ಮುಡಿಪು ಸಂಪೂರ್ಣ ಬಂದ್: ಕಾಂಗ್ರೆಸ್ ಕಾರ್ಯಕರ್ತರಿಂದ ಸಾಂಕೇತಿಕ ಪ್ರತಿಭಟನೆ

Update: 2018-09-10 05:46 GMT

ಕೊಣಾಜೆ, ಸೆ.10: ತೈಲ ಬೆಲೆ ಏರಿಕೆ ವಿರೋಧಿಸಿ ಕಾಂಗ್ರೆಸ್ ನೇತೃತ್ವದಲ್ಲಿ ನಡೆಯುವ ಭಾರತ ಬಂದ್‌ಗೆ ಉಳ್ಳಾಲ, ದೇರಳಕಟ್ಟೆ ಸೇರಿದಂತೆ ಮುಡಿಪುವಿನಲ್ಲಿ ಬೆಳಗ್ಗೆಯಿಂದಲೇ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಮುಡಿಪುವಿನಲ್ಲಿ ಹೆಚ್ಚಿನ ಎಲ್ಲಾ ಅಂಗಡಿಗಳು ಮುಚ್ಚಿಕೊಂಡಿದ್ದು, ಬಸ್ ಓಡಾಟ ಸಂಪೂರ್ಣ ಸ್ಥಗಿತಗೊಂಡಿದೆ.

ಸಾಂಕೇತಿಕ ಪ್ರತಿಭಟನೆ:

ಕಾಂಗ್ರೆಸ್ ಕಾರ್ಯಕರ್ತರು ಮುಡಿಪು ಜಂಕ್ಷನ್‌ನಲ್ಲಿ ಒಟ್ಟು ಸೇರಿ ಸಾಂಕೇತಿಕ ಪ್ರತಿಭಟನೆ ನಡೆಸಿದರು.

ಈ ಸಂದರ್ಭ ಮಾತನಾಡಿದ ಬಂಟ್ವಾಳ ತಾಲೂಕು ಪಂಚಾಯತ್ ಅಧ್ಯಕ್ಷ ಚಂದ್ರಹಾಸ್ ಕರ್ಕೇರ, ಕೇಂದ್ರ ಸರಕಾರವು ತೈಲ ಬೆಲೆಯಲ್ಲಿ ಗಣನೀಯವಾಗಿ ಏರಿಕೆ ಮಾಡಿರುವುದರಿಂದ ಜನಸಾಮಾನ್ಯರು ಬದುಕು ಸಾಗಿಸಲು ಕಷ್ಟವಾಗಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ನೇತೃತ್ವದಲ್ಲಿ ದೇಶಾದ್ಯಂತ ನಡೆಯುತ್ತಿರುವ ಭಾರತ ಬಂದ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದರು.

ಮುಡಿಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ್ ಕಾಜವ ಮಾತನಾಡಿ, ತೈಲ ಬೆಲೆ ಏರಿಕೆಯೊಂದಿಗೆ ಕೇಂದ್ರ ಸರಕಾರವು ಗಾಯದ ಮೇಲೆ ಬರೆ ಎಳೆಯುವಂತಹ ಕೆಲಸ ಮಾಡಿದೆ. ಇದರಿಂದಾಗಿ ಬಡವರು, ಜನಸಾಮನ್ಯರು ಜೀವನ ಸಾಗಿಸುವುದೇ ಕಷ್ಟಕರವಾಗಿದೆ. ಕೂಡಲೇ ಕೇಂದ್ರ ಸರಕಾರ ತೈಲ ಬೆಲೆಯನ್ನು ಇಳಿಸಬೇಕು ಎಂದು ಒತ್ತಾಯಿಸಿದರು.

ಮುಡಿಪು ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಅಬ್ದುಲ್ ಜಲೀಲ್ ಮೋಂಟುಗೋಳಿ ಮಾತನಾಡಿ, ದೇಶದಲ್ಲಿ ಜನಸಾಮಾನ್ಯರು ಬಹಳಷ್ಟು ತೊಂದರೆ ಎದರಿಸುತ್ತಿರುವ ಈ ಸಂದರ್ಭದಲ್ಲೇ ಮೋದಿ ನೇತೃತ್ವದ ಕೇಂದ್ರ ಸರಕಾರ ತೈಲ ಬೆಲೆ ಏರಿಸಿರುವುದು ಖಂಡನೀಯ ಎಂದರು.

ಪ್ರತಿಭಟನೆಯಲ್ಲಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ದೇವದಾಸ ಭಂಡಾರಿ, ತಾಲೂಕು ಪಂಚಾಯತ್ ಸದಸ್ಯ ಹೈದರ್ ಕೈರಂಗಳ, ಇರಾ ಗ್ರಾಮ ಪಂಚಾಯತ್ ಅಧ್ಯಕ್ಷ ಅಬ್ದುಲ್ ರಝಾಕ್ ಕುಕ್ಕಾಜೆ, ಕಾಂಗ್ರೆಸ್ ಮುಖಂಡರಾದ ನಾಸಿರ್ ನಡುಪದವು, ಜಗದೀಶ್, ಅರುಣ್ ಡಿಸೋಜ, ನಝೀರ್ ಮೊಯ್ದಿನ್, ಸಮೀರ್ ಪಜೀರು, ಅನಿಲ್ ಕುಮಾರ್, ಸಿ.ಎಂ.ಶರೀಫ್ ಚೆಂಬೆತೋಟ, ಬಾದ್‌ಷಾ ಸಾಂಬಾರ್‌ತೋಟ ಮೊದಲಾದವರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News