ಸೆ.15ರಂದು ಮಂಗಳೂರಿನ ನೂತನ ಬಿಷಪ್‌ರ ಪಟ್ಟಾಭಿಷೇಕ

Update: 2018-09-10 11:12 GMT

ಮಂಗಳೂರು, ಸೆ.10: ಅತೀ ವಂದನೀಯ ರೆ.ಡಾ.ಪೀಟರ್ ಪೌಲ್ ಸಲ್ಡಾನಾರನ್ನು ಮಂಗಳೂರು ಕ್ರೈಸ್ತ ಧರ್ಮಪ್ರಾಂತದ ನೂತನ ಬಿಷಪ್ ಆಗಿ ನಿಯೋಜಿಸುವ ಸಮಾರಂಭ ಸೆ. 15ರಂದು ನಗರದ ರೊಸಾರಿಯೊ ಕೆಥಡ್ರಲ್‌ನಲ್ಲಿ ಬೆಳಗ್ಗೆ 9:30ಕ್ಕೆ ನಡೆಯಲಿದೆ ಎಂದು ಹಾಲಿ ಬಿಷಪ್ ರೆ.ಡಾ. ಅಲೋಶಿಯಸ್ ಪಾವ್ಲ್ ಡಿಸೋಜ ತಿಳಿಸಿದರು.

ಬಿಷಪ್ ಹೌಸ್‌ನಲ್ಲಿ ಸುದ್ದಿಗೋಷ್ಠಿಯಲ್ಲಿಂದು ಈ ವಿಷಯ ತಿಳಿಸಿದ ಅವರು, ರೆ.ಡಾ.ಪೀಟರ್ ಪೌಲ್ ಸಲ್ಡಾನಾ ಮಂಗಳೂರು ಧರ್ಮಪ್ರಾಂತದ 14ನೆ ಬಿಷಪ್ ಆಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂದರು.

ಬೆಂಗಳೂರಿನ ಮಹಾ ಧರ್ಮಾಧ್ಯಕ್ಷ ಅತಿ ವಂದನೀಯ ಡಾ.ಪೀಟರ್ ಮಚಾದೊ ಮತ್ತು ಉಡುಪಿಯ ಧರ್ಮಾಧ್ಯಕ್ಷ ಅತಿ ವಂ. ಡಾ.ಜೆರಾಲ್ಡ್ ಐಸಾಕ್ ಲೋಬೋ ಹಾಗೂ ತಾನು ಸೇರಿ ನೂತನ ಬಿಷಪ್‌ರನ್ನು ಅಭಿಷೇಕಿಸುವ ಮೂಲಕ ವಿಧಿಬದ್ಧವಾಗಿ ನಿಯೋಜನೆ ನೆರವೇರಲಿದೆ ಎಂದವರು ಹೇಳಿದರು.

ಧಾರ್ಮಿಕ ಕಾರ್ಯಕ್ರಮಗಳ ಬಳಿಕ ನೂತನ ಧರ್ಮಾಧ್ಯಕ್ಷರನ್ನು ಅಭಿನಂದಿಸುವ ಸಮಾರಂಭ ನಡೆಯಲಿದೆ. ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ನೂತನ ಬಿಷಪ್‌ರನ್ನು ಸನ್ಮಾನಿಸುವರು. ಸಮಾರಂಭದಲ್ಲಿ ಭಾರತಕ್ಕೆ ಪೋಪ್ ಫ್ರಾನ್ಸಿಸ್‌ರ ಪ್ರತಿನಿಧಿ (ನುನ್ಸಿಯೊ)ರವರ ಕೌನ್ಸಿಲರ್ ಅತಿ ವಂ, ಹಾವಿಯರ್ ಡಿ. ಫೆರ್ನಾಂಡಿಸ್ ಜಿ., ಮಹಾ ಧರ್ಮಾಧ್ಯಕ್ಷರು, ಧರ್ಮಾಧ್ಯಕ್ಷರು, ಧರ್ಮಗುರುಗಳು, ಧಾರ್ಮಿಕ ಹಾಗೂ ರಾಜಕೀಯ ಮುಖಂಡರು, ಮಂಗಳೂರು ಧರ್ಮಪ್ರಾಂತದ ಕೆಥೊಲಿಕ್ ಬಾಂಧವರು ಸೇರಿ 10,000ಕ್ಕೂ ಅಧಿಕ ಮಂದಿ ಭಾಗವಹಿಸುವರು ಎಂದು ಅವರು ತಿಳಿಸಿದರು.

ಡಾ.ಅಲೋಶಿಯ್ ಪೌಲ್ ಡಿಸೋಜ 1996ರಿಂದ 2018ರವರೆಗೆ 22 ವರ್ಷಗಳ ಸುದೀರ್ಘ ಸೇವೆಯನ್ನು ಮಾಡಿ ನಿವೃತ್ತರಾಗುತ್ತಿದ್ದು, ಪೋಪ್ ಫ್ರಾನ್ಸಿಸ್‌ರವರು ಅತಿ ವಂ. ಡಾ.ಪೀಟರ್ ಪೌಲ್ ಸಲ್ಡಾನಾರನ್ನು ಜುಲೈ 3ರಂದು ನೂತನ ಧರ್ಮಾಧ್ಯಕ್ಷರಾಗಿ ನೇಮಕ ಮಾಡಿದ್ದಾರೆ ಎಂದು ಕಾರ್ಯಕ್ರಮದ ಸಹ ಸಂಯೋಜಕ ಎಂ.ಪಿ. ನೊರೊನ್ಹ ತಿಳಿಸಿದರು.

ಸರಳ ಸಮಾರಂಭ: ಸರಳ ಊಟ

ಕೇರಳ ಹಾಗೂ ಕೊಡಗಿನಲ್ಲಿ ಸಂಭವಿಸಿರುವ ಜಲ ಪ್ರಳಯದ ಹಿನ್ನೆಲೆಯಲ್ಲಿ ಬಿಷಪ್ ನಿಯೋಜನೆಯ ಸಮಾರಂಭಕ್ಕೆ ಕೆಲವರಿಂದ ಆಕ್ಷೇಪ ವ್ಯಕ್ತವಾಗಿದೆ. ಜನರು ಸಂಕಷ್ಟದಲ್ಲಿರುವಾಗ ಸಾವಿರಾರು ಮಂದಿಗೆ ಊಟದ ವ್ಯವಸ್ಥೆ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಆದರೆ ಈ ಸರಳ ಸಮಾರಂಭದಲ್ಲಿ ಸಾವಿರಾರು ಮಂದಿ ಕರ್ನಾಟಕದ ವಿವಿಧ ಮೂಲಗಳಿಂದ ದೇಶ ವಿದೇಶಗಳಿಂದ ಬರುವುದರಿಂದ ಬಂದವರಿಗೆ ಊಟದ ವ್ಯವಸ್ಥೆ ಮಾಡಬೇಕಾಗುತ್ತದೆ. ಹಾಗಾಗಿ ಸರಳ ರೀತಿಯಲ್ಲಿ ಊಟದ ವ್ಯವಸ್ಥೆಯನ್ನು ಮಾಡಲಾಗುತ್ತಿದೆ.

ಜಲ ಪ್ರವಾಹಕ್ಕೆ ಸಂಬಂಧಿಸಿ ಮಂಗಳೂರು ಕ್ರೈಸ್ತ ಧರ್ಮಪ್ರಾಂತವು ಈಗಾಗಲೇ ಕೇರಳ ಹಾಗೂ ಕೊಡಗು ಜಿಲ್ಲೆಗಳಿಗೆ ಸುಮಾರು 1.5 ಕೋಟಿ ರೂ.ಗಳಿಗೂ ಅಧಿಕ ವೌಲ್ಯದ ಸೊತ್ತುಗಳನ್ನು ರವಾನಿಸಿದೆ. ಇದೇ ವೇಳೆ ಧರ್ಮಪ್ರಾಂತದಿಂದ ದೇಣಿಗೆ ಸಂಗ್ರಹವೂ ನಡೆಯುತ್ತಿದ್ದು, 65 ಲಕ್ಷ ರೂ.ಗಳಷ್ಟು ಸಂಗ್ರಹವಾಗಿದೆ. ಇದನ್ನು ಕೂಡಾ ಸಂತ್ರಸ್ತರಿಗೆ ಒದಗಿಸುವ ಕಾರ್ಯ ನಡೆಯಲಿದೆ ಎಂದು ಹಾಲಿ ಬಿಷಪ್ ಅತಿ ವಂ. ರೆ.ಡಾ.ಅಲೋಶಿಯಸ್ ಪೌಲ್ ಡಿಸೋಜ ಸ್ಪಷ್ಟಪಡಿಸಿದರು.


ಮಂಗಳೂರು ಕ್ರೈಸ್ತ ಧರ್ಮಪ್ರಾಂತದ ಬಗ್ಗೆ
ಮಂಗಳೂರು ಕ್ರೈಸ್ತ ಧರ್ಮಪ್ರಾಂತವು ಭೌಗೋಳಿಕವಾಗಿ ದ.ಕ ಹಾಗೂ ಕಾಸರಗೋಡು ಜಿಲ್ಲೆಗಳಿಗೆ ವಿಸ್ತರಿಸಿದೆ. ಸುಮಾರು 5,924 ಚದರ ಕಿಲೋ ಮೀಟರ್‌ನ ಈ ಧರ್ಮಪ್ರಾಂತದಲ್ಲಿ 2.5 ಲಕ್ಷ ಕ್ರೈಸ್ತ ಧರ್ಮದವರಿದ್ದಾರೆ. 124 ಧರ್ಮ ಕೇಂದ್ರಗಳು, 11 ಉಪ ಧರ್ಮ ಕೇಂದ್ರಗಳು, 272 ಮಂಗಳೂರು ಧರ್ಮಪ್ರಾಂತದ ಧರ್ಮಗುರುಗಳು, 102 ಇತರ ಧರ್ಮಗುರುಗಳು ಹಾಗೂ 1,246 ಮಂದಿ ಧರ್ಮ ಭಗಿನಿಯರು ಕಾರ್ಯನಿರ್ವಹಿಸುತ್ತಿದ್ದಾರೆ.


ನೂತನ ಬಿಷಪ್ ಅ.ವಂ. ಡಾ.ಪೀಟರ್ ಪೌಲ್ ಸಲ್ಡಾನಾ

ನೂತನ ಬಿಷಪ್ ಅ.ವಂ. ಡಾ.ಪೀಟರ್ ಪೌಲ್ ಸಲ್ಡಾನಾ ಕಿನ್ನಿಗೋಳಿ ಸಮೀಪದ ಕಿರೆಮ್‌ನವರು. ಹುಟ್ಟೂರಿನಲ್ಲಿ ಪ್ರಾಥಮಿಕ ಶಿಕ್ಷಣದ ಬಳಿಕ ಮಂಗಳೂರಿನ ಜೆಪ್ಪುವಿನಲ್ಲಿರುವ ಸಂತ ಜೋಸೆಫ್ ಸೆಮಿನರಿಯಲ್ಲಿ ಧರ್ಮಗುರು ತರಬೇತಿ ಪಡೆದರು. ತಮ್ಮ ಫಿಲಾಸಫಿ ಮತ್ತು ಥಿಯಾಲಜಿ ಶಿಕ್ಷಣ ಪೂರೈಸಿ, 1991ರ ಮೇ 6ರಂದು ಮಂಗಳೂರು ಧರ್ಮಪ್ರಾಂತದ ಧರ್ಮಗುರುವಾಗಿ ದೀಕ್ಷೆ ಪಡೆದರು.

ಉಡುಪಿ ಧರ್ಮಪ್ರಾಂತದಲ್ಲಿರುವ ಮೂಡುಬೆಳ್ಳೆ ಸಂತ ಲಾರೆನ್ಸ್ ಚರ್ಚ್, ಮಂಗಳೂರು ಮಿಲಾಗ್ರಿಸ್ ಚರ್ಚ್ ಮತ್ತು ವಿಟ್ಲದ ಶೋಕಮಾತೆ ಚರ್ಚ್‌ಗಳಲ್ಲಿ ಸಹಾಯಕ ಧರ್ಮಗುರುವಾಗಿ ಸೇವೆ ಸಲ್ಲಿಸಿದ ಇವರು, 1996ರಲ್ಲಿ ಮಂಗಳೂರು ಜೆಪ್ಪು ಸಂತ ಜೋಸೆಫ್ ಸೆಮಿನರಿಯಲ್ಲಿ ಪ್ರಾಧ್ಯಾಪಕರಾಗಿ ನೇಮಕಗೊಂಡರು. ಬಳಿಕ ಥಿಯಾಲಜಿಯಲ್ಲಿ ಉನ್ನತ ಅಧ್ಯಯನಕ್ಕಾಗಿ ರೋಮ್‌ಗೆ ತೆರಳಿದರು.

ಡೋಗ್ಮಾಟಿಕ್ ಥಿಯಾಲಜಿಯಲ್ಲಿ ಡಾಕ್ಟರೇಟ್ ಪದವಿ ಪಡೆದ ಅವರು 2010ರಿಂದ ರೋಮ್‌ನ ಉರ್ಬೇನಿಯಾನಾ ವಿಶ್ವವಿದ್ಯಾನಿಲಯದಲ್ಲಿ ಡೋಗ್ಮಾಟಿಕ್ ಥಿಯಾಲಜಿ ಪ್ರೊಫೆಸರ್ ಆಗಿ ಕಾರ್ಯ ನಿರ್ವಹಿಸಿದ್ದಾರೆ.

ಗೋಷ್ಠಿಯಲ್ಲಿ ಮುಖ್ಯ ಸಂಯೋಜಕ ರೆ.ಫಾ. ಜೆ.ಬಿ. ಕ್ರಾಸ್ತಾ, ಮಾಧ್ಯಮ ಸಲಹೆಗಾರ ಮಾರ್ಸೆಲ್ ಮೊಂತೆರೊ, ರೆ.ಫಾ. ವಿಜಯ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News