ಸೆ.13-15: ಬಂಟ್ಸ್ ಹಾಸ್ಟೆಲ್ ಬಳಿ ಸಾರ್ವಜನಿಕ ಗಣೇಶೋತ್ಸವ

Update: 2018-09-10 08:17 GMT

ಮಂಗಳೂರು, ಸೆ.10: ನಗರದ ಬಂಟ್ಸ್ ಹಾಸ್ಟೆಲ್‌ನ ಓಂಕಾರ ನಗರದ ಶ್ರೀ ಸಿದ್ದಿ ವಿನಾಯಕ ಪ್ರತಿಷ್ಠಾನ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ವತಿಯಿಂದ 15ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವವು ಸೆ.13ರಿಂದ 15ರವರೆಗೆ ಬಂಟ್ಸ್ ಹಾಸ್ಟೆಲ್‌ನ ಓಂಕಾರ ನಗರದಲ್ಲಿ ನಡೆಯಲಿದೆ ಎಂದು ಪ್ರತಿಷ್ಠಾನದ ಆಡಳಿತ ಟ್ರಸ್ಟಿ ಮಾಲಾಡಿ ಅಜಿತ್ ಕುಮಾರ್ ರೈ ಸುದ್ದಿಗೊಷ್ಠಿಯಲ್ಲಿಂದು ತಿಳಿಸಿದ್ದಾರೆ.

ಸೆ.12ರಂದು ಶ್ರೀ ರಾಧಾಕೃಷ್ಣ ದೇವಸ್ಥಾನದಿಂದ ಸಿದ್ಧಿ ವಿನಾಯಕ ದೇವರ ವಿಗ್ರಹವನ್ನು ಬಂಟ್ಸ್ ಹಾಸ್ಟೆಲ್‌ನ ಓಂಕಾರ ನಗರಕ್ಕೆ ಬರಮಾಡಿಕೊಳ್ಳಲಾಗುವುದು.ಸೆ.13ರಂದು ಬಿಗ್ರೇಡಿಯರ್ ಅಡಪ ಮತ್ತು ಸೋನಿಯಾ ವಿ. ಅಡಪರಿಂದ ಧ್ವಜಾರೋಹಣ ನಡೆಯಲಿದೆ. ಬಳಿಕ ಮೂರ್ತಿ ಪ್ರತಿಷ್ಠೆ,ಗಣಹೋಮ, ತೆನೆಹಬ್ಬ, ಗಣೇಶೋತ್ಸವ ಕಾರ್ಯಕ್ರಮಗಳ ಉದ್ಘಾಟನೆ ನೆರವೇರಲಿದೆ. ಮಧ್ಯಾಹ್ನ ಬಂಟ ಯುವಕ ಯುವತಿಯರಿಂದ ಸಮಕಾಲೀನ ನೃತ್ಯ ಸ್ಪರ್ಧೆ ನಡೆಯಲಿದೆ. ಸಂಜೆ 5 ಗಂಟೆಗೆ ಧಾರ್ಮಿಕ ಸಭೆ ಜರುಗಲಿದ್ದು ಸನ್ಮಾನ ಕಾರ್ಯಕ್ರಮ ನೆರವೇರಲಿದೆ. ರಾತ್ರಿ 8ಕ್ಕೆ ಪಟ್ಲ ಸತೀಶ್ ಶೆಟ್ಟಿ ಮತ್ತು ಬಳಗದವರಿಂದ ನಾಟ್ಯ ವೈಭವ ಜರುಗಲಿದೆ.

 ಸೆ.14ರಂದು ಬೆಳಗ್ಗೆ 10 ಗಂಟೆಗೆ ಭಜನಾ ನೃತ್ಯ ಸ್ಪರ್ಧೆ ನಡೆಯಲಿದೆ. ಸಂಜೆ 5ಕ್ಕೆ ಧಾರ್ಮಿಕ ಸಭೆ, ಸನ್ಮಾನ ಕಾರ್ಯಕ್ರಮ ಜರುಗಲಿದೆ. ರಾತ್ರಿ ಗಂಟೆ 8ಕ್ಕೆ ಪುತ್ತೂರು ನರಸಿಂಹ ನಾಯಕ್ ಮತ್ತು ರಾಯಚೂರು ಶೇಷಗಿರಿ ದಾಸ್ ಬಳಗದವರಿಂದ ಭಕ್ತಿಗಾನ ವೈಭವ ನಡೆಯಲಿದೆ.ಸೆ.15ರಂದು ಅಷ್ಟೋತ್ತರ ಸಹಸ್ರ ನಾರಿಕೇಳ ಮಹಾಗಣ ಯಾಗ, ಭಜನೆ, ಮಹಾ ಅನ್ನ ಸಂತರ್ಪಣೆ ನಡೆಯಲಿದೆ. ಅಪರಾಹ್ನ 3:30ಕ್ಕೆ ಶೋಭಾಯಾತ್ರೆ ಜರುಗಲಿದೆ. ಕಾರ್ಯಕ್ರಮದ ಅಂಗವಾಗಿ ಸೆ.12ರಂದು ಸಂಜೆ 4ರಿಂದ ರಾಮಕೃಷ್ಣ ವಿದ್ಯಾಸಂಸ್ಥೆಯ ಆವರಣದಲ್ಲಿ ಸಾರ್ವಜನಿಕವಾಗಿ ಮಕ್ಕಳ ಚಿತ್ರಕಲಾ ಸ್ಪರ್ಧೆ ಜರುಗಲಿದೆ ಅಜಿತ್ ಕುಮಾರ್ ರೈ ಮಾಲಾಡಿ ಹೇಳಿದರು

 *ಸರಳ ಉತ್ಸವ ಆಚರಣೆ:
ಕೊಡಗಿನಲ್ಲಿ ಇತ್ತೀಚೆಗೆ ಪಾಕೃತಿಕ ದುರಂತ ಸಂಭವಿಸಿದ ಹಿನ್ನೆಲೆಯಲ್ಲಿ ಹಾಗೂ ಸಂತ್ರಸ್ತರಿಗೆ ನೆರವು ನೀಡುವ ದೃಷ್ಟಿಯಿಂದ ಈ ಬಾರಿಯ ಗಣೇಶೋತ್ಸವವನ್ನು ಸರಳವಾಗಿ ಆಚರಿಸಲು ನಿರ್ಧರಿಸಲಾಗಿದೆ ಎಂದು ಅಜಿತ್ ಕುಮಾರ್ ರೈ ಮಾಲಾಡಿ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಚಂದ್ರಹಾಸ ರೈ ಡಿ. ಶೆಟ್ಟಿ, ಡಾ.ಆಶಾಜ್ಯೋತಿ ರೈ, ರವಿರಾಜ ಶೆಟ್ಟಿ ನಿಟ್ಟೆ ಗುತ್ತು, ಸುರೇಶ್ ರೈ, ಉಮೇಶ್ ರೈ, ವಸಂತ ಶೆಟ್ಟಿ, ಜಯಲಕ್ಷ್ಮೀ ಶೆಟ್ಟಿ, ಸುದೇಶ್ ಶೆಟ್ಟಿ ಕೊಡಿಯಾಲಬೈಲ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News