2019ರ ಫೆಬ್ರುವರಿಯಲ್ಲಿ ಧರ್ಮಸ್ಥಳ ಭಗವಾನ್ ಬಾಹುಬಲಿಗೆ ಮಹಾಮಜ್ಜನ: ಡಾ. ವೀರೇಂದ್ರ ಹೆಗ್ಗಡೆ

Update: 2018-09-10 12:02 GMT

ಬೆಳ್ತಂಗಡಿ, ಸೆ. 10: ಲೋಕ ಕಲ್ಯಾಣಾರ್ಥವಾಗಿ 2019ರ ಫೆಬ್ರುವರಿಯಲ್ಲಿ ಧರ್ಮಸ್ಥಳ ಭಗವಾನ್ ಬಾಹುಬಲಿಗೆ ಮಹಾಮಜ್ಜನ ನಡೆಸಲಾಗು ವುದು ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ತಿಳಿಸಿದ್ದಾರೆ.

ಸೋಮವಾರ ಕ್ಷೇತ್ರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಹಾ ಮಸ್ತಕಾಭಿಷೇಕದ ಬಗ್ಗೆ ವಿವರ ನೀಡಿದರು.

1982ರಲ್ಲಿ ಪ್ರತಿಷ್ಠಾಪನೆಯ ಸಂದರ್ಭ 48 ಅಡಿ ಎತ್ತರದ ಬಾಹುಬಲಿಗೆ ಮೊದಲ ಮಸ್ತಕಾಭಿಷೇಕ ನಡೆಸಲಾಗಿತ್ತು. ಬಳಿಕ 1994, 2007ರಲ್ಲಿ ಮಸ್ತಕಾಭಿಷೇಕ ಕೈಗೊಳ್ಳಲಾಗಿತ್ತು. ಇದೀಗ 2019ರಲ್ಲಿ 4ನೇ ಬಾರಿಗೆ ಮಹಾಭಿಷೇಕವನ್ನು ವರ್ಧಮಾನ ಸಾಗರಜೀ ಮಹಾರಾಜ್, ಪುಷ್ಪದಂತ ಸಾಗರ್‍ಜೀ ಮಹಾರಾಜ್ ಮತ್ತು ಹದಿನೈದಕ್ಕೂ ಹೆಚ್ಚು ಮಂದಿ ದಿಗಂಬರ ಮುನಿಗಳ ನೇತೃತ್ವದಲ್ಲಿ ನೆರವೇರಿಸಲಾಗುವುದು. ಬದುಕು ಮತ್ತು ಬದುಕಲು ಬಿಡು ಎಂಬ ಧ್ಯೆಯ ವಾಕ್ಯದಡಿ ಲೋಕ ಕಲ್ಯಾಣಾರ್ಥವಾಗಿ ಕಾರ್ಯಕ್ರಮಗಳು ನಡೆಯಲಿವೆ ಎಂದರು.

ಸುಮಾರು 8 ದಿನಗಳ ಕಾಲ ನಡೆಯುವ ವಿವಿಧ ಕಾರ್ಯಕ್ರಮಗಳ ಬಗ್ಗೆ ಇನ್ನಷ್ಟೇ ದಿನಾಂಕ ನಿರ್ಧಾರವಾಗಬೇಕಾಗಿದೆ ಎಂದ ಅವರು ಈ ಬಾರಿಯ ಮಸ್ತಕಾಭಿಷೇಕದ ಸಂದರ್ಭದ ನೆನಪಿಗಾಗಿ ಜನ ಕಲ್ಯಾಣ ಕಾರ್ಯಕ್ರಮದ ಅಂಗವಾಗಿ ರಾಜ್ಯದ 200 ಕೆರೆಗಳ ಹೂಳೆತ್ತಿ ಅಭಿವೃದ್ಧಿ ಪಡಿಸಲಾಗುವುದು ಎಂದರು.

ಮಹಾ ಮಸ್ತಕಾಭಿಷೇಕ ನಡೆಯುವ ಬಗ್ಗೆ ರಾಜ್ಯದ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಮಾಹಿತಿ ನೀಡಲಾಗಿದ್ದು  ಸರಕಾರದ ಎಲ್ಲಾ ಇಲಾಖೆಗಳ ಸಂಪೂರ್ಣ ನೆರವನ್ನು ನೀಡುವುದಾಗಿ ಅವರು ಭರವಸೆ ನೀಡಿದ್ದಾರೆ. ಅಲ್ಲದೆ ಕ್ಷೇತ್ರದಲ್ಲಿ ಜನಸಂದಣಿ ಹೆಚ್ಚಾಗುತ್ತಿರುವುದರಿಂದ ರಿಂಗ್‍ರೋಡ್ ನಿರ್ಮಾಣದ ಬಗ್ಗೆ ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಅವರ ಬಳಿ ಚರ್ಚಿಸಲಾಗಿದ್ದು ಈ ಬಗ್ಗೆ ಶೀಘ್ರವಾಗಿ ಕಾರ್ಯಾನುಷ್ಠಗೊಳಿಸುವ ಭರವಸೆ ನೀಡಿದ್ದಾರೆ ಎಂದರು.

ಮಹಾಮಸ್ತಕಾಭಿಷೇಕದ ಯಶಸ್ಸಿಗೆ ಸೋಮವಾರ ಕ್ಷೇತ್ರದಲ್ಲಿ ರಾಜ್ಯದ ಶ್ರಾವಕ-ಶ್ರಾವಕಿಯರ ಮೊದಲ ಸಮಾಲೋಚನಾ ಸಭೆ ನಡೆಸಲಾಗಿದ್ದು ಕಾರ್ಕಳ ಜೈನ ಮಠದ ಲಲಿತಕೀರ್ತಿ ಭಟ್ಟಾರಕ ಸ್ವಾಮೀಜಿ, ಮೂಡಬಿದರೆ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರ ಉಪಸ್ಥಿತಿಯಲ್ಲಿ ರಾಜ್ಯ ಮಟ್ಟದ ಸಮಿತಿಯನ್ನು ರಚಿಸಲಾಗಿದೆ. ಸಮಿತಿಯಲ್ಲಿ ಸುರೇಂದ್ರ ಕುಮಾರ್ ಅವರು ಪ್ರಧಾನ ಸಂಚಾಲಕರಾಗಿದ್ದು, ಹರ್ಷೇಂದ್ರಕುಮಾರ್ ಅವರು ಸಂಚಾಲಕರಾಗಿ ಕಾರ್ಯನಿರ್ವಹಿಸಲಿದ್ದಾರೆ. ಮಹಾವೀರ ಅಜ್ರಿ ಹಾಗೂ ವೀರೂ ಶೆಟ್ಟಿಅವರು ಉಸ್ತುವಾರಿಯಾಗಿ ನೇಮಕ ಮಾಡಲಾಗಿದೆ ಎಂದು ಡಾ. ಹೆಗ್ಗಡೆ ವಿವರಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News