಹಾ ಸ್ವಾಗತಿಸಿದರು. ಫಾ. ಮನೋಹರ್, ಫಾ. ಜಾರ್ಜ್ ಕರಮವಲ್ಲಿ, ಸಿ.ಲಿಲ್ಲಿಸ್, ಸಿ.ಲೆತೀಶಿಯಾ, ಫಾ.ಅನಿಲ್ ಆಲ್ಫ್ರೆಡ್ ಉಪಸ್ಥಿತರಿದ್ದರು.

ಪ್ರಾರಂಭದಲ್ಲಿ ಬಿಷಪ್ ಅಲೋಶಿಯಸ್ ಪೌಲ್ ಡಿಸೋಜ ನೇತೃತ್ವದಲ್ಲಿ ಬಲಿಪೂಜೆ ನಡೆಯಿತು. ರೆ.ಡಾ. ಪೀಟರ್ ಪೌಲ್ ಸಲ್ಡಾನ್ಹಾ ಅವರು ಪ್ರಮಾಣವಚನ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News