ಸೆ.10ರಂದು ಭಾರತ್ ಬಂದ್‌ಗೆ ಬೆಂಬಲಿಸಿ: ಐವನ್ ಡಿಸೋಜ

Update: 2018-09-09 15:40 GMT

ಮಂಗಳೂರು, ಸೆ.9: ತೈಲೋತ್ಪನ್ನಗಳ ವಿಪರೀತ ದರ ಏರಿಕೆ ವಿರುದ್ಧ ಕಾಂಗ್ರೆಸ್ ನೀಡಿದ ಸೆ.10ರಂದು ದೇಶವ್ಯಾಪಿ ಬಂದ್ ಕರೆಗೆ ದ.ಕ. ಜಿಲ್ಲೆಯ ನಾಗರಿಕರು ಸೇರಿದಂತೆ ಎಲ್ಲರೂ ಬೆಂಬಲ ಸೂಚಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ವಿನಂತಿಸಿದ್ದಾರೆ.

ನಗರದ ಸ್ಟೇಟ್‌ಬ್ಯಾಂಕ್ ಸರ್ವೀಸ್ ಬಸ್ ನಿಲ್ದಾಣದಲ್ಲಿ ರವಿವಾರ ಜಾಗೃತಿ ಅಭಿಯಾನದಲ್ಲಿ ಬಸ್‌ಗಳಿಗೆ ಕರಪತ್ರ ಅಂಟಿಸುವ ಮೂಲಕ ಬಂದ್‌ನಲ್ಲಿ ಪಾಲ್ಗೊಳ್ಳುವಂತೆ ಅವರು ವಿನಂತಿಸಿದರು.

ಈಗಾಗಲೇ ಸೋಮವಾರದ ಬಂದ್ ಕರೆಗೆ ಸಂಘ ಸಂಸ್ಥೆಗಳು, ಖಾಸಗಿ ಬಸ್ ಚಾಲಕ ಮಾಲಕರು, ಸರಕಾರಿ ಬಸ್‌ಗಳು ಬೆಂಬಲ ವ್ಯಕ್ತಪಡಿಸುವ ಭರವಸೆ ಇದೆ. ಅದೇರೀತಿ ಶಾಲಾ ಕಾಲೇಜುಗಳೂ ಬಂದ್‌ನಲ್ಲಿ ಪಾಲ್ಗೊಳ್ಳಬೇಕು ಎಂದು ಅವರು ಕೋರಿದರು.

ಕಾಂಗ್ರೆಸ್ ಬಂದ್‌ಗೆ ಕರೆ ನೀಡಿದ ಬಳಿಕವೂ ಪೆಟ್ರೋಲ್ ದರ ದಿನಂಪ್ರತಿ ಏರಿಕೆಯಾಗುವುದು ನಿಂತಿಲ್ಲ. ಹಾಗಾದರೂ ಕೇಂದ್ರ ಸರಕಾರ, ಬಿಜೆಪಿ ಅಥವಾ ಪ್ರಧಾನಿ ಅವರು ಯಾರೂ ತೈಲದರ ಏರಿಕೆ ಬಗ್ಗೆ ಮಾತನಾಡುತ್ತಿಲ್ಲ ಎಂದು ದೂರಿದರು.

ಪ್ರಸಕ್ತ ಪೆಟ್ರೋಲ್ ದರ ಲೀಟರ್‌ಗೆ 83 ರೂ. ದಾಟಿದೆ. ವಿದೇಶಗಳಿಗೆ ಕೇಂದ್ರ ಸರಕಾರ ಲೀಟರ್‌ಗೆ 38 ರೂ. ದರದಲ್ಲಿ ತೈಲೋತ್ಪನ್ನ ಮಾರಾಟ ಮಾಡುತ್ತಿದೆ. ಬಸ್ ಮಾಲಕರು ದಿನಕ್ಕೆ 400 ಲೀಟರ್ ಡೀಸೆಲ್‌ಗೆ 800 ರಿಂದ 1 ಸಾವಿರ ರೂ.ವರೆಗೆ ಅಧಿಕ ಮೊತ್ತವನ್ನು ನೀಡಬೇಕಾಗಿದೆ ಎಂದರು.

ದಿನಬಳಕೆ ವಸ್ತಗಳ ಬೆಲೆಯೂ ಗಗನಮುಖಿಯಾಗುತ್ತಿದೆ. ಇಷ್ಟಾದರೂ ಬಿಜೆಪಿಗರು ಈ ಬಂದ್ ಕರೆಯನ್ನು ರಾಜಕೀಯ ಪ್ರೇರಿತ ಎನ್ನುತ್ತಿದ್ದಾರೆ. ಇದು ಖಾಸಗಿ ಕಂಪೆನಿಗಳ ಪರವಾಗಿ ಕೇಂದ್ರ ಸರಕಾರದ ನೀತಿಗೆ ನಿದರ್ಶನವಾಗಿದೆ. ದೇಶದಲ್ಲಿ ಆರ್ಥಿಕ ತುರ್ತು ಪರಿಸ್ಥಿತಿಯನ್ನು ಹೇರಿದಂತಾಗಿದೆ ಎಂದು ಐವನ್ ಡಿಸೋಜ ಆರೋಪಿಸಿದರು.

ಕರಪತ್ರ ಅಂಟಿಸಿ ಬಂದ್‌ಗೆ ಆಗ್ರಹ

ಸ್ಟೇಟ್‌ಬ್ಯಾಂಕ್ ಸರ್ವೀಸ್ ಬಸ್ ನಿಲ್ದಾಣಕ್ಕೆ ಆಗಮಿಸಿದ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಹಾಗೂ ತಂಡ ಅಲ್ಲಿದ್ದ ಖಾಸಗಿ ಬಸ್‌ಗಳಿಗೆ ಬಂದ್‌ನ ಕರಪತ್ರವನ್ನು ಅಂಟಿಸುವ ಮೂಲಕ ಬೆಂಬಲ ಸೂಚಿಸುವಂತೆ ಆಗ್ರಹಿಸಿತು. ಸ್ಟೇಟ್‌ಬ್ಯಾಂಕ್‌ನಿಂದ ಹೊರಡುವ ಎಲ್ಲ ಬಸ್‌ಗಳಿಗೆ ಕರಪತ್ರವನ್ನು ಅಂಟಿಸಲಾಯಿತು. ಈ ಮಧ್ಯೆ ಸರಕಾರಿ ನರ್ಮ್ ಬಸ್‌ಗಳಿಗೂ ಸ್ವತಃ ಐವನ್ ಡಿಸೋಜ ಅವರೇ ಕರಪತ್ರ ಅಂಟಿಸಿ ಬಂದ್‌ನಲ್ಲಿ ಪಾಲ್ಗೊಳ್ಳುವಂತೆ ವಿನಂತಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News