ಅನಧಿಕೃತ ಪಡಿತರ ದಾಸ್ತಾನು: 17.24 ಲಕ್ಷ ರೂ. ಮೌಲ್ಯದ ಸೊತ್ತು ವಶ; ಓರ್ವ ಸೆರೆ

Update: 2018-09-09 15:49 GMT

ಮಂಗಳೂರು, ಸೆ.9: ಕಾವೂರು ಠಾಣೆ ವ್ಯಾಪ್ತಿಯ ಬೋಂದೆಲ್ ಬಳಿಯ ಮಂಜಲ್ಪಾದೆಯ ಗೋದಾಮು ಒಂದರಲ್ಲಿ ಅನಧಿಕೃತವಾಗಿ ಪಡಿತರ ಅಕ್ಕಿ ಮತ್ತು ಗೋಧಿಯನ್ನು ದಾಸ್ತಾನು ಮಾಡಿಕೊಂಡಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಕಾವೂರು ಪೊಲೀಸರ ತಂಡ ದಾಳಿ ನಡೆಸಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಅಕ್ಕಿ, ಗೋದಿ ಸೇರಿದಂತೆ 17,24,500 ರೂ. ವೌಲ್ಯದ ಸೊತ್ತುಗಳನ್ನು ವಶಡಿಸಿಕೊಂಡಿದ್ದು, ಓರ್ವನನ್ನು ಬಂಧಿಸಿದ್ದಾರೆ.

ಅಸ್ಸಾಂ ಮೂಲದ ಮೊಬೀರುಲ್ (21) ಬಂಧಿತ ಆರೋಪಿ ಎಂದು ತಿಳಿದುಬಂದಿದೆ. 

ಸೆ. 7ರಂದು ಕಾವೂರು ಪೊಲೀಸ್ ಠಾಣೆ ನಿರೀಕ್ಷಕ ಕೆ.ಆರ್. ನಾಯ್ಕ ನೇತೃತ್ವದ ತಂಡ ದಾಳಿ ನಡೆಸಿತ್ತು. ನಂತರ ಮಂಗಳೂರು ನಗರದ ತಾಲೂಕು ಕಚೇರಿಯ ಆಹಾರ ಶಿರಸ್ತೇದಾರರಾದ ಕಸ್ತೂರಿ ಮತ್ತು ಅಧಿಕಾರಿಗಳು ಗೋಡಾನ್‌ನಲ್ಲಿ ಅಕ್ಕಿ ಮತ್ತು ಗೋಧಿಯನ್ನು ದಾಸ್ತಾನು ಮಾಡಿ ರೀಪ್ಯಾಕಿಂಗ್ ಮಾಡುತ್ತಿರುವುದು ದೃಢಪಟ್ಟಿದ್ದು, ಗೋದಾಮಿನೊಳಗಡೆ ಮತ್ತು ಮೂರು ವಾಹನಗಳಲ್ಲಿದ್ದ ಒಟ್ಟು 290ಕ್ವಿಂಟಾಲ್ ಅಕ್ಕಿ ಮತ್ತು 9 ಕ್ವಿಂಟಾಲ್ ಗೋಧಿ ಇದ್ದು, ಅದನ್ನು ವಶಪಡಿಸಿಕೊಳ್ಳಲಾಗಿದೆ. ನ್ಯಾಯಬೆಲೆ ಅಂಗಡಿಗಳಿಗೆ ಮತ್ತು ಅಲ್ಪಸಂಖ್ಯಾತರ ಹಾಸ್ಟೆಲ್‌ಗಳಿಗೆ ಸೇರಿದ ಈ ವಸ್ತುಗಳನ್ನು ಅಕ್ರಮವಾಗಿ ಬೇರೆಡೆ ಸಾಗಾಟ ಮಾಡಲಾಗುತ್ತಿತ್ತು.

ಪ್ರಕರಣದಲ್ಲಿ 8.20 ಲಕ್ಷ ರೂ. ಮೌಲ್ಯದ ಅಕ್ಕಿ ಮತ್ತು ಗೋಧಿಯನ್ನು ವಶಪಡಿಸಿಕೊಳ್ಳಲಾಗಿದೆ. ವಸ್ತುಗಳನ್ನು ಸಾಗಾಟಕ್ಕೆ ಬಳಸಿದ ಲಾರಿ, ಪಿಕಪ್ ವಾಹನ ಸೇರಿದಂತೆ ಒಟ್ಟು 17,24,500 ರೂ. ಮೌಲ್ಯದ ಸೊತ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಈ ಬಗ್ಗೆ ಆಹಾರ ಅಧಿಕಾರಿಗಳು ಕಾವೂರು ಪೊಲೀಸರಿಗೆ ದೂರು ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News