ಬಿ.ಸಿ.ರೋಡ್‌ನಲ್ಲಿ ಬಸ್‌ಗಳ ಮೇಲೆ ಕಲ್ಲು ತೂರಾಟ

Update: 2018-09-10 05:13 GMT

ಬಂಟ್ವಾಳ, ಸೆ.10: ಭಾರತ ಬಂದ್ ಹಿನ್ನೆಲೆಯಲ್ಲಿ ಬಂಟ್ವಾಳದಲ್ಲಿಂದು ಬೆಳಗ್ಗೆ ಎರಡು ಕೆಎಸ್ಸಾರ್ಟಿಸಿ ಬಸ್‌ಗಳಿಗೆ ಕಲ್ಲೆಸೆದ ಘಟನೆ ನಡೆದಿದೆ. ಅಲ್ಲಲ್ಲಿ ರಸ್ತೆಯಲ್ಲಿ ಟಯರ್‌ಗಳಿಗೆ ಬೆಂಕಿ ಹಾಕಿ ರಸ್ತೆ ತಡೆಗೆ ಯತ್ನಿಸಲಾಗಿದೆ. ಈ ನಡುವೆ ರಸ್ತೆ ತಡೆಗೆ ಯತ್ನಿಸಿದ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಬಿ.ಸಿ.ರೋಡ್ ಮುಖ್ಯ ವೃತ್ತದ ಬಳಿಯಲ್ಲಿ ಬೆಂಗಳೂರು ಕಡೆಯಿಂದ ಮಂಗಳೂರು ಕಡೆಗೆ ಬರುತ್ತಿದ್ದ ಕೆಎಸ್ಸಾರ್ಟಿಸಿ ಬಸ್‌ಗೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದಾರೆ. ಇದರಿಂದ ಬಸ್‌ನ ಮುಂಭಾಗದ ಗಾಜಿಗೆ ಹಾನಿಯಾಗಿದೆ. ಇದಕ್ಕೂ ಮೊದಲು ಮುಂಜಾನೆ 5:30ರ ವೇಳೆಗೆ ಬಂಟ್ವಾಳದಲ್ಲಿ ಇನ್ನೊಂದು ಬಸ್ ಮೇಲೂ ಕಲ್ಲೆಸೆತ ನಡೆದಿದೆ. ಇದರಿಂದ ಅದರ ಗ್ಲಾಜಿಗೂ ಹಾನಿಯಾಗಿದೆ.

ಜಕ್ರಿಬೆಟ್ಟುವಿನಲ್ಲಿ ಇಬ್ಬರು ಪೊಲೀಸ್ ವಶಕ್ಕೆ
ಜಕ್ರಿಬೆಟ್ಟುವಿನಲ್ಲಿ ರಸ್ತೆ ತಡೆ ಮಾಡುತ್ತಿದ್ದ ಇಬ್ಬರನ್ನು ಬಂಟ್ವಾಳ ಗ್ರಾಮಾಂತರ ಪೊಲೀಸರು ವಶಕ್ಕೆ ಪಡೆದು ಕೊಂಡಿರುವ ಬಗ್ಗೆ ಮಾಹಿತಿ ತಿಳಿದುಬಂದಿದೆ.

ತುಂಬೆಯಲ್ಲಿ ಟಯರ್ ಹಾಕಿ ರಸ್ತೆ ತಡೆ ಮಾಡಿದ್ದನ್ನು ಪೊಲೀಸರು ತೆರವು ಮಾಡಿದ್ದಾರೆ. ಮಾಣಿ ಸಮೀಪದ ಹಳೀರ ಎಂಬಲ್ಲಿ ರಸ್ತೆ ಮಧ್ಯೆ ಕಿಡಿಗೇಡಿಗಳು ಟಯರ್ ಸುಟ್ಟು ಹಾಕಿದ ಘಟನೆ ಬೆಳಗ್ಗೆ ನಡೆದಿದೆ.

ಇನ್ನೂ ಕಲ್ಲಡ್ಕ ಕೆ.ಸಿ.ರೋಡ್, ಮಾಣಿ ನಾರಾಯಣ ಗುರು ಮಂದಿರ ಬಳಿಯ ರಸ್ತೆಯಲ್ಲಿ ಬಂದ್ ಬೆಂಬಲಿಗರು ಟಯರ್‌ಗೆ ಬೆಂಕಿ ಹಚ್ಚಿ ರಸ್ತೆ ತಡೆ ನಡೆಸಲು ಯತ್ನಿಸಿದ್ದಾರೆ. ಪೊಲೀಸರು ಸಕಾಲಿಕವಾಗಿ ಆಗಮಿಸಿ ಸಂಚಾರಕ್ಕೆ ಅಡಚಣೆಯಾಗದಂತೆ ಟಯರ್‌ಗಳನ್ನು ಬದಿಗೆ ಸರಿಸಿ,ಬೆಂಕಿ ನಂದಿಸಿದ್ದಾರೆ.

ಬಂದ್ ಹಿನ್ನೆಲೆಯಲ್ಲಿ ಕಲ್ಲಡ್ಕ ಸಹಿತ ಜಿಲ್ಲೆಯ ಪ್ರಮುಖ ನಗರಗಳಲ್ಲಿ ಹೆಚ್ಚುವರಿ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News