ನಕಾರಾತ್ಮಕ ಚಿಂತನೆಯಿಂದ ದೂರವಿರಿ: ಡಾ. ಅನೂಪ್ ಪೂಜಾರಿ

Update: 2018-09-10 11:41 GMT

ಕೊಣಾಜೆ, ಸೆ. 10:  ಸಕಾರಾತ್ಮಕ ಚಿಂತನೆಯು ನಮ್ಮ ಯಶಸ್ವೀ ಜೀವನಕ್ಕೆ ದಾರಿದೀಪವಾಗುತ್ತದೆ. ಆದ್ದರಿಂದ ಪ್ರತಿಯೊಬ್ಬರೂ  ನಕರಾತ್ಮಕ ಚಿಂತನೆಯಿಂದ ದೂರವಿದ್ದು ಉತ್ತಮ ಮನೋಭಾವವನ್ನು ಬೆಳೆಸಿಕೊಳ್ಳಲು ಪ್ರಯತ್ನಿಸಬೇಕು ಎಂದು ಹಾರ್ವರ್ಡ್ ವಿಶ್ವವಿದ್ಯಾಲಯದ ಸಂದರ್ಶಕ ಪ್ರಾಧ್ಯಾಪಕ ಹಾಗೂ ಭಾರತ ಸರಕಾರದ ಮಾಜಿ ಕಾರ್ಯದರ್ಶಿ ಡಾ. ಅನೂಪ್ ಕೆ. ಪೂಜಾರಿ ಅವರು ಅಭಿಪ್ರಾಯಪಟ್ಟರು. 

ಅವರು ಸೋಮವಾರ ಮಂಗಳೂರು ವಿವಿ ಮಂಗಳಾ ಸಭಾಂಗಣದಲ್ಲಿ ಮಂಗಳೂರು ವಿಶ್ವವಿದ್ಯಾಲಯದ 39ನೇ ಸಂಸ್ಥಾಪನಾ ದಿನ ಹಾಗೂ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಸಂಸ್ಥಾಪನಾ ದಿನದ ವಿಶೇಷ ಉಪನ್ಯಾಸವನ್ನು ನೆರವೇರಿಸಿ ಮಾತನಾಡಿದರು.

ಇಂದಿನ ಆಧುನಿಕತೆಯಲ್ಲಿ ನಮಗೆ ಉತ್ತಮ ಮಾಹಿತಿ ತಂತ್ರಜ್ಞಾನಗಳು ದೊರಕುತ್ತಿದ್ದು ಇದರ ಸದುಪಯೋಗ ಪಡಿಸುವ ಕೌಶಲ ನಮ್ಮದಾಗಬೇಕು. ಉದ್ದೇಶಿಯ ಗುರಿಯಿಟ್ಟುಕೊಂಡು ಉತ್ತಮ ಚಿಂತನೆಯೊಂದಿಗೆ ಮುನ್ನಡೆದರೆ ನಮ್ಮಲ್ಲಿರುವ ನಕಾರಾತ್ಮಕ ಚಿಂತನೆಗಳು ಖಂಡಿತವಾಗಿಯೂ ದೂರವಾಗುತ್ತದೆ ಎಂದು ಹೇಳಿದರು.

ಶಿಕ್ಷಕರ ದಿನಾಚರಣೆಯ ಸಂದೇಶವನ್ನು ನೀಡಿದ ಮೈಸೂರು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ.ಎಸ್.ಎನ್.ಹೆಗ್ಡೆ ಅವರು, ಜಗತ್ತಿನಲ್ಲಿ ಶಿಕ್ಷಕ ವೃತ್ತಿ ಅತಿ ಶ್ರೇಷ್ಠವಾದುದು. ಶಿಕ್ಷಕ ವೃತ್ತಿಯು ಹಲವಾರು ವೃತ್ತಿಗಳನ್ನು ಸೃಷ್ಟಿಸುವ ಶಕ್ತಿ ಹೊಂದಿರುವ ವೃತ್ತಿಯಾಗಿದೆ. ಉತ್ತಮ ಶಿಕ್ಷಕ ಜೀವನವಿಡೀ ತಮ್ಮ ಕಲಿಕೆಯ ಮನೋಭಾವವನ್ನು ಹಾಗೂ ಸೃಜನಶೀಲತೆಯುಳ್ಳವರಾಗಿರಬೇಕು ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಕಲ್ಲಿಕೋಟೆ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ.ಎಂ.ಅಬ್ದುಲ್ ರಹಿಮಾನ್, ಮೈಸೂರು ವಿವಿ ವಿಶ್ರಾಂತ ಕುಲಪತಿ ಪ್ರೊ.ಎಸ್.ಎನ್.ಹೆಗ್ಡೆ  ಹಾಗೂ ಬೆಂಗಳೂರು ಕೃಷಿ ವಿಜ್ಞಾನ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ.ಪಿ.ಜಿ.ಚೆಂಗಪ್ಪ ಅವರನ್ನು ಶಿಕ್ಷಕರ ದಿನಾಚರಣೆಯ ವಿಶೇಷ ಸನ್ಮಾನದೊಂದಿಗೆ ಗೌರವಿಸಲಾಯಿತು.

ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಸಾಧಕ ಗೌರವಾರ್ಪಣೆಯನ್ನು ಖ್ಯಾತ ಚಲನ ಚಿತ್ರ ನಿರ್ದೇಶಕ ರಾಜು ಬಿ.ಶೆಟ್ಟಿ ಹಾಗೂ ಕಾಮನ್‍ವೆಲ್ತ್  ಕ್ರೀಡಾಕೂಟದ ಪದಕ ವಿಜೇತರಾದ ಗುರುರಾಜ್ ಅವರಿಗೆ ನೀಡಿ ಗೌರವಿಸಲಾಯಿತು.

ಶಿಕ್ಷಕರ ದಿನಾಚರಣೆಯ ಅಂಗವಾಗಿ ಮಂಗಳೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಕೆ.ಎಸ್.ಜಯಪ್ಪ ಅವರನ್ನು ಉತ್ತಮ ಶಿಕ್ಷಕ ಪ್ರಶಸ್ತಿಯನ್ನು ನೀಡಿ ನಗದು ಪುರಸ್ಕಾರದೊಂದಿಗೆ ಸನ್ಮಾನಿಸಲಾಯಿತು.

ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಮಂಗಳೂರು ವಿಶ್ವವಿದ್ಯಾನಿಲಯದ ಪ್ರಭಾರ ಕುಲಪತಿ ಡಾ.ಕಿಶೋರ್ ಕುಮಾರ್ ಸಿ.ಕೆ ಅವರು, ಮಂಗಳೂರು ವಿಶ್ವವಿದ್ಯಾನಿಲಯ ಯುವ ವಿಶ್ವವಿದ್ಯಾನಿಲಯವಾಗಿದ್ದು ಇದೀಗ ತನ್ನ ಶೈಕ್ಷಣಿಕ ಸಾಧನೆಯೊಂದಿಗೆ ದೇಶದ ಪ್ರತಿಷ್ಠಿತ ವಿವಿಗಳೊಂದಿಗೆ ಗುರುತಿಸಲ್ಪಟ್ಟಿದೆ. ಮಂಗಳೂರು ವಿಶ್ವವಿದ್ಯಾನಿಲಯದ ಬೆಳವಣಿಗೆಯಲ್ಲಿ ಹಲವು ಹಿರಿಯರ ಪರಿಶ್ರಮವಿದ್ದು ಅವರನ್ನು ಸದಾ ಸ್ಮರಣಿಸಬೇಕಾಗಿದೆ. ವಿಶವಿದ್ಯಾನಿಲಯವು ವಿದ್ಯಾರ್ಥಿಗಳಿಗೆ ಶಿಕ್ಷಣ, ಸಂಶೋಧನೆ, ಸಾಂಸ್ಕೃತಿಕ, ಕ್ರೀಡೆ ಸೇರಿದಂತೆ ಹಲವಾರು ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುವುದರೊಂದಿಗೆ ಮುನ್ನಡೆಯುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ಪ್ರಾಧ್ಯಾಪಕರಾದ ಪ್ರೊ.ವೈ.ನಾರಾಯಣ, ಪ್ರೊ.ಇಸ್ಮಾಯಿಲ್ ಹಾಗೂ ಪ್ರೊ.ಈಶ್ವರ್ ಅವರು ಸನ್ಮಾನ ಪತ್ರವನ್ನು ವಾಚಿಸಿದರು. ಕಾರ್ಯಕ್ರಮದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಕುಲಸಚಿವ ಪ್ರೊ.ಎ.ಎಂ.ಖಾನ್ ಅವರು ಸ್ವಾಗತಿಸಿದರು. ಪ್ರಾಧ್ಯಾಪಕ ಪ್ರೊ.ಟಿ.ಮಲ್ಲಿಕಾರ್ಜುನಪ್ಪ ಅವರು ವಂದಿಸಿದರು. ಪ್ರೊ.ರವಿಶಂಕರ್ ರಾವ್ ಹಾಗೂ ಡಾ.ಧನಂಜಯ ಕುಂಬ್ಳೆ ಅವರು ಕಾರ್ಯಕ್ರಮ ನಿರೂಪಿಸಿದರು. 

ನೀವು ಯಾವುದೇ ಸ್ಥಾನದಲ್ಲಿರಿ  ಹೇಗೇ ಇರಿ ಆದರೆ ನೀವು ನೀವಾಗಿಯೇ ಇರಿ. ನಾವು ನಮ್ಮನ್ನು ಕೀಳಾಗಿ ಕಾಣದೆ ನಮ್ಮನ್ನು ನಾವೇ ಮೊದಲು ಸ್ವೀಕರಿಸುವ ಮನೋಭಾವ ಬೆಳೆಸಿಕೊಳ್ಳಬೇಕು.  

- ರಾಜು ಬಿ.ಶೆಟ್ಟಿ, ಚಲನಚಿತ್ರ ನಿರ್ದೇಶಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News