ಉಡುಪಿ: ಬಿಜೆಪಿ-ಕಾಂಗ್ರೆಸ್ ಕಾರ್ಯಕರ್ತರ ನಡುವೆ ಜಟಾಪಟಿ; ಪರಿಸ್ಥಿತಿ ನಿಯಂತ್ರಣಕ್ಕೆ ಲಾಠಿಚಾರ್ಜ್

Update: 2018-09-10 08:18 GMT

ಉಡುಪಿ, ಸೆ.10: ಬನ್ನಂಜೆಯಲ್ಲಿರುವ ಉಡುಪಿ ಜಿಲ್ಲಾ ಎಸ್ಪಿ ಕಚೇರಿಯ ಬಳಿ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಜಟಾಪಟಿ ನಡೆದಿದ್ದು, ಪರಿಸ್ಥಿತಿ ತಿಳಿಗೊಳಿಸಲು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ್ ನಿಂಬರಗಿ ನೇತೃತ್ವದಲ್ಲಿ ಲಾಠಿಚಾರ್ಜ್ ನಡೆಸಲಾಗಿದೆ.

ಬನ್ನಂಜೆಯಲ್ಲಿ ಬಂದ್ ಬೆಂಬಲಿಸಿ ಅಂಗಡಿಗಳನ್ನು ಮುಚ್ಚುವಂತೆ ಕಾಂಗ್ರೆಸ್ ಕಾರ್ಯಕರ್ತರು ಒತ್ತಾಯಿಸುತ್ತಿದ್ದರು. ಇದನ್ನು ವಿರೋಧಿಸಿ ಬಿಜೆಪಿ ಕಾರ್ಯಕರ್ತರು ಅಂಗಡಿಗಳನ್ನು ಮುಚ್ಚದಂತೆ ಒತ್ತಾಯಿಸುತ್ತಿದ್ದರು. ಎರಡು ಪಕ್ಷಗಳ ಕಾರ್ಯಕರ್ತರು ಪರಸ್ಪರ ಘೋಷಣೆಗಳನ್ನು ಕೂಗಿದರು. ಬಳಿಕ ವಾಗ್ವಾದ ನಡೆದು ಪರಸ್ಪರ ಜಟಾಪಟಿ ನಡೆಯಿತು. ಈ ನಡುವೆ ಬಿಜೆಪಿ ನಗರಾಧ್ಯಕ್ಷ, ಉಡುಪಿ ನಗರಸಭಾ ಸದಸ್ಯ ಪ್ರಭಾಕರ ಪೂಜಾರಿ ಕಲ್ಲು ತೂರಾಟ ನಡೆದಿದೆ. ಇದರಿಂದ ಪರಿಸ್ಥಿತಿ ಉದ್ವಿಗ್ನಕ್ಕೆ ತಿರುಗಿತು.

ಈ ಸಂದರ್ಭ ಸ್ಥಳಕ್ಕಾಗಮಿಸಿದ ಉಡುಪಿ ಎಸ್ಪಿ ಲಕ್ಷ್ಮಣ್ ನಿಂಬರಗಿ ಪರಿಸ್ಥಿತಿಯನ್ನು ನಿಯಂತ್ರಿಸಲು ಯತ್ನಿಸಿದರು. ಆದರೆ ಎರಡೂ ಗುಂಪುಗಳು ವಾಗ್ವಾದವನ್ನು ಮುಂದುವರಿಸಿದ್ದರಿಂದ ಎಸ್ಪಿಯವರೇ ಖುದ್ದು ಲಾಠಿ ಬೀಸಿದರು. ಲಘು ಲಾಠಿಚಾರ್ಜ್ ನಡೆಸಿ ಪರಿಸ್ಥಿತಿಯನ್ನು ನಿಯಂತ್ರಿಸಿದರು. ಈ ಸಂದರ್ಭ ಕಾಂಗ್ರೆಸ್ ಮುಖಂಡ, ನಗರಸಭಾ ಸದಸ್ಯ ರಮೇಶ್ ಕಾಂಚನ್ ಅವರ ಕೈಗೆ ಗಾಯಗಳಾಗಿವೆ.

ಕಲ್ಲೆಸೆತದಿಂದ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ಪ್ರಭಾಕರ ಪೂಜಾರಿಯವರನ್ನು ಶಾಸಕ ರಘುಪತಿ ಭಟ್, ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷ ರತ್ನಾಕರ ಮಟ್ಟಾರು ಭೇಟಿಯಾಗಿ ಯೋಗಕ್ಷೇಮ ವಿಚಾರಿಸಿದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News