ಮಂಗಳೂರು ಧಕ್ಕೆಯಲ್ಲಿ ಸುಂಕ ವಸೂಲಿ ವೇಳೆ 10 ರೂ. ನಾಣ್ಯ ತಿರಸ್ಕಾರ: ಆರೋಪ

Update: 2018-09-09 16:33 GMT

ಮಂಗಳೂರು, ಸೆ.9: ದೇಶದಲ್ಲಿ 10 ರೂ. ಮುಖಬೆಲೆಯ ನಾಣ್ಯ ಚಲಾವಣೆಯಲ್ಲಿ ಇದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಸ್ಪಷ್ಟಪಡಿಸಿದ ಬಳಿಕವೂ ಈ ನಾಣ್ಯವನ್ನು ತಿರಸ್ಕರಿಸುವುದು ಮುಂದುವರಿದಿದೆ.

ಮಂಗಳೂರಿನ ಹಳೆ ಬಂದರಿನ ಧಕ್ಕೆಯ ಪ್ರವೇಶ ದ್ವಾರದಲ್ಲಿ ಸುಂಕ ಸಂಗ್ರಹಿಸುತ್ತಿರುವ ಸಿಬ್ಬಂದಿ ಈ ನಾಣ್ಯ ಸ್ವೀಕರಿಸುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ.

ಇದಕ್ಕೆ ಪೂರಕವಾಗಿ ಸುಂಕ ಸಿಬ್ಬಂದಿ 10 ರೂ. ನಾಣ್ಯ ನಿರಾಕರಿಸಿದ್ದಾರೆ. ಈ ಬಗ್ಗೆ ವಾಹನ ಚಾಲಕರೊಬ್ಬರು ವೀಡಿಯೊ ಚಿತ್ರೀಕರಣ ಮಾಡಿ ಅದನ್ನು ನಗರ ಪೊಲೀಸ್ ಕಮಿಷನರ್‌ಗೆ ನೀಡಿದ್ದಾರೆ. ಅಲ್ಲದೆ, ಈ ಬಗ್ಗೆ ಶುಕ್ರವಾರ ವಾಟ್ಸ್‌ಆ್ಯಪ್‌ನಲ್ಲಿ ದೂರು ನೀಡಿದ್ದರು.

10 ರೂ. ನಾಣ್ಯ ಸ್ಥಗಿತಗೊಂಡಿಲ್ಲ. ಅದು ಚಲಾವಣೆಯಲ್ಲಿದೆ. ನಾಣ್ಯ ಸ್ವೀಕರಿಸಲು ನಿರಾಕರಿಸಿದರೆ ಅದು ಅಪರಾಧವಾಗುತ್ತದೆ ಎಂದು ಆರ್‌ಬಿಐ ಸೂಚನೆ ನೀಡಿದ ಹೊರತೂ ಸುಂಕ ಸಿಬ್ಬಂದಿಯ ವರ್ತನೆಗೆ ವಾಹನ ಚಾಲಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಬಸ್, ಆಟೋಗಳಲ್ಲೂ ನಿರಾಕರಣೆ

10 ರೂ. ನಾಣ್ಯ ನಿರಾಕರಣೆ ಕೇವಲ ಹಳೆ ಬಂದರು ಸುಂಕ ಕೇಂದ್ರದಲ್ಲಿ ಮಾತ್ರವಲ್ಲ, ಸುರತ್ಕಲ್‌ನ ಎನ್‌ಐಟಿಕೆ ಟೋಲ್‌ಗೇಟ್‌ನಲ್ಲೂ ಇದೇ ಪರಿಸ್ಥಿತಿ ಇದೆ ಎಂದು ವಾಹನ ಚಾಲಕರು ದೂರುತ್ತಾರೆ. ಮಂಗಳೂರು ನಗರದಲ್ಲಿ ಸಂಚರಿಸುವ ಕೆಲವು ಖಾಸಗಿ ಬಸ್ ಹಾಗೂ ಆಟೋರಿಕ್ಷಾಗಳಲ್ಲೂ 10 ರೂ. ನಾಣ್ಯ ಸ್ವೀಕರಿಸುತ್ತಿಲ್ಲ. ಈ ಬಗ್ಗೆ ಪ್ರಶ್ನಿಸಿದರೆ, ನಮ್ಮಿಂದ ಈ ನಾಣ್ಯವನ್ನು ಯಾರೂ ಪಡೆಯುತ್ತಿಲ್ಲ ಎಂದು ಉತ್ತರಿಸುತ್ತಾರೆ. ವಾಸ್ತವದಲ್ಲಿ ಎಸ್‌ಬಿಐ ಸಹಿತ ಬ್ಯಾಂಕ್‌ಗಳು 10 ರೂ. ನಾಣ್ಯವನ್ನು ಸ್ವೀಕರಿಸುತ್ತಿವೆ. ಆದರೆ ಈ ಬಗ್ಗೆ ತಿಳಿವಳಿಕೆ ಇಲ್ಲದ ಪ್ರಯಾಣಿಕರು ಹಾಗೂ ವಾಹನ ಚಾಲಕರು ದೂರು ನೀಡಲು ಮುಂದಾಗುತ್ತಿಲ್ಲ. ಇದರಿಂದಾಗಿ ನಾಣ್ಯ ನಿರಾಕರಣೆ ಅಲ್ಲಲ್ಲಿ ಮುಂದುವರಿಯುತ್ತಲೇ ಇದೆ ಎನ್ನುತ್ತಾರೆ ನಾಗರಿಕರು.

ನಮ್ಮ ಟೋಲ್‌ನಲ್ಲಿ 10 ರೂ. ನಾಣ್ಯ ಸ್ವೀಕರಿಸದಿರುವ ಅಂಶ ಈಗಷ್ಟೆ ಗಮನಕ್ಕೆ ಬಂದಿದೆ. ನಮ್ಮಿಂದ ತಪ್ಪಾಗಿದೆ. ಈ ಬಗ್ಗೆ ಟೋಲ್‌ನ ಸಿಬ್ಬಂದಿಗೆ ಸೂಚನೆ ನೀಡಿದ್ದು, 10 ರೂ. ನಾಣ್ಯವನ್ನು ನಿರಾಕರಿಸಬಾರದು ಎಂದು ಸೂಚಿಸಿದ್ದೇನೆ.

- ಅಶ್ರಫ್,
ಸುಂಕ ವಸೂಲಿ ಕೇಂದ್ರದ ಗುತ್ತಿಗೆದಾರ

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News