ಜನಮನ ರಂಜಿಸಿದ ಬ್ಯಾರಿ ಸಾಂಸ್ಕೃತಿಕ ಉತ್ಸವ

Update: 2018-09-10 11:58 GMT

ಮಂಗಳೂರು, ಸೆ. 10: ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ವತಿಯಿಂದ ನೃತ್ಯ, ದಫ್ ಹಾಗೂ ಸಂಗೀತ ಕಾರ್ಯಕ್ರಮಗಳೊಂದಿಗೆ ಬ್ಯಾರಿ ಸಾಂಸ್ಕೃತಿಕ ಉತ್ಸವ ನಗರದ ಫೋರಂ ಫಿಝಾ ಮಾಲ್‍ನಲ್ಲಿ ರವಿವಾರ ನಡೆದಿದ್ದು, ವೈವಿಧ್ಯಮಯ ಕಾರ್ಯಕ್ರಮಗಳ ಮೂಲಕ ಸೇರಿದ್ದ  ಜನರ ಮನ ಗೆಲ್ಲುವಲ್ಲಿ ಯಶಸ್ವಿಯಾಯಿತು.

ದಕ್ಷಿಣ ಕನ್ನಡ ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ಯು.ಕೆ. ಮೋನು ಕಣಚೂರು ಕಾರ್ಯಕ್ರಮ ಉದ್ಘಾಟಿಸಿ, ಶಿಕ್ಷಣ, ಆರೋಗ್ಯ, ಸಮಾಜಸೇವೆ ಸೇರಿದಂತೆ ಎಲ್ಲ ಕ್ಷೇತ್ರದಲ್ಲೂ ಬ್ಯಾರಿ ಸಮುದಾಯ ದಾಪುಗಾಲು ಇಡುತ್ತಿದೆ. ತಾವು ಇತರರಿಗೆ ಕಡಿಮೆ ಇಲ್ಲ ಎಂಬಂತೆ ಬ್ಯಾರಿ ಅಕಾಡೆಮಿ ವೈವಿಧ್ಯಮ ಕಾರ್ಯಕ್ರಮ ಆಯೋಜಿಸುತ್ತಿದ್ದು, ಇದಕ್ಕೆ ಎಲ್ಲರ ಪ್ರೋತ್ಸಾಹದ ಅಗತ್ಯವಿದೆ. ತುಳುವಿರುವಂತೆ ಬ್ಯಾರಿ ಭಾಷೆಯೂ ವ್ಯಾಪಕಗೊಳ್ಳಬೇಕು ಎಂದರು.

ಕಾರ್ಪೊರೇಟರ್ ಅಬ್ದುಲ್ ಲತೀಫ್ ಕಂದಕ್ ಮಾತನಾಡಿ, ಬ್ಯಾರಿ ಭಾಷೆ ಬಗ್ಗೆ ಕೀಳರಿಮೆ ಬಿಟ್ಟು, ನಮ್ಮದು ಎಂಬ ಅಭಿಮಾನ ಬೆಳೆಸಬೇಕು.  ಮಕ್ಕಳು ಶಾಲೆಯಲ್ಲಿ ಕನ್ನಡ, ಇಂಗ್ಲಿಷ್ ಕಲಿಯುತ್ತಿದ್ದರೂ ಮನೆಯಲ್ಲಿ ಬ್ಯಾರಿ ಭಾಷೆಯನ್ನೇ ಮಾತನಾಡಬೇಕು. ಬ್ಯಾರಿ ಕಲೆ, ಸಾಹಿತ್ಯ, ಸಂಸ್ಕೃತಿ ಉಳಿಸಲು ಮಕ್ಕಳಿಗೆ ಪ್ರೇರಣೆ ನೀಡಬೇಕು ಎಂದರು.

ಬ್ಯಾರಿ ಅಕಾಡೆಮಿ ಅಧ್ಯಕ್ಷ ಕರಂಬಾರ್ ಮೊಹಮ್ಮದ್ ಅಧ್ಯಕ್ಷತೆ ವಹಿಸಿದ್ದರು. ಅಕಾಡೆಮಿಯ ತ್ರೈಮಾಸಿಕ ಬಿಲ್ಕಿರಿಯನ್ನು ಸದಸ್ಯ ಅತ್ತೂರು ಚೆಯ್ಯಬ್ಬ ಬಿಡುಗಡೆಗೊಳಿಸಿದರು. 

ಸಾಮಾಜಿಕ ಕಾರ್ಯಕರ್ತ ಅಹ್ಮದ್ ಬಾವ ಬಜಾಲ್, ಕೊಡವ, ಅರೆಭಾಷೆ ಅಕಾಡೆಮಿ ರಿಜಿಸ್ಟ್ರಾರ್ ಉಮರಬ್ಬ, ಬ್ಯಾರಿ ಅಕಾಡೆಮಿ ಸದಸ್ಯರಾದ ಬಶೀರ್ ಬೈಕಂಪಾಡಿ, ಬಶೀರ್ ಅಹ್ಮದ್ ಕಿನ್ಯ, ಅಬ್ದುಲ್ ರಹ್ಮಾನ್ ಕುತ್ತೆತ್ತೂರು, ಪಿ.ಎಂ.ಹಸನಬ್ಬ, ಆಯಿಶಾ ಯು.ಕೆ., ಮರಿಯಂ ಇಸ್ಮಾಈಲ್, ಎಂಎಚ್ ಅಶ್ರಫ್, ಅನ್ಸಾರ್ ಬೆಳ್ಳಾರೆ, ಬಿ.ಎ. ಜಮಾಲುದ್ದೀನ್, ಮುಹಮ್ಮದ್ ಆರಿಫ್, ಮುಹಮ್ಮದ್ ತನ್ಸಿಫ್ ಉಪಸ್ಥಿತರಿದ್ದರು. ಅಕಾಡೆಮಿ ಸದಸ್ಯ ಹುಸೈನ್ ಕಾಟಿಪಳ್ಳ ಸ್ವಾಗತಿಸಿ, ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News