ಉಡುಪಿಗೂ ತಟ್ಟಿದ ಬಂದ್ ಬಿಸಿ

Update: 2018-09-10 06:39 GMT

ಉಡುಪಿ, ಸೆ.10: ಉಡುಪಿ ಜಿಲ್ಲೆಗೂ ಹೊತ್ತೇರುತ್ತಿದ್ದಂತೆ ಭಾರತ ಬಂದ್ ಬಿಸಿ ತಟ್ಟುತ್ತಿದೆ. ಸಿಟಿ ಬಸ್‌ಗಳು ಬಂದ್‌ಗೆ ಬೆಂಬಲ ಸೂಚಿಸಿರುವುದರಿಂದ ನಿತ್ಯ ಗಿಜಿಗುಡುತ್ತಿದ್ದ ಸರ್ವಿಸ್‌ ಬಸ್ ನಿಲ್ದಾಣ ಬಿಕೋ ಎನ್ನುತ್ತಿದೆ. ದೂರದೂರುಗಳ ಆಗಮಿಸಿದರವರಿಗೆ, ಪ್ರವಾಸಿಗರು ಬೆಳಗ್ಗೆಯೇ ಬಂದ್‌ನಿಂದ ಸಮಸ್ಯೆಗೊಳಗಾದರು. ಕುಂದಾಪುರಕ್ಕೆ ತೆರಳುತ್ತಿದ್ದ ಕೇರಳ ಮತ್ತು ತಮಿಳುನಾಡಿನಿಂದ ಆಗಮಿಸಿದ್ದ ಪ್ರವಾಸಿಗರಿದ್ದ ಖಾಸಗಿ ಬಸ್ ಸಂಚಾರ ಉಡುಪಿಗೇ ಮೊಟಕುಗೊಳಿಸಲಾಯಿತು. ಇದರಿಂದ ಕುಂದಾಪುರ ಮಾರ್ಗವಾಗಿ ಕೊಲ್ಲೂರಿಗೆ ತೆರಳುವವರಿದ್ದ ಪ್ರವಾಸಿಗರು ಸಂಕಷ್ಟಕ್ಕೆ ಸಿಲುಕಿದರು.

ನಗರದ ಬಸ್ ನಿಲ್ದಾಣದಲ್ಲಿ ಬಹುತೇಕ ಅಂಗಡಿಗಳು ಎಂದಿನಂತೆ ತೆರೆದಿವೆ. ಅಲ್ಲಲ್ಲಿ ಕೆಲವೊಂದು ಅಂಗಡಿಗಳು ಮುಚ್ಚಿವೆ. ಈ ಮಧ್ಯೆ ಉಡುಪಿಯಲ್ಲಿ ಬಲವಂತದ ಬಂದ್ ಪ್ರಯತ್ನ ಕೂಡ ನಡೆದಿದೆ ಎನ್ನಲಾಗಿದೆ.

ಕಾಂಗ್ರೆಸ್, ಜೆಡಿಎಸ್ ಕಾರ್ಯಕರ್ತರು ಬಂದ್‌ಗೆ ಬೆಂಬಲ ನೀಡುವಂತೆ ಮನವಿ ಮಾಡುವ ದೃಶ್ಯ ಬಸ್ ನಿಲ್ದಾಣದ ಆಸುಪಾಸಿನಲ್ಲಿ ಕಂಡುಬರುತ್ತಿದೆ. ಆಟೋ, ಖಾಸಗಿ ಮತ್ತು ಸರಕಾರಿ ಬಸ್‌ಗಳನ್ನೂ ನಿಲ್ಲಿಸಿ ಸಂಚಾರ ನಡೆಸದಂತೆ ಒತ್ತಡ ಹೇರುತ್ತಿರುವ ದೃಶ್ಯಗಳು ಕೆಲವೆಡೆ ಕಂಡುಬರುತ್ತಿದೆ.

ಅಂಗಡಿಗಳಿಗೆ ತೆರಳಿ ಬಂದ್ ಮಾಡುವಂತೆ ಸುಮಾರು ನೂರಕ್ಕೂ ಮಿಕ್ಕ ಕಾರ್ಯಕರ್ತರು ನಗರಾದ್ಯಂತ ಸಂಚರಿಸುತ್ತಿದ್ದಾರೆ. ಇನ್ನೊಂದೆಡೆ ಪೊಲೀಸರು ಸಾರ್ವಜನಿಕರಿಗೆ ತೊಂದರೆಯಾಗದಂತೆ ನೋಡಿಕೊಳ್ಳಲು ನಗರದಾದ್ಯಂತ ಗಸ್ತು ತಿರುಗುತ್ತಿದ್ದಾರೆ.

ಜಿಲ್ಲೆಯಲ್ಲಿ ಖಾಸಗಿ ಹಾಗೂ ಸರಕಾರಿ ಬಸ್ ಗಳು ಬೆಳಗಿನಿಂದ‌ಲೇ ರಸ್ತಗಿಳಿಯದೇ ಬಂದ್‌ಗೆ ಬೆಂಬಲ ಸೂಚಿಸಿದವು. ಜಿಲ್ಲೆಯ ಎಲ್ಲಾ  ಶಾಲಾ ಕಾಲೇಜುಗಳಿಗೆ ಜಿಲ್ಲಾಧಿಕಾರಿ ನಿನ್ನೆ‌ಯೇ ರಜೆ ಘೋಷಿಸಿದ್ದರಿಂದ ಬಾಗಿಲು ತೆರೆಯಲಿಲ್ಲ.

ಬ್ರಹ್ಮಾವರ ದಲ್ಲಿ ಹೆಚ್ಚಿನ ಅಂಗಡಿ ಮುಂಗಟ್ಟುಗಳು ಮುಚ್ಚಿದ್ದು, ಹೊತ್ತು ಸರಿದಂತೆ ಉಳಿದವು ಕೂಡ ಬಾಗಿಲು ಮುಚ್ಚಿದವು. ರಾಷ್ಟ್ರೀಯ ಹೆದ್ದಾರಿಯಲ್ಲಿ ಕೇವಲ ಮೋಟಾರು ಸೈಕಲ್, ಖಾಸಗಿ ಕಾರುಗಳು ಹಾಗೂ ಅಪರೂಪಕ್ಕೆ ಸರಕು ಹೊತ್ತ ಅಂತಾರಾಜ್ಯ ಲಾರಿಗಳು ಓಡಾಡುತ್ತಿವೆ.

ಸಾಲಿಗ್ರಾಮದಲ್ಲಿ ಅಂಗಡಿಗಳನ್ನು ಬಲವಂತವಾಗಿ ಮುಚ್ಚಿಸುವ ಹಾಗೂ ತೆರೆಸುವ ಕುರಿತಂತೆ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದ ಬಗ್ಗೆ ವರದಿಯಾಗಿದೆ.  ಬಳಿಕ ಪೊಲೀಸರು ಮಧ್ಯ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು.

ಕುಂದಾಪುರದಲ್ಲೂ ಬಂದ್ ಗೆ ಉತ್ತಮ ಬೆಂಬಲ ವ್ಯಕ್ತವಾಗಿದೆ. ಹೆಚ್ಚಿನ ಅಂಗಡಿ ಮುಂಗಟ್ಟುಗಳು ಬೆಳಗಿನಿಂದಲ್ಲೇ ಮುಚ್ಚಿದ್ದು, ಕೆಲವನ್ನು ಕಾಂಗ್ರೆಸ್ ಕಾರ್ಯಕರ್ತರು ಬಲವಂತವಾಗಿ ಮುಚ್ಚಿಸುತ್ತಿರುವುದು ಕಂಡು‌ಬಂತು. ಈ ಕಾರಣಕ್ಕಾಗಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆಯಿತು. 

ಬಾಗಿಲು ತೆರೆದಿದ್ದ ಕಲ ಬ್ಯಾಂಕ್ ಗಳನ್ನು ಕಾಂಗ್ರೆಸ್‌ ಕಾರ್ಯಕರ್ತರು ಬಲವಂತವಾಗಿ ಮುಚ್ಚಿ‌ಸಲು ಮುಂದಾದಾಗ ಪೊಲೀಸರು ಅವರನ್ನು ತಡೆದರು. ಇದರಿಂದ ಪೊಲೀಸ್ ಎಸ್ಸೈ ಹಾಗೂ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದು, ಡಿವೈಎಸ್ಪಿ ಮದ್ಯಪ್ರವೇಶದಿಂದ ಪರಿಸ್ಥಿತಿ ತಿಳಿಯಾಯಿತು.

ಕುಂದಾಪುರ‌ದ ಶಾಸ್ತ್ರಿ ಸರ್ಕಲ್‌ನ ರಾಷ್ಟ್ರೀಯ ಹೆದ್ದಾರಿಯಲ್ಲಿ ಹೆದ್ದಾರಿ ತಡೆ ನಡೆಸಿದ ಬಂದ್ ಬೆಂಬಲಿಗರು, ಸರಕು ಹೇರಿಕೊಂಡು ಹೋಗುತ್ತಿದ್ದ ಲಾರಿಗಳನ್ನು ತಡೆದರು.

ಕುಂದಾಪುರ ತಾಲೂಕಿನಾದ್ಯಂತ  ಶಾಲಾ ಕಾಲೇಜುಗಳು ಮುಚ್ಚಿದ್ದ‌ವು. ಬಸ್‌ಗಳು ಸಂಚರಿಸಲಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News