ಪುತ್ತೂರಿನಲ್ಲಿ ಬಂದ್‌ಗೆ ಉತ್ತಮ ಬೆಂಬಲ

Update: 2018-09-10 06:56 GMT

ಪುತ್ತೂರು, ಸೆ.10: ಭಾರತ್ ಬಂದ್‌ಗೆ ಪುತ್ತೂರಿನಲ್ಲಿ ಉತ್ತಮ ಬೆಂಬಲ ವ್ಯಕ್ತವಾಗಿದ್ದು, ನಗರದಲ್ಲಿ ಬೆರಳೆಣಿಕೆಯ ಅಂಗಡಿಗಳು ತೆರದಿದ್ದು, ಬಹುತೇಕ ಅಂಗಡಿ ಮುಂಗಟ್ಟುಗಳು ಮುಚ್ಚಿ ಬಂದ್‌ಗೆ ಬೆಂಬಲ ಸೂಚಿಸಿವೆ.

ಬೆಳಗ್ಗಿನಿಂದಲೇ ಸರ್ಕಾರಿ ಹಾಗೂ ಖಾಸಗಿ ಬಸ್ಸುಗಳು, ಕಾರುಗಳು ಹಾಗೂ ಇನ್ನಿತರ ವಾಹನಗಳು ರಸ್ತೆಗಿಳಿಯಲಿಲ್ಲ. ಶಾಲಾ-ಕಾಲೇಜುಗಳಿಗೆ ಮೊದಲೇ ರಜೆ ಸಾರಲಾಗಿತ್ತು. ದ್ವಿಚಕ್ರ ವಾಹನಗಳು ಹಾಗೂ ಕೆಲವೊಂದು ರಿಕ್ಷಾಗಳು ಮಾತ್ರ ಓಡಾಟ ನಡೆಸುತ್ತಿವೆ. ನಗರದಾದ್ಯಂತ ಬಿಗು ಪೊಲೀಸ್ ಬಂದೋಬಸ್ತು ಮಾಡಲಾಗಿತ್ತು.

ಕಾಂಗ್ರೆಸ್-ಜೆಡಿಎಸ್ ಮೆರವಣಿಗೆ: ಪೊಲೀಸರೊಂದಿಗೆ ಮಾತಿನ ಚಕಮಕಿ

ನಗರದ ದರ್ಬೆಯಿಂದ ಬೊಳುವಾರು ತನಕ ಕಾಂಗ್ರೆಸ್ ಮತ್ತು ಜೆಡಿಎಸ್ ಕಾರ್ಯಕರ್ತರು ಮೆರವಣಿಗೆ ನಡೆಸಿದರು. ಈ ಸಂದರ್ಭನ ತೆರೆದಿಟ್ಟಿದ್ದ ಕೆಲವೊಂದು ಅಂಗಡಿಗಳನ್ನು ಮುಚ್ಚುವಂತೆ ಮೆರವಣಿಗೆಯಲ್ಲಿ ಭಾಗವಹಿಸಿದವರು ಮನವಿ ಮಾಡುತ್ತಿದ್ದರು. ಇದನ್ನು ಪೊಲೀಸರು ತಡೆದರು. ಈ ವೇಳೆ ಪ್ರತಿಭಟನಾಕಾರರು ಮತ್ತು ಪೊಲೀಸರ ಮಧ್ಯೆ ಮಾತಿನ ಚಕಮಕಿಯೂ ನಡೆಯಿತು.

ಪುತ್ತೂರು ಬಸ್ಸು ನಿಲ್ದಾಣದ ಬಳಿಯ ತನಕ ಮೆರವಣಿಗೆ ಬಂದ ಬಳಿಕ ಪೊಲೀಸರು ಅಂಗಡಿ ಮುಚ್ಚಲು ಆಗ್ರಹಿಸದಂತೆ ಕಟ್ಟು ನಿಟ್ಟಿನ ತಾಕೀತು ಮಾಡಿದರು. ಬಳಿಕ ಮೆರವಣಿಗೆ ಮುಂದಕ್ಕೆ ಸಾಗಿತು. ಮೆರವಣಿಗೆಯಲ್ಲಿ ಕೇಂದ್ರ ಸರ್ಕಾರದ ವಿರುದ್ದ ಘೋಷಣೆಗಳನ್ನು ಕೂಗಲಾಯಿತು.

ಪುತ್ತೂರಿನಲ್ಲಿಂದು ವಾರದ ಸಂತೆಯ ದಿನವಾಗಿದೆ. ಆದರೆ ಸಂತೆಗೆ ಗ್ರಾಹಕರ ಸಂಖ್ಯೆ ವಿರಳವಾಗಿತ್ತು. ಗ್ರಾಹಕರಿಲ್ಲದೆ ಸಂತೆಯೂ ಬಿಕೋ ಅನ್ನುತ್ತಿತ್ತು. ತರಕಾರಿಗಳನ್ನು ಹರಡಿಕೊಂಡು ವ್ಯಾಪಾರಿಗಳು ಗ್ರಾಹಕರಿಗಾಗಿ ಕಾಯುವ ಪರಿಸ್ಥಿತಿ ನಿರ್ಮಾಣಗೊಂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News